ಮಡಿಕೇರಿ, ಜ. 16 : ಅಖಿಲ ಕರ್ನಾಟಕ ಹಿಂದೂ ದೇವಾಲಯ ಅರ್ಚಕರ ಆಗಮೀಕರ ಮತ್ತು ಉಪಾಧಿವಂತರ ಒಕ್ಕೂಟದ ವತಿಯಿಂದ ಜ.18 ರಂದು ಬೆಂಗಳೂರಿನ ಪುರಭವನದಲ್ಲಿ ರಾಜ್ಯ ಮಟ್ಟದ ಅರ್ಚಕರ ಬೃಹತ್ ಸಮಾವೇಶ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಆರ್.ಎಸ್. ಕಾಶೀಪತಿ ಬುಧವಾರ ನಡೆಯುವ ಸಮಾವೇಶದ ಕುರಿತು ಮಾಹಿತಿ ನೀಡಿದರು.

ಮುಜರಾಯಿ ಇಲಾಖೆಯ ದೇವಾಲಯಗಳು ಹಾಗೂ ಖಾಸಗಿ ದೇವಾಲಯಗಳ ಅರ್ಚಕರು ಸಮಾವೇಶದಲ್ಲಿ ಪಾಲ್ಗೊಂಡು ವಿವಿಧ ಬೇಡಿಕೆಗಳ ಬಗ್ಗೆ ಸರಕಾರದ ಗಮನ ಸೆಳೆಯಲಿದ್ದಾರೆ. ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಜರಾಯಿ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಎಸ್.ಲಮಾಣಿ ಅಧ್ಯಕ್ಷತೆ ವಹಿಸಲಿದ್ದು, ಅಖಿಲ ಕರ್ನಾಟಕ ಹಿಂದೂ ದೇವಾಲಯ ಅರ್ಚಕರ ಒಕ್ಕೂಟದ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಹೆಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಮಳ್ಳೂರು ಆನಂದ ರಾವ್, ಮಾಜಿ ಶಾಸಕ ಶ್ರೀಕಂಠಮೂರ್ತಿ, ಒಕ್ಕೂಟದ ಉಪಾಧ್ಯಕ್ಷ ಆರ್. ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಡಾ|| ಎಸ್. ಆರ್. ಶೇಷಾದ್ರಿ ಭಟ್ಟರ್ ಮತ್ತಿತರ ಗಣ್ಯರುಗಳು, ಪಂಡಿತರು ಅರ್ಚಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಕಾಶೀಪತಿ ತಿಳಿಸಿದರು.

ಮುಖ್ಯಮಂತ್ರಿಗಳಿಗೆ ಅರ್ಚಕ ವರ್ಗ ಮನವಿ ಪತ್ರವನ್ನು ನೀಡಲಿದೆ. ನಮ್ಮ ಹಕ್ಕಿಗಾಗಿ ಹೋರಾಟ ಮಾಡಬೇಕಾಗಿರುವದರಿಂದ ತಾಲೂಕು, ಜಿಲ್ಲೆ, ರಾಜ್ಯದ ಎಲ್ಲಾ ಅರ್ಚಕ ಸಮುದಾಯದವರು ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.

ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎದುರಿಸುತ್ತಿರುವ ದೌರ್ಜನ್ಯ ವೃತ್ತಿ ಅಭದ್ರತೆ, ಕಿರುಕುಳ, ಮಾನಸಿಕ ಹಿಂಸೆ ಇವುಗಳಿಂದ ರಕ್ಷಣೆ ಸಿಗುವಂತಾಗ ಬೇಕು. ಪ್ರಮುಖವಾಗಿ ದೇವಾಲಯದ ಅರ್ಚಕರುಗಳಿಗೆ ಸಿಗುವ ಮಂಗಳಾರತಿ ಯ ದಕ್ಷಿಣೆ, ತಟ್ಟೆ ಕಾಸು ಕಾಣಿಕೆ ಇವುಗಳಲ್ಲಿ ದೇವಾಲಯದ ಆಡಳಿತ ಮಂಡಳಿತ ಹಸ್ತಕ್ಷೇಪ ಮಾಡಬಾರದು, ಎಲ್ಲಾ ಜಾತಿಯ, ಧರ್ಮಿಯ ಜನಾಂಗೀಯ ವರ್ಗದ ದೇವಾಲಯ, ದೇವಸ್ಥಾನ, ಗುಡಿ ಧಾರ್ಮಿಕ ಕ್ಷೇತ್ರ ಸಾರ್ವತ್ರಿಕವಾಗಿ ಅನ್ವಯವಾಗುವಂತೆ ಸುತ್ತೋಲೆ ಹೊರಡಿಸಬೇಕು. ವಿಕಲ ಚೇತನ ಅರ್ಚಕರಿಗೆ ವೇತನ ಹೆಚ್ಚಳ ಇತ್ಯಾದಿ ಸೌಲಭ್ಯಗಳನ್ನು ಒದಗಿಸ ಬೇಕೆಂದು ಸಮಾವೇಶದಲ್ಲಿ ಒತ್ತಾಯಿಸ ಲಾಗುವದು ಎಂದು ಕಾಶೀಪತಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಶಲ ಅರ್ಚಕರ ಸಂಘದ ಅಧ್ಯಕ್ಷ ಪರಮೇಶ್ವರ ಭಟ್, ಸದಸ್ಯರಾದ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್ ಹಾಗೂ ನಾಗೇಂದ್ರ ಬಾಬು ಉಪಸ್ಥಿತರಿದ್ದರು.