ಕುಶಾಲನಗರ, ಆ. 18: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಗಳ ನಡಾವಳಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಕುಶಾಲನಗರ ಪಟ್ಟಣ ಪಂಚಾಯಿತಿ ಸಭೆಯಲ್ಲಿ ಸದಸ್ಯರುಗಳ ಆಕ್ರೋಶದೊಂದಿಗೆ ಗೊಂದಲಮಯ ಸಭೆ ನಡೆಯಿತು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ.ಚರಣ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಳೆದ ಬಾರಿ ನಡೆದ ಸಭೆಯ ಕಾರ್ಯಸೂಚಿಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಸರ್ವಾಧಿಕಾರಿ ಧೋರಣೆ ತಾಳುತ್ತಿದ್ದಾರೆ ಎನ್ನುವ ಆರೋಪಗಳೊಂದಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡು ಪ್ರತಿಭಟಿಸಿದರು.
ಯಾವದೇ ಕಾರ್ಯಕ್ರಮ ಸಂದರ್ಭ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವಲ್ಲಿ ಮುಖ್ಯಾಧಿಕಾರಿಗಳು ಲೋಪ ಎಸಗುತ್ತಿದ್ದಾರೆ. ಅಧ್ಯಕ್ಷರು ಮುಖ್ಯಾಧಿಕಾರಿಗಳ ರಕ್ಷಣೆಗೆ ಕೈಜೋಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ ಸದಸ್ಯರುಗಳಾದ ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಫಜ್ಲುಲ್ಲಾ, ನಂಜುಂಡಸ್ವಾಮಿ, ಪಾರ್ವತಿ, ಶಿವಶಂಕರ್ ಈ ಧೋರಣೆಯನ್ನು ಕೈಬಿಡದಿದ್ದಲ್ಲಿ ಸಭೆಯಿಂದ ನಿರ್ಗಮಿಸುವದಾಗಿ ಎಚ್ಚರಿಕೆ ನೀಡಿದರು. ಪಂಚಾಯಿತಿ ಉಪಾಧ್ಯಕ್ಷರಿಗೂ ಯಾವದೇ ರೀತಿಯ ಮಾಹಿತಿ ದೊರಕುತಿಲ್ಲ ಎನ್ನುವ ಆರೋಪಗಳು ಕೇಳಿಬಂದವು.
ಕಳೆದ ಹಲವು ತಿಂಗಳುಗಳಿಂದ ಸಭೆ ಕರೆಯದೆ ಪಂಚಾಯ್ತಿಯ ಅಭಿವೃದ್ಧಿ ಕುಂಠಿತಗೊಂಡಿದೆ. ಸರಕಾರಿ ಕಾರ್ಯಕ್ರಮಗಳ ಬಗ್ಗೆ ತಾತ್ಸಾರ ಮನೋಭಾವನೆ ತಾಳುತ್ತಿದ್ದಾರೆ. ಈ ಮೂಲಕ ಜನರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂಬ ಆಕ್ರೋಶ ಕೇಳಿಬಂತು.
ಈ ಸಂದರ್ಭ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಲೋಪದ ಬಗ್ಗೆ ಕ್ಷಮೆಯಾಚಿಸುವದರೊಂದಿಗೆ ಸಭೆ ಮುಂದುವರೆಯಿತು.
ನಮೂನೆ-3ರ ಬಗ್ಗೆ ಮುಖ್ಯಾಧಿಕಾರಿಗಳಿಂದ ಸಮರ್ಪಕ ಮಾಹಿತಿ ಬಯಸಿದ ಸದಸ್ಯರುಗಳು ಪಂಚಾಯಿತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದವು. ಹಿಂದಿನ ಸಭೆಯ ನಡಾವಳಿಗಳ ಬಗ್ಗೆ ಚರ್ಚೆ ನಡೆದು ಪಟ್ಟಣದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಬಗ್ಗೆ ಜನತೆಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವಲ್ಲಿ ವಿಫಲರಾಗಿರುವದಾಗಿ ಸದಸ್ಯರಾದ ಹೆಚ್.ಜೆ. ಕರಿಯಪ್ಪ ಹೇಳಿದರೆ, ಪಟ್ಟಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿ ತುಳುಕುತ್ತಿವೆ ಎಂದು ಸದಸ್ಯ ಪ್ರಮೋದ್ ಮುತ್ತಪ್ಪ ಸಭೆಯ ಮುಂದಿಟ್ಟರು.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಕಸದ ರಾಶಿ ಮೇಲೆ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು ಪ್ರತಿಭಟನೆ ಮಾಡಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ತಕ್ಷಣ ಪಂಚಾಯ್ತಿಯಿಂದ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ನೋಟೀಸ್ ನೀಡು ವಂತೆ ನಿರ್ಧಾರ ಕೈಗೊಳ್ಳಲಾಯಿತು.
ನಗರದಲ್ಲಿ ವಾಹನ ನಿಲುಗಡೆ ನಿರ್ಭಂದ ಹಾಗೂ ಸಮರ್ಪಕ ವಾಹನ ಸಂಚಾರ ವ್ಯವಸ್ಥೆಗೆ ಕ್ರಮಕೈಗೊಳ್ಳುವದು, ಕೂಡಿಗೆ ರಸ್ತೆಯಲ್ಲಿರುವ ಬಡಾವಣೆಯಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣದ ಬಗ್ಗೆ ತೀವ್ರ ಚರ್ಚೆ ನಡೆದು ಈ ಬಗ್ಗೆ ಕ್ರಮಕೈಗೊಳ್ಳಲು ಸೂಚಿಸಲಾಯಿತು. ಪ್ರವಾಸಿ ಮಂದಿರದ ರಸ್ತೆಯ ಮಸೀದಿ ಬದಿಯಲ್ಲಿ ಆಟೋಗಳ ನಿಲುಗಡೆ ಯನ್ನು ರದ್ದುಗೊಳಿಸುವದು, ಖಾಸಗಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳು ವದು ಈ ಬಗ್ಗೆ ಶಾಸಕರ ಅನುದಾನ ಪಡೆಯಲು ಸದಸ್ಯರ ನಿಯೋಗ ತೆರಳುವ ಬಗ್ಗೆ ಚರ್ಚೆ ನಡೆದವು.
ಯಾವದೇ ಬಡಾವಣೆಯಲ್ಲಿ ಮಂದಿರ, ಮಸೀದಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬಾರದು ಎಂದು ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಸದಸ್ಯರುಗಳಿಗೆ ಸೂಚನೆ ನೀಡಿದರು. ಈ ಸಂದರ್ಭ ಕೆಲವು ಸದಸ್ಯರಿಂದ ಸ್ಥಳೀಯ ರಸೂಲ್ ಬಡಾವಣೆಯಲ್ಲಿ ಮಸೀದಿ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಬೇಕೆಂಬ ಆಗ್ರಹ ಕೇಳಿಬಂತು. ಕಾನೂನಿಗೆ ವಿರೋಧವಾಗಿ ಯಾವದೇ ನಿರ್ಮಾಣವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.