ಆಲೂರು- ಸಿದ್ದಾಪುರ, ಜು. 21: ಸರಕಾರ ಕೊಡಗು ಜಿಲ್ಲೆಯಲ್ಲಿ ಮತ್ತೆ 3ನೇ ಬಾರಿಗೆ ಹೆಚ್ಚುವರಿ ಶಿಕ್ಷಕರನ್ನು ನಿಯೋಜನೆ ಮಾಡಲು ಹೊರಟಿರುವ ಕ್ರಮವನ್ನು ಕೊಡಗು ಜಿಲ್ಲಾ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿರೋಧಿಸುತ್ತಿದ್ದು, ತಾ.23ರಂದು ಮಡಿಕೇರಿ ಡಿಡಿಪಿಐ ಕಚೇರಿ ಎದುರು ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಎನ್. ಚೇತನ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೆ ಸರಕಾರ ಜಿಲ್ಲೆಯಲ್ಲಿ 45 ಮಂದಿ ಶಿಕ್ಷಕರನ್ನು ಹೆಚ್ಚುವರಿ ನೇಮಕ ಮಾಡಿದೆ, ಮತ್ತೆ 45 ಮಂದಿ ಶಿಕ್ಷಕರನ್ನು ಹೆಚ್ಚುವರಿ ನೇಮಕ ಮಾಡಲು ಹೊರಟಿದೆ, ಈ ಕ್ರಮದ ವಿರುದ್ಧ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನ್ಯಾಯಲಯದಲ್ಲಿ ಹೋರಾಟ ನಡೆಸಲು ತೀರ್ಮಾನಿಸಿದೆ. ಸರಕಾರ ಸರ್ಕಾರಿ ಶಾಲೆಗಳನ್ನು ಅಂಗನವಾಡಿ ಕೇಂದ್ರವನ್ನಾಗಿ ಮಾಡಲು ಹೊರಟಿದೆ, ಇಲ್ಲಿ ಕೇವಲ ನಾಮಕಾವಸ್ಥೆಗೆ ಶಿಕ್ಷಣವನ್ನು ನೀಡಿ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯದಂತೆ ಮಾಡಲು ಹುನ್ನಾರ ನಡೆಸಿದಂತೆ ಕಾಣುತ್ತಿದೆ, ರಾಜ್ಯದಲ್ಲಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಸರಕಾರ ಆರ್‍ಟಿಐ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿದೆ, ಪಠ್ಯಕ್ರಮದಲ್ಲೂ ಖಾಸಗಿ-ಸರಕಾರಿ ಶಾಲೆಗಳೆಂದು ವ್ಯತ್ಯಾಸ ಮಾಡುತ್ತಿದ್ದು, ಇದರಿಂದ ಈಗ ಬಡವರ್ಗದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುವಂತಾಗಿದೆ. ಸರಕಾರ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಮುಂದಾಗದಿರುವದು ಯಾಕೆಂದು ತಿಳಿಯುವದಿಲ್ಲ ಎಂದರು. ಈಗ 10 ಮಕ್ಕಳಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 21 ವಿಷಯಗಳನ್ನು ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 33 ವಿಷಯಗಳನ್ನು ಭೋದಿಸಲು ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವದು ಎಷ್ಟರಮಟ್ಟಿಗೆ ಸರಿ ಎಂದರು.

ಗೋಷ್ಠಿಯಲ್ಲಿ ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಟಿ.ಕೆ.ಬಸವರಾಜು, ವಲಯ ಉಪಾಧ್ಯಕ್ಷ ಸಿ.ಎಲ್.ಶಿವಕುಮಾರ್, ಗೌರವಾಧ್ಯಕ್ಷ ಎಸ್.ಎ.ಯೋಗೇಶ್ ಹಾಜರಿದ್ದರು.