ಕುಶಾಲನಗರ, ಜ. 19: ದೇಶದ ಪ್ರಮುಖ ನದಿಗಳನ್ನು ರಾಷ್ಟ್ರೀಕರಣಗೊಳಿಸುವ ಮೂಲಕ ನದಿ ಸಂರಕ್ಷಣೆಗೆ ಸರಕಾರಗಳು ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದು ಶ್ರೀ ಬಸವಪಟ್ಟಣದ ಶ್ರೀ ತೋಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ರಾಮನಾಥಪುರದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಆಶ್ರಯದಲ್ಲಿ ಏರ್ಪಡಿಸಲಾದ ನದಿ ತಟದ ಸ್ವಚ್ಛತಾ ಕಾರ್ಯಕ್ರಮ ಮತ್ತು ರಾಮೇಶ್ವರ ದೇವಾಲಯ ಬಳಿ ಬನದ ಹುಣ್ಣಿಮೆ ಅಂಗವಾಗಿ ಕಾವೇರಿ ನದಿಗೆ ಪ್ರಥಮ ಮಹಾ ಆರತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಪವಿತ್ರ ನದಿಗಳ ಸ್ವಚ್ಛತೆಯೊಂದಿಗೆ ಪಾವಿತ್ರ್ಯತೆ ಕಾಪಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದುಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಐತಿಹಾಸಿಕ ಸ್ಥಳವಾದ ರಾಮನಾಥಪುರದ ರಾಮೇಶ್ವರ ದೇವಾಲಯದ ಬಳಿ ಕಾವೇರಿಗೆ ಹುಣ್ಣಿಮೆ ಸಂದರ್ಭ ಮಹಾ ಆರತಿ ಬೆಳಗುವದರೊಂದಿಗೆ ಜೀವನದಿ ಹರಿಯುವ ಮೂರು ಜಿಲ್ಲೆಗಳಾದ ಕೊಡಗು, ಹಾಸನ ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ಆರತಿ ಕಾರ್ಯಕ್ರಮ ನಡೆಯುತ್ತಿರುವದು ಸಂತಸದ ವಿಷಯ ಎಂದರು. ಈ ಮೂಲಕ ನದಿ ತಟದ ಜನರಿಗೆ ಧಾರ್ಮಿಕ ಭಾವನೆ ಮೂಡಿಸುವದರೊಂದಿಗೆ ನದಿಯ ಸ್ವಚ್ಛತೆ ಬಗ್ಗೆ ಅರಿವು ಮತ್ತು ಜಾಗೃತಿ ಉಂಟುಮಾಡಲು ಸಾಧ್ಯ ಎಂದರು.
ಈ ಸಂದರ್ಭ ರಾಮನಾಥಪುರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮತ್ತು ಸ್ಥಳೀಯರು ನದಿ ತಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸುವ ಕಾರ್ಯ ನೆರವೇರಿಸಿದರು. ಕಸ ವಿಲೇವಾರಿಗೆ ಸ್ಥಳೀಯ ಪಂಚಾಯಿತಿ ಒದಗಿಸಿದ ಕಸದ ಬುಟ್ಟಿಗಳನ್ನು ನದಿ ತಟದಲ್ಲಿ ಅಳವಡಿಸಲಾಯಿತು. ಪ್ರತಿ ಹುಣ್ಣಿಮೆಯಂದು ನದಿ ತಟ ಸ್ವಚ್ಛಗೊಳಿಸುವ ಮೂಲಕ ಸಂಜೆ ಜೀವನದಿಗೆ ಮಹಾ ಆರತಿ ಬೆಳಗಲು ನಿರ್ಧರಿಸಲಾಯಿತು.
ಇದೇ ಸಂದರ್ಭ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರು ಮತ್ತು ಸ್ಥಳೀಯ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹುಲುಸೆ ಮಠದ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ, ಗ್ರ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಣ್ಣಶೆಟ್ಟಿ, ಎ.ಪಿ.ಎಂ.ಸಿ. ಅಧ್ಯಕ್ಷ ಕಂಬೇಗೌಡ, ಕೊಡಗು ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರಾದ ವಿ.ಆರ್. ಶಿವಶಂಕರ್, ವೈಶಾಕ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಹಾಸನ ಜಿಲ್ಲಾ ಅಧ್ಯಕ್ಷ ಕುಮಾರಸ್ವಾಮಿ, ತಾಲೂಕು ಅಧ್ಯಕ್ಷ ಸಿದ್ದರಾಜು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಸುರೇಖ ಮತ್ತಿತರರು ಇದ್ದರು.