ಮಡಿಕೇರಿ, ಜ. 6: ಕಳೆದ ಹನ್ನೊಂದು ತಿಂಗಳಿನಿಂದ ತಮ್ಮೊಂದಿಗೆ ಸಂಪರ್ಕದಲ್ಲೇ ಇಲ್ಲದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ಅವರಿಗೆ ತನ್ನನ್ನು ಪಕ್ಷದಿಂದ ಅಮಾನತು ಮಾಡುವ ಯಾವದೇ ಅಧಿಕಾರವಿಲ್ಲವೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬೆಟ್ಟಗೇರಿ ಕ್ಷೇತ್ರದ ಅಭ್ಯರ್ಥಿ ಸೂದನ ಎಸ್. ಈರಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ.ಪಂ ಹಾಗೂ ಜಿ.ಪಂ. ಚುನಾವಣೆಗಳಲ್ಲಿ ಪಕ್ಷದ ಚಿಹ್ನೆಯಡಿ ‘ಬಿ’ ಫಾರಂ ಪಡೆದು ಸ್ಪರ್ಧಿಸುವ ಅಭ್ಯರ್ಥಿಗೆ ವಿರುದ್ಧವಾಗಿ ಅದೇ ಪಕ್ಷದ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅದು ಬಂಡಾಯವೆನಿಸಿಕೊಳ್ಳುತ್ತದೆ. ಆದರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಈ ರೀತಿಯ ಪ್ರಕ್ರಿಯೆಗಳೇ ಇಲ್ಲ ಎನ್ನುವ ಸಾಮಾನ್ಯ ಜ್ಞಾನ ಕೂಡ ಇಲ್ಲದೆ ಇರುವದು ಬಿ.ಎಸ್. ರಮಾನಾಥ್ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಮೇಲೆ ರಮಾನಾಥ್ ಅವರಿಗೆ ಅಷ್ಟೊಂದು ಅಭಿಮಾನವಿದ್ದರೆ ನಾಪೋಕ್ಲು ಹಾಗೂ ನರಿಯಂದಡ ಕ್ಷೇತ್ರಗಳಲ್ಲಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಯಾಕೆ ಕಣಕ್ಕಿಳಿಸಲಿಲ್ಲವೆಂದು ಪ್ರಶ್ನಿಸಿದರು. ಮರಗೋಡುವಿನಲ್ಲಿ ಕೂಡ ವರ್ತಕರ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲವೆಂದು ಟೀಕಿಸಿದರು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎಂದರೆ, ಹುಲ್ಲು ಮೇಯುವ ಉಗ್ರಾಣವೆಂದು ಕೆಲವರು ಭಾವಿಸಿದ್ದಾರೆ. ಆದರೆ, ರೋಲ್‍ಕಾಲ್ ಮಾಡುವ ಪ್ರವೃತ್ತಿಯನ್ನು ಹೊಂದಿರದ ತನ್ನ ಬಗ್ಗೆ ಗ್ರಾಮದ ಕೃಷಿಕರಿಗೆ ಅಭಿಮಾನವಿರುವದರಿಂದ ತನ್ನ ಗೆಲುವು ಖಚಿತವೆಂದು ಈರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಕಳೆÉದ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಸೋಲಿಗೆ ಬಿ.ಎಸ್. ರಮಾನಾಥ್ ಕಾರಣರೆಂದು ಆರೋಪಿಸಿದ ಅವರು, ಪಕ್ಷದ ವರಿಷ್ಠರ ಏಕ ನೀತಿಯ ನಿರ್ಧಾರದಿಂದ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಅನುಭವಿಸಬೇಕಾಯಿತು ಎಂದು ಟೀಕಿಸಿದರು. ಗೋಷ್ಠಿಯಲ್ಲಿ ಗ್ರಾಮದ ಹಿರಿಯರಾದ ಮೇಲಾಟಂಡ ಭುವನೇಂದ್ರ ಹಾಗೂ ತಡಿಯಪ್ಪನ ಮೋಹನ ಉಪಸ್ಥಿತರಿದ್ದರು.