ಕುಶಾಲನಗರ, ಜ. 22: ಕಾವೇರಿ ನದಿ ತಟದ ಗ್ರಾಮ ಪಟ್ಟಣಗಳ ನಾಗರಿಕರು ಈ ಬಾರಿ ಕುಡಿಯುವ ನೀರಿನ ಬವಣೆ ಎದುರಿಸುವ ಆತಂಕ ಎದುರಾಗಿದೆ. ಕಳೆದ ಬಾರಿ ನದಿ ಪಾತ್ರಗಳಲ್ಲಿ ಸುರಿದ ಮಳೆ ಪ್ರಮಾಣದ ಕೊರತೆ ನದಿ ಹರಿವಿನ ಪ್ರಮಾಣ ಕ್ಷೀಣಿಸಿರುವದು ಇದಕ್ಕೆ ಮುನ್ಸೂಚನೆ ನೀಡಿದೆ ಎನ್ನಬಹುದು. ಜನವರಿ ಆರಂಭದಲ್ಲಿಯೇ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಿಸಿದ್ದು ಮುಂದಿನ ದಿನಗಳಲ್ಲಿ ಈ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರು ಒದಗಿಸಲು ಸ್ಥಳೀಯ ಆಡಳಿತಗಳು ಹೆಣಗಾಡಬೇಕಾದ ಪರಿಸ್ಥಿತಿಯ ಮುನ್ಸೂಚನೆಗಳು ಕಂಡುಬರುತ್ತಿವೆ.

ಕುಶಾಲನಗರ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ಜನತೆಗೆ ದಿನನಿತ್ಯ 40 ಲಕ್ಷ ಲೀಟರ್ ಪ್ರಮಾಣದ ನೀರಿನ ಅವಶ್ಯಕತೆಯಿದ್ದು, ಈಗಾಗಲೇ ಎರಡು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಪಂಪ್‍ಗಳ ಮೂಲಕ ನೀರು ಹಾಯಿಸಲು ನದಿಯನ್ನೇ ಅವಲಂಭಿಸುತ್ತಿದ್ದು, ಇದು ಕೂಡ ನದಿ ನೀರಿನ ಹರಿವಿನ ಕ್ಷೀಣತೆಗೆ ಪ್ರಮುಖ ಕಾರಣವಾಗಿದೆ.

ಭಾಗಮಂಡಲದಿಂದ ಕುಶಾಲನಗರ ತನಕ ನದಿಯುದ್ದಕ್ಕೂ ಸಾವಿರಕ್ಕೂ ಅಧಿಕ ಸಂಖ್ಯೆಯ ಭಾರೀ ಅಶ್ವಶಕ್ತಿಯ ಮೋಟಾರ್ ಪಂಪುಗಳು ಹಗಲು ರಾತ್ರಿಯೆನ್ನದೆ ನೀರೆತ್ತಿ ಶುಂಠಿ, ಕಾಫಿ ಮತ್ತಿತರ ಕೃಷಿಗಳಿಗೆ ನೀರು ಹಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನೊಂದೆಡೆ ಕುಶಾಲನಗರ ಸಮೀಪ ಬೈಚನಹಳ್ಳಿ ಬಳಿ ಕಾವೇರಿ ನದಿಯಿಂದ ಪಿರಿಯಾಪಟ್ಟಣ ನಗರಕ್ಕೆ 75 ಹೆಚ್‍ಪಿಯ ಮೋಟಾರ್‍ಗಳ ಮೂಲಕ ಕುಡಿವ ನೀರು ಸರಬರಾಜಾಗುತ್ತಿದೆ. ಕುಶಾಲನಗರ ಪಟ್ಟಣಕ್ಕೆ ಕೂಡ ಕಾವೇರಿ ನದಿ ನೀರನ್ನೇ ಅವಲಂಭಿಸಬೇಕಾಗಿದೆ.

ನೀರಿನ ಕೊರತೆ ಹಿನ್ನೆಲೆ ಕುಡಿಯುವ ನೀರನ್ನು ಪೋಲು ಮಾಡದಂತೆ ಪಟ್ಟಣದ ಜನತೆಗೆ ಅರಿವು ಮೂಡಿಸಲಾಗುತ್ತಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. ಯಾವದೇ ಸಂದರ್ಭ ಕಲುಷಿತ ನೀರು ಅಥವಾ ತ್ಯಾಜ್ಯವನ್ನು ನದಿಗೆ ಬಿಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಪಟ್ಟಣದಲ್ಲಿ ಹಲವು ಕಟ್ಟಡಗಳ ಮಾಲೀಕರಿಗೆ ಈ ಸಂಬಂಧ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಾಲಿನ ಮಾರ್ಚ್ ತಿಂಗಳಲ್ಲಿ ನೀರಿನ ಅಭಾವ ತಲೆದೋರಲಿದೆ ಎಂದು ಕರ್ನಾಟಕ ರಾಜ್ಯ ನೀರು ಸರಬರಾಜು ಮಂಡಳಿಯ ಸಹಾಯಕ ಅಭಿಯಂತರ ಆನಂದ್ ಮುನ್ಸೂಚನೆ ನೀಡಿದ್ದು ಈ ನಿಟ್ಟಿನಲ್ಲಿ ಸಂಬಂಧಿಸಿದ ಪಂಚಾಯ್ತಿ ಆಡಳಿತ ಮಂಡಳಿ ಗಮನಕ್ಕೆ ತರಲಾಗಿದೆ ಎಂದಿದ್ದಾರೆ. ಇದರೊಂದಿಗೆ ಶಾಶ್ವತವಾಗಿ ಕುಶಾಲನಗರ ಪಟ್ಟಣ ಮತ್ತು ಮುಳ್ಳುಸೋಗೆ ವ್ಯಾಪ್ತಿಯ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಾರಂಗಿ ಜಲಾಶಯದಿಂದ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿದೆ.

