ಕುಶಾಲನಗರ, ಡಿ. 15: ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕಟ್ಟಡಗಳಿಂದ ನೇರವಾಗಿ ನದಿಗೆ ಕಲುಷಿತ ತ್ಯಾಜ್ಯ ಹರಿಸುವ ಸಂಬಂಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕಟ್ಟಡ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕುಶಾಲನಗರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ಪಂಚಾಯ್ತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡ ಪರಿಶೀಲನೆ ನಡೆಸಿದ ಸಂದರ್ಭ ಕಟ್ಟಡಗಳಿಂದ ಶೌಚಾಲಯ ತ್ಯಾಜ್ಯಗಳನ್ನು ಚರಂಡಿ ಮೂಲಕ ಹರಿಸುತ್ತಿರುವ 5 ಪ್ರಕರಣಗಳು ಕಂಡುಬಂದಿದ್ದು ಈ ಬಗ್ಗೆ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಶಾಲನಗರ ಪಟ್ಟಣದಲ್ಲಿ ಕೆಲವು ಕಟ್ಟಡಗಳಿಂದ ತ್ಯಾಜ್ಯಗಳನ್ನು ನೇರವಾಗಿ ನದಿಗೆ ಹರಿಸುತ್ತಿರುವದಾಗಿ ಸಾರ್ವಜನಿಕರಿಂದ ದೂರು ಬಂದ ಹಿನೆÀ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರು ತಮ್ಮ ಕಟ್ಟಡಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿರುವದಾಗಿ ಶ್ರೀಧÀರ್ ತಿಳಿಸಿದರು.
ಕಾವೇರಿ ನದಿ ಕಲುಷಿತಗೊಳ್ಳುತ್ತಿದ್ದು ನದಿ ಸಂರಕ್ಷಣೆ ನಿಟ್ಟಿನಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ವತಿಯಿಂದ ವಿಶೇಷ ಆಸಕ್ತಿ ವಹಿಸಲಾಗಿದೆ. ಗಣೇಶೋತ್ಸವ ಸಂದರ್ಭ ನದಿಯಲ್ಲಿ ರಾಸಾಯನಿಕ ಬಣ್ಣ ಮಿಶ್ರಿತ ಗಣಪತಿ ವಿಗ್ರಹಗಳನ್ನು ವಿಸರ್ಜಿಸದಂತೆ ಕ್ರಮಕೈಗೊಳ್ಳುವ ಮೂಲಕ ಜನರ ಮನವೊಲಿಸಿ ನದಿ ತಟದಲ್ಲಿ ತಾತ್ಕಾಲಿಕ ಗುಂಡಿ ನಿರ್ಮಿಸಿ ಅದರಲ್ಲಿ ಗಣಪತಿ ವಿಗ್ರಹಗಳನ್ನು ವಿಸರ್ಜಿಸುವಂತೆ ಕ್ರಮಕೈಗೊಳ್ಳಲಾಗಿತ್ತು. ಈ ಕ್ರಮದ ಅನ್ವಯ 50 ಕ್ಕೂ ಅಧಿಕ ಗಣಪತಿ ಮೂರ್ತಿಗಳನ್ನು ತಾತ್ಕಾಲಿಕ ಕೆರೆಯಲ್ಲಿ ವಿಸರ್ಜಿಸಲಾಗಿತ್ತು ಎಂದು ಶ್ರೀಧರ್ ಮಾಹಿತಿ ನೀಡಿದರು.
ಅಂದಾಜು 50 ಕೋಟಿ ರೂ ವೆಚ್ಚದಲ್ಲಿ ಕುಶಾಲನಗರ ಪಟ್ಟಣದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು 2017 ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ವಚ್ಚತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನದಿ ಪಾತ್ರಗಳಲ್ಲಿ ಮಾಲಿನ್ಯ ಮಾಡದಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಮಾಂಸ ಮಳಿಗೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯಗಳ ನಿರ್ವಹಣೆಗೆ ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಜಾಹೀರಾತು, ಪ್ರಚಾರದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಬಯಲು ಶೌಚಾಲಯ ಮುಕ್ತ ಪಟ್ಟಣವಾಗಿಸಲು ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಶೌಚಾಲಯ ರಹಿತರಿಗೆ 10 ಸಾವಿರ ರೂಗಳ ಸಹಾಯಧನ ಒದಗಿಸುವ ಮೂಲಕ ಶೌಚಾಲಯ ನಿರ್ಮಾಣಕ್ಕೆ ಪ್ರೇರೇಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.