ಮಡಿಕೇರಿ, ಜೂ. 16 : ನಗರದ ಜಿಲ್ಲಾ ಕಾರಾಗೃಹದಲ್ಲಿ ತಾ.18 ರಂದು ನೆರೆಹೊರೆ ಯುವಜನ ಸಂಸತ್ತು ಕಾರ್ಯಕ್ರಮ ನಡೆಯಲಿದೆ.
ನೆಹರೂ ಯುವ ಕೇಂದ್ರ, ಕೌಶಲ್ಯಾಭಿವೃದ್ಧಿ ಉದ್ಯಮಶೀಲಾ, ಯುವ ಹಾಗೂ ಕ್ರೀಡಾ ಸಚಿವಾಲಯ ಮತ್ತು ತಾಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಬೆಳಿಗ್ಗೆ 10.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಜಿ.ಪಂ. ಅಧ್ಯಕ್ಷ ಬಿ.ಎ.ಹರೀಶ್ ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಬಿ.ಜೋಯಪ್ಪ ಅಧ್ಯಕ್ಷತೆ ವಹಿಸಲಿದ್ದು,
ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾಲೂಕು ಪಂಚಾಯತ್ ಅಧ್ಯಕ್ಷ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಕಾರಾಗೃಹದ ಅಧೀಕ್ಷಕ ಮಹದೇವನಾಯ್ಕ ಪಾಲ್ಗೊಳ್ಳಲಿದ್ದಾರೆ.
ಉಪನ್ಯಾಸ ಕಾರ್ಯಕ್ರಮದಲ್ಲಿ ಕಾನೂನಿನ ಅರಿವು ಕುರಿತು ವಕೀಲ ಎಂ.ಎ.ನಿರಂಜನ್, ಸ್ವಚ್ಛ ಭಾರತ ಅಭಿಯಾನದ ಕುರಿತು ಸಾಮಾಜಿಕ ಕಾರ್ಯಕರ್ತ ಧನಂಜಯ ಆಗೋಳಿಕಜೆ ಹಾಗೂ ಕೇಂದ್ರ ಸರ್ಕಾರದ ಬ್ಯಾಂಕಿಂಗ್ ಯೋಜನೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಕುಮಾರ್ ಮಾತನಾಡಲಿದ್ದಾರೆ ಎಂದು ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.