ಸೋಮವಾರಪೇಟೆ, ಸೆ.17: ಅಭೂತಪೂರ್ವ ಜನ ಬೆಂಬಲ ದೊಂದಿಗೆ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ 66ನೇ ಹುಟ್ಟು ಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ಹಾಗೂ ಬೇಳೂರು ವೃದ್ಧಾಶ್ರಮದ ವೃದ್ಧರಿಗೆ ಕಂಬಳಿ ವಿತರಿಸಿ ಅವರು ಮಾತನಾಡಿದರು.
ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ದೇಶ ಅಭಿವೃದ್ದಿ ಪಥದತ್ತ ದಾಪುಗಾಲಿ ಡುತ್ತಿದೆ. ಪ್ರಧಾನಿಗಳ ಕಾರ್ಯವೈಖರಿ ಯಿಂದ ಇಡೀ ಜಗತ್ತೇ ಭಾರತದತ್ತ ನೋಡುವಂತೆ ಮಾಡಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲೂ ಭಾರತ ಹೆಚ್ಚಿನ ಮನ್ನಣೆ ಗಳಿಸುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಮೋದಿಯವರು ಈ ದೇಶವನ್ನು ಇನ್ನಷ್ಟು ಅಭಿವೃದ್ದಿಯತ್ತ ಕೊಂಡೊಯ್ಯಲಿ ಎಂದು ಆಶಿಸಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನು ಮುತ್ತಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ತಾಲೂಕು ಕಾರ್ಯದರ್ಶಿ ಮನುಕುಮಾರ್ ರೈ, ನಗರ ಅಧ್ಯಕ್ಷ ಸೋಮೇಶ್, ಸಹಕಾರಿ ಬ್ಯಾಂಕ್ ಉಪಾಧ್ಯಕ್ಷೆ ಸುಮಾ ಸುದೀಪ್, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.