8 ಕಿ.ಮೀ. ಅಂತರದ ಈ ಯೋಜನೆ ಅಂದಾಜು 11 ರೂ. ಕೋಟಿ ವೆಚ್ಚದಲ್ಲಿ ಪ್ರಸ್ತಾವನೆ ಕಳುಹಿಸಲಾಗಿದ್ದು, 2017-18 ರ ಬಜೆಟ್‍ನಲ್ಲಿ ಈ ಬಗ್ಗೆ ಅನುಮೋದನೆ ದೊರಕುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಯೋಜನೆಗೆ ಶೇ. 95 ರಷ್ಟು ಸರಕಾರದ ಅನುದಾನ, ಸ್ಥಳೀಯ ಆಡಳಿತದಿಂದ ಶೇ. 5 ರಷ್ಟು ಹಣ ನೀಡಬೇಕಾಗಿದೆ ಎಂದಿದ್ದಾರೆ.

ನೀರಿನ ಹರಿವಿನ ಪ್ರಮಾಣ ನದಿಯಲ್ಲಿ ಕ್ಷೀಣಗೊಂಡಿದ್ದು ಇದೇ ರೀತಿ ಮುಂದುವರೆದಲ್ಲಿ ನೀರಿನ ಅಭಾವದೊಂದಿಗೆ ನದಿ ನೀರು ಕಲುಷಿತಗೊಂಡು ಮಾಲಿನ್ಯಗೊಳ್ಳುವ ಸಂಭವ ಕೂಡ ಅಧಿಕವಾಗಿದೆ. ಈಗಾಗಲೇ ನದಿ ನೀರಿನ ಗುಣಮಟ್ಟ ‘ಸಿ’ ದರ್ಜೆಗೆ ಇಳಿದಿದ್ದು ನೇರವಾಗಿ ನೀರಿನ ಬಳಕೆ ಕೂಡ ಅಸಾಧ್ಯ ಎನ್ನುವ ಅಧಿಕೃತ ವರದಿ ಹೊರಬಿದ್ದಿದೆ. ಜನತೆ ಜಾಗೃತೆ ವಹಿಸದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹಬ್ಬುವ ಸಾಧ್ಯತೆ ಅಧಿಕವಾಗಿದ್ದು ನದಿ ತಟಗಳಲ್ಲಿ ಇರುವ ಮಾಂಸ ಮಾರುಕಟ್ಟೆಗಳನ್ನು ಹಾಗೂ ಅನಧಿಕೃತ ಕಾರ್ಖಾನೆಗಳನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಮುಖೇನ ಎಚ್ಚರಿಸಿದೆ.

ಕುಶಾಲನಗರದ ಸುತ್ತಮುತ್ತ ನದಿ ತಟದ ಗ್ರಾಮಗಳಾದ ಕೊಪ್ಪ, ಗುಡ್ಡೆಹೊಸೂರು ಮತ್ತಿತರ ಗ್ರಾಮಗಳಲ್ಲಿ ಕೊಳವೆ ಬಾವಿಯಲ್ಲಿ ಕೂಡ ಅಂತರ್ಜಲ ಕುಸಿದಿದ್ದು ಈ ಮೂಲಕ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಕೊಪ್ಪ ಗ್ರಾಮದಲ್ಲಿ ಕಳೆದ 3 ದಶಕಗಳಿಂದ ಕುಡಿವ ನೀರಿಗೆ ಯಾವದೇ ರೀತಿಯ ಸಮಸ್ಯೆ ಕಂಡುಬರದಿದ್ದರೂ ಪ್ರಸಕ್ತ ಸಾಲಿನಲ್ಲಿ ಕೊಳವೆ ಬಾವಿಗಳು ಅಂತರ್ಜಲದ ಕೊರತೆ ಎದುರಿಸುತ್ತಿದೆ.

ಪರ್ಯಾಯವಾಗಿ ನೂತನ ಕೊಳವೆ ಬಾವಿಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಿ ರಾಮಣ್ಣ ಮಾಹಿತಿ ನೀಡಿದ್ದಾರೆ.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುವದರೊಂದಿಗೆ ಕುಡಿವ ನೀರಿನ ಮತ್ತು ಸ್ವಚ್ಛತೆ ಅಭಾವ ಸೃಷ್ಠಿಯಾಗುವದು ಖಚಿತವಾಗಿದ್ದು ಈ ಬಗ್ಗೆ ಸ್ಥಳೀಯ ಆಡಳಿತಗಳು ಸಮರ್ಪಕ ಯೋಜನೆ ರೂಪಿಸಬೇಕಾಗಿದೆ.

ಒಟ್ಟಾರೆ ಈ ಸಾಲಿನಲ್ಲಿ ನೀರಿನ ಕ್ಷಾಮ ಎದುರಾಗುವ ಆತಂಕ ಎಲ್ಲೆಡೆ ತಲೆದೋರಿದ್ದು ಇದನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಬೇಕಾಗಿದೆ. ಅದಕ್ಕೂ ಮೊದಲು ನೀರು ಪೋಲಾಗದಂತೆ ಎಚ್ಚರವಹಿಸುವದು ಮಾತ್ರ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.

- ಚಂದ್ರಮೋಹನ್