ಮಡಿಕೇರಿ, ಆ. 15: ಜನರ ಸಹಭಾಗಿತ್ವ ಹಾಗೂ ಸಲಹೆ ಮಾರ್ಗದರ್ಶನ ಆಧರಿಸಿ ಗ್ರಾಮಗಳನ್ನು ಅಭಿವೃದ್ದಿ ಪಡಿಸುವ ನಮ್ಮ ಗ್ರಾಮ-ನಮ್ಮ ಯೋಜನೆ ಕುರಿತು ಭವಿಷ್ಯದ ಯೋಜನೆ ಕುರಿತು ಮುನ್ನೋಟದ ದಾಖಲೆ ಪುಸ್ತಕ ಆಗಸ್ಟ್ 20 ರಂದು ಬಿಡುಗಡೆಯಾಗಲಿದೆ ಎಂದು ಜಿ.ಪಂ.ಸಿಇಓ ಚಾರುಲತಾ ಸೋಮಲ್ ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕ ಅನುಷ್ಠಾನಗೊಳಿಸುತ್ತಿರುವ ವಿಶಿಷ್ಟ ಯೋಜನೆ ಇದಾಗಿದೆ, ನಮ್ಮ ಹಳ್ಳಿ ಹೇಗಿರಬೇಕು, ಹೇಗೆ ಪ್ರಗತಿ ಹೊಂದಬೇಕು ಎನ್ನುವ ಪ್ರಸ್ತಾವನೆಯನ್ನು ಸ್ಥಳೀಯರಿಂದಲೇ ಪಡೆದುಕೊಂಡು ಮುಂದುವರಿಯುವದು ಇದರ ವಿಶೇಷವಾಗಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳು ಈಗಾಗಲೇ ಈ ಪ್ರಕ್ರಿಯೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಇತ್ತೀಚೆಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ್ ಅವರು ತಿಳಿಸಿದಂತೆ ಕ್ವಿಟ್ ಇಂಡಿಯಾ ಚಳುವಳಿ ಹಾಗೂ ರಾಜೀವ್ಗಾಂಧಿ ಜನ್ಮ ದಿನ ಪ್ರಯುಕ್ತ ನಡೆಸುವ ಸದ್ಭಾವನ ದಿನದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ತರಲಾಗುತ್ತಿದೆ ಎಂದು ಪ್ರಸ್ತಾಪಿಸಿರುತ್ತಾರೆ.
ಗ್ರಾಮ ಸ್ವರಾಜ್ ವಿಧೇಯಕದಡಿ ಹಳ್ಳಿಗಳ ಪ್ರಗತಿ ಸಂಬಂಧ ಗ್ರಾಮ ಸಭೆಯಲ್ಲಿ ಜನರಿಂದ ಸಲಹೆ ಸ್ವೀಕರಿಸಿ ಅದನ್ನು ಗ್ರಾಮ ಪಂಚಾಯಿತಿ ಸಭೆಯಲ್ಲಿ ಅಂಗೀಕರಿಸಲಾಗುವದು. 70ಕ್ಕೂ ಹೆಚ್ಚು ಜನರು ಮಾಹಿತಿ ತಿಳಿಸಲಿದ್ದಾರೆ. ರಸ್ತೆ, ಚರಂಡಿ ಅಭಿವೃದ್ದಿ ಬಗ್ಗೆ ಕೇಳುವದು ಸಾಮಾನ್ಯ, ಆದರೆ ಊಹೆಗೂ ನಿಲುಕದಂತೆ ಕೆಲವು ವಿಚಾರಗಳನ್ನು ಜನ ಸಾಮಾನ್ಯರು ವೈಯಕ್ತಿಕವಾಗಿ ಹಂಚಿಕೊಳ್ಳ ಬಯಸುತ್ತಾರೆ. ಈ ಯೋಜನೆ 5 ವರ್ಷದ ಮುನ್ನೋಟದಿಂದ ಕೂಡಿರುತ್ತದೆ.
ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳಿಂದ ಬರುವ ನಮ್ಮ ಗ್ರಾಮ ನಮ್ಮ ಯೋಜನೆಯ ಪ್ರಸ್ತಾವನೆಯನ್ನು ಪಂಚತಂತ್ರ ತಂತ್ರಾಂಶದ ಮೂಲಕ ಆಗಸ್ಟ್ 19 ರಂದು ಇಲಾಖಾ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗುವದು. ಬಳಿಕ ಸದ್ಭಾವನ ದಿವಸದಂದು ಆಗಸ್,್ಟ 20 ರಂದು ಈ ಕುರಿತು ದಾಖಲೆ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಹಂತ ಹಂತವಾಗಿ ಈ ಯೋಜನೆ ಜಾರಿಯಾಗಲಿದ್ದು ಇದರ ಮೇಲುಸ್ತುವಾರಿಯನ್ನು ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು ನೋಡಿಕೊಳ್ಳುವದು.
ಅಪ್ಲೋಡ್ ಮಾಡಲು ಈಗಾಗಲೇ ವೆಬ್ಸೈಟ್ನ್ನು ತೆರೆಯಲಾಗಿದ್ದು, ಈ ಸಂಬಂಧವಾಗಿ 104 ಗ್ರಾಮ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳಿಗೆ ಈ ಬಗ್ಗೆ ಪಂಚತಂತ್ರದ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ.