ವೀರಾಜಪೇಟೆ, ಡಿ. 16: ಶಾಂತಿ ಸೌಹಾರ್ದತೆಯ ಸುಭದ್ರ ಸಮಾಜವನ್ನು ಸರ್ವಜನಾಂಗ ಬಯಸುತ್ತದೆ. ಪರಸ್ಪರ ಪ್ರೀತಿ ಸಹಕಾರದಿಂದ ಇಂದಿನ ಬದುಕು ಸಾರ್ಥಕವಾಗಲಿದೆ ಎಂದು ಪೊನ್ನಂಪೇಟೆಯ ಸಂತ ಅಂತೋಣಿ ದೇವಾಲಯದ ಧರ್ಮಗುರು ಜಾಕೋಬ್ ಹೇಳಿದರು.

ನಾಗರಹೊಳೆ ಬಳಿಯ ನಾಣಚ್ಚಿ ಹಾಡಿ ಗದ್ದೆಯಲ್ಲಿ ಇಂದು ಜಾತ್ಯತೀತ ಜನಾತಾದಳ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮುಖ್ಯ ಮಂತ್ರಿ ಹಾಗೂ ಪಕ್ಷದ ರಾಜ್ಯದ ನಾಯಕ ಎಚ್.ಡಿ.ಕುಮಾರ ಸ್ವಾಮಿ ಅವರ 58ನೇ ಹುಟ್ಟು ಹಬ್ಬದ ಅಂಗವಾಗಿ 58 ಕೆ.ಜಿ.ತೂಕದ ಕೇಕ್ ಕತ್ತರಿಸಿ ಉದ್ಘಾಟಿಸಿದ ಜಾಕೋಬ್ ಅವರು ಸರ್ವ ಧರ್ಮೀಯರ ಗುರುಗಳ ಸಮ್ಮುಖದಲ್ಲಿ ಹುಟ್ಟು ಹಬ್ಬದ ಆಚರಣೆ ಜಾತ್ಯತೀತ ಸೌಹಾರ್ದತೆಯ ಸಂಕೇತವಾಗಿದೆ. ಹಾಡಿಯ ನಿವಾಸಿಗಳು, ಮಕ್ಕಳಿಗೂ ಇದರಲ್ಲಿ ಭಾಗವಹಿಸುವ ಅವಕಾಶ ದೊರೆತಿರು ವದಕ್ಕೆ ಇದು ಭಗವಂತನಿಗೂ ಪ್ರಿಯವಾಗಲಿದೆ ಎಂದರು.

ಹುಟ್ಟು ಹಬ್ಬ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಕೇತ್ ಪೂವಯ್ಯ ಅವರು ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಗ್ರಾಮ ಹಾಗೂ ಹಾಡಿ ವಾಸ್ತವ್ಯಕ್ಕೆ ಆದ್ಯತೆಯನ್ನು ನೀಡುವ ಮೂಲಕ ಗ್ರಾಮ, ಹಾಡಿ ಅಭಿವೃದ್ಧಿ ಯನ್ನು ಸ್ಮರಿಸಿ ಅವರ ಹುಟ್ಟು ಹಬ್ಬವನ್ನು ಕುಗ್ರಾಮವಾದ ನಾಣಚ್ಚಿ ಗದ್ದೆ ಹಾಡಿಯಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಕುಟ್ಟ ಗ್ರಾಮದ ವಿನಾಯಕ ದೇವಾಲಯದ ಪ್ರಧಾನ ಅರ್ಚಕ ಮಾಸಿಲಾ ಮಣಿ ಮಾತನಾಡಿ, ಹಾಡಿಯಲ್ಲಿ ಜನ ನಾಯಕನ ಜನ್ಮ ದಿನೋತ್ಸವವನ್ನು ಆಚರಿಸುತ್ತಿರುವದು ಪ್ರತಿಯೊಬ್ಬರಿಗೂ ಅಚ್ಚರಿ ಮೂಡಿಸಿದೆ. ಸಮಾಜದಲ್ಲಿ ಪ್ರತಿಯೊಬ್ಬರು ಮೇಲು ಕೀಳೆನ್ನದೆ ಸಮಾನತೆಯಿಂದ ಸುಖಿ ಜೀವನ ನಡೆಸುವಂತಾಗಬೇಕು. ಇದಕ್ಕೆ ಭಗವಂತನ ಕೃಪೆಯು ಇರುತ್ತದೆ. ಇದು ಹಾಡಿಯಲ್ಲಿ ಸಮಾರಂಭ ಹಮ್ಮಿಕೊಂಡಿರುವದಕ್ಕೆ ಸಾಕ್ಷಿ ಎಂದರು.

