ಕುಶಾಲನಗರ, ಜ. 10: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೂಲಕ ನದಿ ತಟದಲ್ಲಿ ಮಾಂಸ ಮಳಿಗೆಗಳನ್ನು ತೆರೆಯಲು ಅಕ್ರಮವಾಗಿ ಅನುಮತಿ ನೀಡುವದ ರೊಂದಿಗೆ ಜೀವನದಿ ಕಾವೇರಿಯನ್ನು ಸಂಪೂರ್ಣ ಮಲಿನಗೊಳಿಸುತ್ತಿರುವ ಚಟುವಟಿಕೆಗಳು ಹಲವೆಡೆ ಕಂಡುಬಂದಿರುವದರೊಂದಿಗೆ ಮಲಿನ ನೀರು ಸೇವಿಸಿ ನದಿ ತಟದ ಜನತೆಯ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವದು ಗೋಚರಿಸಿದೆ.
ಜಿಲ್ಲೆಯ ನೆಲ್ಲಿಹುದಿಕೇರಿ, ಗುಡ್ಡೆ ಹೊಸೂರು, ಕೂಡಿಗೆ, ಕೂಡು ಮಂಗಳೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ನಿಯಮ ಮೀರಿ ಮಾಂಸ ಮಾರುಕಟ್ಟೆಗಳಿಗೆ ಅವಕಾಶ ಕಲ್ಪಿಸಿದ್ದು, ನದಿ ನೀರು ಮಾಲಿನ್ಯಗೊಳ್ಳಲು ಪ್ರಮುಖ ಕಾರಣವಾಗಿವೆ.
ಕೋಳಿ, ಹಂದಿ, ಆಡು, ಮೀನು ಮತ್ತಿತರ ಮಾಂಸಗಳ ತ್ಯಾಜ್ಯಗಳು, ರಕ್ತ ಮತ್ತಿತರ ಕಲುಷಿತ ವಸ್ತುಗಳು ನೇರವಾಗಿ ನದಿ ಸೇರುತ್ತಿರುವ ಬಗ್ಗೆ ಹಲವು ಬಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ದೂರಿದರೂ ಪ್ರಯೋಜನವಾಗುತ್ತಿಲ್ಲ ಎನ್ನುವದು ಈ ವ್ಯಾಪ್ತಿಯ ಸ್ಥಳೀಯ ನಿವಾಸಿಗಳ ಆರೋಪವಾಗಿದೆ. ಇಂತಹ ಘಟನೆಗಳೊಂದಿಗೆ ದಿನನಿತ್ಯ ಕಾನೂನು ಉಲ್ಲಂಘನೆ ಯಾಗುತ್ತಿದ್ದರೂ ಮೌನವಹಿಸಿರುವ ಅಧಿಕಾರಿಗಳ ಮೇಲೆ ನಾಗರಿಕರು ಸಂಶಯ ಪಡುವಂತಹ ಪರಿಸ್ಥಿತಿ ಎದುರಾಗಿದೆ.
ಕುಶಾಲನಗರ ಮಡಿಕೇರಿ ಹೆದ್ದಾರಿ ಬದಿಯಲ್ಲಿ ಗಂಧದಕೋಟೆ ಬಳಿ ಗುಡ್ಡೆಹೊಸೂರು ಗ್ರಾ.ಪಂ. ಅಧೀನದಲ್ಲಿ ಮೀನು ಮಾರುಕಟ್ಟೆ ಮತ್ತು ಮಾಂಸ ಮಾರುಕಟ್ಟೆಗೆ ಅವಕಾಶ ಕಲ್ಪಿಸಿದ್ದು ಇಲ್ಲಿನ ಪರಿಸರ ಸಂಪೂರ್ಣ ವಾಸನಾ ಮಯವಾಗಿದೆ. ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಕೆಳಭಾಗದ ಗದ್ದೆಗೆ ಹರಿಸುತ್ತಿರುವದು ಸಾಮಾನ್ಯ ದೃಶ್ಯವಾಗಿದೆ. ಇದೇ ರೀತಿ ನೆಲ್ಲಿಹುದಿಕೇರಿ ಬಳಿ ಮೀನು ಮಾರುಕಟ್ಟೆಯಿಂದ ತ್ಯಾಜ್ಯಗಳು ಎಲ್ಲೆಂದರಲ್ಲಿ ಎಸೆದು ಪರಿಸರ ಸಂಪೂರ್ಣ ಮಾಲಿನ್ಯಗೊಳ್ಳುತ್ತಿದ್ದರೂ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನವಹಿಸಿರುವದು ಜನರಲ್ಲಿ ಅಚ್ಚರಿ ಮೂಡಿಸಿದೆ.
