*ಗೋಣಿಕೊಪ್ಪಲು, ಆ. 3 : ಬಾಳೆಲೆ ಸಮೀಪದ ನಿಟ್ಟೂರು ಗ್ರಾಮದ ಖಾಸಗಿ ಕಾಫಿ ತೋಟದಲ್ಲಿ ಅಂದಾಜು 8 ವರ್ಷಪ್ರಾಯದ ಗಂಡು ಹುಲಿ ಮೃತಪಟ್ಟಿರುವದು ಗೋಚರಿಸಿದೆ. ಕಾಫಿ ತೋಟಕ್ಕೆ ಕಾರ್ಮಿಕರು ಹೋದಾಗ ಹುಲಿ ಸತ್ತು ಬಿದ್ದಿರುವದು ಕಂಡು ಬಂದಿದೆ. ಹುಲಿ ಸುಮಾರು 2 ದಿನಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ವೀರಾಜಪೇಟೆ ಡಿಸಿಎಫ್ ಡಾ.ಶಂಕರ್, ತಿತಿಮತಿ ಎಸಿಎಫ್ ಸೂರ್ಯಸೇನ್, ಮತ್ತಿಗೋಡು ಆರ್‍ಎಫ್‍ಒ ಕಿರಣ್, ಪೊನ್ನಂಪೇಟೆ ಆರ್‍ಎಫ್‍ಒ ಉತ್ತಯ್ಯ, ನಾಗರಹೊಳೆ ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕೃಷ್ಣ ಪಟಾಗರ್,ಕಲ್ಲಳ್ಳ ಆರ್‍ಎಫ್‍ಒ ಶಿವರಾಂ, ಭೇಟಿ ನೀಡಿ ಪರಿಶೀಲಿಸಿದರು. ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಶಂಕರ್ ಮಹಜರು ನಡೆಸಿದರು.

ಡಿಸಿಎಫ್ ಡಾ.ಶಂಕರ್ ಮಾತನಾಡಿ ನಾಗರಹೊಳೆ ಅರಣ್ಯದ ಅಂಚಿನಿಂದ 1ಕಿಮೀ ದೂರದಲ್ಲಿರುವ ಖಾಸಗಿ ಕಾಫಿ ತೋಟದಲ್ಲಿ ಹುಲಿ ಮೃತ ಪಟ್ಟಿದೆ. ಕಾರಣ ತಿಳಿದು ಬಂದಿಲ್ಲ. ಮೃತ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿನ ಬಗ್ಗೆ ಪ್ರಯೋಗಾಲಯದಿಂದ ವರದಿ ಬಂದ ಬಳಿಕ ಖಚಿತ ಮಾಹಿತಿ ತಿಳಿದು ಬರಲಿದೆ ಎಂದು ಹೇಳಿದರು. ಹುಲಿ ಮೃತಪಟ್ಟಿರುವ ಭಾಗದಲ್ಲಿಯೇ ಕಳೆದ ಎರಡು ತಿಂಗಳಿನಿಂದ ಮೂರು ಜಾನುವಾರುಗಳು ಬಲಿಯಾಗಿವೆ. ಆದರೆ ಮೃತಪಟ್ಟಿರುವ ಹುಲಿ ಜಾನುವಾರುಗಳ ಮೇಲೆ ಧಾಳಿ ಮಾಡುತ್ತಿತ್ತೇ ಎಂಬದು ಖಚಿತವಾಗಿಲ್ಲ.

-ಎನ್.ಎನ್.ದಿನೇಶ್