ವೀರಾಜಪೇಟೆಯ ಮದೀನ ಮಸೀದಿಯ ಮುಖ್ಯಸ್ಥ ಮನ್ಸೂರ್ ಅಹಮ್ಮದ್ ಅವರು ಅತಿಥಿಯಾಗಿ ಆಗಮಿಸಿ ಇಂದಿನ ಸಮಾಜದಲ್ಲಿ ರಾಜಕೀಯ ರಹಿತವಾಗಿ ಜಾತ್ಯತೀತೆ ಎನ್ನುವ ಮೌಲ್ಯಕ್ಕೆ ಸಾಕ್ಷಿ ಸಂಕೇತ್ ಪೂವಯ್ಯ. ಅವರು ಸಮಾನತೆಯ ದೃಷ್ಟಿಯಲ್ಲಿ ಹಾಡಿಯಲ್ಲಿ ಸಮಾರಂಭವನ್ನು ಏರ್ಪಡಿಸಿರುವದು ಹಾಡಿಯ ಮಕ್ಕಳು ಮಹಿಳೆಯರು ಮಹನೀಯರು ಭಾಗವಹಿಸು ವಂತಾಗಿದೆ ಎಂದು ಹೇಳಿದರು.

ಸಮಾರಂಭವನ್ನುದ್ದೇಶಿಸಿ ಪಕ್ಷದ ಜಿಲ್ಲಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸುರೇಶ್, ಪಕ್ಷದ ತಾಲೂಕು ಸಮಿತಿ ಅಧ್ಯಕ್ಷ ಮನಿಯಪಂಡ ಸಿ. ಬೆಳ್ಳಿಯಪ್ಪ, ಕೊಟ್ರಮಾಡ ನಳಿನಿ ರಮೇಶ್, ತೀತಿರ ಮಂದಣ್ಣ, ಪಟ್ಟಣ ಪಂಚಾಯಿತಿ ಹಿರಿಯ ಸದಸ್ಯ ಎಸ್.ಎಚ್.ಮತೀನ್ ರಾಜ್ಯ ಸಮಿತಿ ಸದಸ್ಯ ಎಂ.ವಿ. ಸುಬ್ರಮಣಿ, ತೀತಿರ ಮಂದಣ್ಣ ಎಚ್.ಜಿ. ಗೋಪಾಲ್,ಹಾಡಿಯ ಕಲಾ ಪ್ರವೀಣ ಜೆ.ಕೆ.ರಮೇಶ್ ಮಾತನಾಡಿದರು.

ಕುಟ್ಟ ವಿಭಾಗದ ಪಕ್ಷದ ಮುಖಂಡ ಪಿ.ವಿ.ಪ್ರವೀಣ್, ಅಶ್ರಫ್ ಆಲಿ, ಬೋಸ್, ಹಾಡಿ ಮುಖ್ಯಸ್ಥರು ಗಳಾದ ಜೆ.ಕೆ.ದಾಸಪ್ಪ, ಜೆ.ಕೆ.ತಿಮ್ಮ, ಜೆ.ಕೆ.ಕಾಳ, ರಾಮಕೃಷ್ಣ, ಜೆ.ಕೆ ಸೋಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಮಾರಂಭದಲ್ಲಿ ಹಾಡಿಯ ನೃತ್ಯ, ಕಲೆ, ಪ್ರತಿಭೆಗಳಿಗೆ ಹಾಗೂ ಇತರ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಾಗಿ ಮಕ್ಕಳು ಹಾಡಿಯ ಮುಖ್ಯಸ್ಥರುಗಳು ಸೇರಿದಂತೆ ಒಟ್ಟು 58ಮಂದಿಗೆ ಪ್ರಶಸ್ತಿ ಪತ್ರ, ಪದಕಗಳನ್ನು ನೀಡಿ ಸನ್ಮಾನಿಸ ಲಾಯಿತು. ಸಮಾರಂಭಕ್ಕೆ ಮೊದಲು ಸಂಕೇತ್ ಪೂವಯ್ಯ ಅವರು ನಾಣಚ್ಚಿ ಗದ್ದೆ ಹಾಡಿಯ ನಿವಾಸಿಗಳು ಪೂಜಿಸುವ ಹಾಗೂ ಶತಮಾನಗಳ ಇತಿಹಾಸ ಹೊಂದಿರುವ ದೈವ ಮಾನವ ಅಜ್ಜಯ್ಯನಿಗೆ ಪೂಜೆ ಸಲ್ಲಿಸಿದ ನಂತರ ಕುಮಾರಸ್ವಾಮಿ ಹುಟ್ಟು ಹಬ್ಬಕ್ಕೆ ಚಾಲನೆ ನೀಡಿದರು.

ಸಮಾರಂಭದ ನಂತರ ರಮೇಶ್ ನೇತೃತ್ವದಲ್ಲಿ ಹಾಡಿಯ ಮಕ್ಕಳಿಂದ ವಿಶಿಷ್ಠ ರೀತಿಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ಅಧಿಕ ಸಂಖ್ಯೆಯಲ್ಲಿ ಹಾಡಿಯ ಮಕ್ಕಳು ಮಹಿಳೆಯರು, ಪುರುಷರು ಭಾಗವಹಿಸಿದ್ದರು. ಈ ಸಂದರ್ಭ ಸಂಕೇತ್ ಪೂವಯ್ಯ ಅವರು 150ಕ್ಕೂ ಅಧಿಕ ಮಕ್ಕಳಿಗೆ ಭೂರೀ ಭೋಜನವನ್ನು ಬಡಿಸಿದರು.