ವೀರಾಜಪೇಟೆ, ಸೆ. 13 : ಶತಮಾನಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಇತಿಹಾಸ ಪ್ರಸಿದ್ಧ ಗೌರಿ ಗಣೇಶನ ಮೂರ್ತಿಗಳ ವಿಸರ್ಜನೋತ್ಸವವು ತಾ. 15ರಂದು ಅದ್ಧೂರಿಯಿಂದ ನಡೆಸಲು ಪಟ್ಟಣದ 20 ಉತ್ಸವ ಸಮಿತಿಗಳು ಪೂರ್ವ ಸಿದ್ಧತೆ ನಡೆಸಿವೆ.ಕೊಡಗು ಜಿಲ್ಲೆಯಾದ್ಯಂತ ಅಧಿಕ ಭಕ್ತಾದಿಗಳು ವಿಸರ್ಜನೋತ್ಸವದಲ್ಲಿ ಪಾಲ್ಗೊಳ್ಳಲಿರುವದರಿಂದ ವೀರಾಜಪೇಟೆ ಪಟ್ಟಣ ಪಂಚಾಯಿತಿಯಿಂದ ಮೆರವಣಿಗೆ ವೀಕ್ಷಕರಿಗೆ, ಕುಡಿಯುವ ಶುದ್ಧ ನೀರಿನ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಿದೆ. ಇದೇ ಸಂದರ್ಭದಲ್ಲಿ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ, ಶುಕ್ರವಾರ ಬೆಳಗಿನ ಜಾವ ನಡೆಯುವ ಮೂರ್ತಿಗಳ ವಿಸರ್ಜನೋತ್ಸವಕ್ಕೆ ಪವಿತ್ರ ಗೌರಿಕೆರೆಯಲ್ಲಿ ಪಟ್ಟಣ ಪಂಚಾಯಿತಿಯಿಂದ ವಿದ್ಯುದೀಕರಣದೊಂದಿಗೆ ಎಲ್ಲಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಕೂತಂಡ ಸಚಿನ್ ಕುಟ್ಟಯ್ಯ ತಿಳಿಸಿದ್ದಾರೆ.
ಸಾಮೂಹಿಕ ಅದ್ಧೂರಿಯ ಮೆರವಣಿಗೆ ಇತರ ಮನರಂಜನೆಗಳು ವೀಕ್ಷಿಸುವ ವೀಕ್ಷಕರಿಗೆ ಹಾಗೂ ಭಕ್ತಾದಿಗಳಿಗೆ ತೊಂದರೆಯಾಗದಂತೆ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ, ಎಲ್ಲಾ ಮಂಟಪಗಳಿಗೆ ಕ್ರಮ ಸಂಖ್ಯೆಯನ್ನು ನೀಡಲಾಗಿದ್ದು, ಸರದಿ ಪ್ರಕಾರ ಮೆರವಣಿಗೆಯಲ್ಲಿ ಸಾಗಿ ಸರದಿ ಪ್ರಕಾರ ಮೂರ್ತಿಗಳ ವಿಸರ್ಜನೋತ್ಸವ ನಡೆಯಲಿದೆ ಎಂದು ಡಿ.ವೈಎಸ್ಪಿ. ನಾಗಪ್ಪ ತಿಳಿಸಿದ್ದಾರೆ.
ಗಣಪತಿ ಸೇವಾ ಟ್ರಸ್ಟ್ನ ಗಣಪತಿ ದೇವಸ್ಥಾನ (ಗಡಿಯಾರ ಕಂಬದ ಬಳಿ) ಜೈನರ ಬೀದಿಯ ಬಸವೇಶ್ವರ ದೇವಾಲಯದ ಗೌರಿ ಗಣೇಶ ಉತ್ಸವ ಸಮಿತಿ,ಗಾಂಧಿನಗರದ ಗಣಪತಿ ಸೇವಾ ಸಮಿತಿ, ತೆಲುಗರಬೀದಿಯ ಅಂಗಾಳಪರಮೇಶ್ವರಿ ದೇವಾಲಯದ ವಿನಾಯಕ ಯುವಕ ಭಕ್ತ ಮಂಡಳಿ,ಪಂಜರುಪೇಟೆಯ ಮಹಾಗಣಪತಿ ಸೇವಾ ಸಮಿತಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಪಂಜರುಪೇಟೆಯ ವಿನಾಯಕ ಸೇವಾ ಸಮಿತಿ, ಸುಣ್ಣದ ಬೀದಿ ಹರಿಕೇರಿಯ ದೊಡ್ಡಮ್ಮ ಚಿಕ್ಕಮ್ಮ ತಾಯಿ ವಿನಾಯಕ ಸೇವಾ ಸಮಿತಿ, ನೆಹರೂ ನಗರದ ನೇತಾಜಿ ಉತ್ಸವ ಸಮಿತಿ,ಚಿಕ್ಕಪೇಟೆಯ ಜಲದರ್ಶಿನಿ ವಿನಾಯಕ ಸೇವಾ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ದಖ್ಖನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ಸುಂಕದ ಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿ, ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ, ಮಲೆತಿರಿಕೆ ಬೆಟ್ಟದ ಕಣ್ಮಣಿ ಉತ್ಸವ ಸಮಿತಿ, ಕುಕ್ಲೂರು ವಿಘ್ನೇಶ್ವರ ಉತ್ಸವ ಸಮಿತಿ, ಪೌರಸೇವಾ ನೌಕರರ ಸಂಘದ ವಿನಾಯಕ ಉತ್ಸವ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಸೇವಾ ಸಮಿತಿ, ಗೌರಿಕೆರೆಯ ಗಣಪತಿ ಸೇವಾ ಸಮಿತಿ, ಮಲೆತಿರಿಕೆಬೆಟ್ಟದ ವರದ ವಿನಾಯಕ ಉತ್ಸವ ಸಮಿತಿಗಳು ಸಾಮೂಹಿಕ ವಿಸರ್ಜನೋತ್ಸವದಲ್ಲಿ ಪಾಲ್ಗೊಳ್ಳಲಿವೆ.
ಅದ್ಧೂರಿಯ ಮೆರವಣಿಗೆಯಲ್ಲಿ ವಿವಿಧ ವಿನೋದಾವಳಿಗಳು, ಸಂಚಾರಿ ಆರ್ಕೆಸ್ಟ್ರಾ, ಮೈಸೂರು ಬ್ಯಾಂಡ್, ಕೇರಳದ ಪೂಕೋಡ್ ಬ್ಯಾಂಡ್, ಹುಲಿವೇಷ
ಕರಡಿ ಮಜಲು, ಬಂಟ್ವಾಳದ ಕೀಲು ಕುದುರೆ, ಅನಾರ್ಕಲಿ, ವಿವಿಧ ಸ್ಥಬ್ದ ಚಿತ್ರಗಳು, ಕರಗ ಕುಣಿತ, ಕೊಡಗಿನ ವಾಲಗ ಭಾಗವಹಿಸಲಿವೆ.
ರಾತ್ರಿ 8ಗಂಟೆಗೆ ಇಲ್ಲಿನ ಗಡಿಯಾರ ಕಂಬದ ಬಳಿಯ ಗಣಪತಿ ದೇವಾಲಯದಲ್ಲಿ ಹಾಗೂ ಜೈನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ಸಿಡಿಮದ್ದು ಪ್ರದರ್ಶನ ಏರ್ಪಡಿಸಲಾಗಿದೆ.