ಕೂಡುಮಂಗಳೂರು ಮತ್ತು ಕೂಡಿಗೆ ಪಂಚಾಯಿತಿಯ ಆಡಳಿತ ವ್ಯವಸ್ಥೆ ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಪಂಚಾಯಿತಿಗೆ ಲಕ್ಷಗಟ್ಟಲೆ ಆದಾಯಗಳಿಸುವ ಭರದಲ್ಲಿ ಹಾರಂಗಿ ನದಿಯ ಸೇತುವೆ ಬಳಿ ಎರಡು ಮಾಂಸ ಮಳಿಗೆಗಳಿಗೆ ಅನುಮತಿ ಕಲ್ಪಿಸಿದ್ದು, ಇಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳು ನೇರವಾಗಿ ನದಿ ಪಾಲಾಗುತ್ತಿದೆ. ಇದೇ ನೀರನ್ನು ಕೆಳಭಾಗದ ಜನತೆ ಕುಡಿಯಲು ಬಳಸುವ ದುಸ್ಥಿತಿ ಒದಗಿದ್ದು, ಈ ವ್ಯಾಪ್ತಿಯ ನಾಗರಿಕರು ಹಲವು ರೋಗಗಳಿಗೆ ತುತ್ತಾಗುತ್ತಿರು ವದು ಇತ್ತೀಚಿನ ಬೆಳವಣಿಗೆಯಾಗಿದೆ.
ನದಿಗೆ ಇಳಿದು ಹೊರಬಂದಲ್ಲಿ ಇಡೀ ದೇಹದ ಭಾಗಗಳು ತುರಿಕೆ ಉಂಟಾಗುತ್ತಿದೆ ಎನ್ನುವದು ಸ್ಥಳೀಯ ನಾಗರಿಕ ಮಹದೇವ ಎಂಬವರ ಅಳಲಾಗಿದೆ.
ಕಲುಷಿತ ತ್ಯಾಜ್ಯ ದಿಂದ ನದಿ ನೀರು ಮಾಲಿನ್ಯಗೊಂಡು ನಂತರ ಕಾವೇರಿ ನದಿ ಸೇರಿ ಮಾಲಿನ್ಯಗೊಂಡ ನೀರನ್ನು ಕೆಳಭಾಗದ ಕಣಿವೆ, ಹೆಬ್ಬಾಲೆ, ಶಿರಂಗಾಲ ಜನತೆ ಕುಡಿಯಲು ಬಳಸುವ ದುಸ್ಥಿತಿ ಸೃಷ್ಟಿಯಾಗಿದೆ. ಈ ವ್ಯಾಪ್ತಿಯಲ್ಲಿ ಕೆಲವು ಕೈಗಾರಿಕಾ ಘಟಕಗಳಿಂದ ಹಾಗೂ ವಿದ್ಯಾಸಂಸ್ಥೆಗಳಿಂದ ನೇರವಾಗಿ ನದಿಗೆ ಕಲುಷಿತ ನೀರು ಹರಿಸುತ್ತಿರುವ ಬಗ್ಗೆಯೂ ದೂರು ಕೇಳಿಬರುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳು ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತ್ಯಾಜ್ಯ ಮಿಶ್ರಿತ ಮಾಲಿನ್ಯಗೊಂಡ ನೀರನ್ನೇ ಹೆಬ್ಬಾಲೆ ಬಳಿ ಪಂಪ್ ಮೂಲಕ ಹಲವು ಗ್ರಾಮಗಳಿಗೆ ಕುಡಿಯಲು ಸರಬರಾಜು ಮಾಡುವ ಯೋಜನೆಯಿದ್ದು, ಇದೇ ನೀರಿನ ಬಳಕೆ ಮಾಡುವದರೊಂದಿಗೆ ನಾಗರಿಕರು ದಿನನಿತ್ಯ ಆಸ್ಪತ್ರೆ ಸೇರುತ್ತಿರುವ ಪರಿಸ್ಥಿತಿ ಕೂಡ ಗೋಚರಿಸಿದೆ. ಬೇಸಿಗೆ ಅವಧಿಯಾದ ಹಿನ್ನೆಲೆ ನದಿ ನೀರಿನ ಹರಿವು ಬಹುತೇಕ ಕ್ಷೀಣಗೊಂಡಿದ್ದು ಕೆಲವೆಡೆ ನೀರಿನಿಂದ ಅಸಹನೀಯ ವಾಸನೆ ಕೂಡ ಹೊರ ಹೊಮ್ಮುತ್ತಿದೆ.
ಇತ್ತೀಚೆಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ದೂರಿನ ಹಿನ್ನೆಲೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ನೀರಿನ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಕ್ರಮಕೈಗೊಂಡಿದ್ದು ನಂತರ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತವಾಗಿ ಸೂಚನೆ ನೀಡಿ ಇಂತಹ ಮಾಂಸ ಮಾರುಕಟ್ಟೆಗಳನ್ನು ನದಿ ತಟದಿಂದ ತೆರವುಗೊಳಿಸಲು ನಿರ್ದೇಶನ ನೀಡಿದರೂ ಪಂಚಾಯಿತಿ ಅಧಿಕಾರಿಗಳು ಯಾವದೇ ರೀತಿಯ ಕ್ರಮಕ್ಕೆ ಮುಂದಾಗದಿರುವದು ಕಂಡುಬಂದಿದೆ. ಈ ಪಂಚಾಯಿತಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಲಿಖಿತವಾಗಿ ಕೋರಿರುವದಾಗಿ ತಿಳಿದುಬಂದಿದೆ.
ಈ ಹಿನ್ನೆಲೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸುವದಾಗಿ ಸ್ಥಳೀಯ ಸಂಘ-ಸಂಸ್ಥೆಯ ಪ್ರಮುಖರು ಎಚ್ಚರಿಸಿದ್ದಾರೆ.
- ಚಂದ್ರಮೋಹನ್