ಸೋಮವಾರಪೇಟೆ,ಅ.18: ರಾಜ್ಯ ಸರ್ಕಾರದ ಪೌರಾಡಳಿತ ಇಲಾಖೆಯಿಂದ ನಗರೋತ್ಥಾನ ಯೋಜನೆಯಡಿ ರಾಜ್ಯದಲ್ಲಿರುವ ಪಟ್ಟಣ ಪಂಚಾಯಿತಿಗಳಿಗೆ ತಲಾ 7.50 ಕೋಟಿ ರೂ.ಗಳನ್ನು ಒಂದು ವಾರದೊಳಗೆ ಬಿಡುಗಡೆ ಗೊಳಿಸಲಾಗುವದು. ಅದರಂತೆ ಸೋಮವಾರಪೇಟೆ ಪ.ಪಂ.ಗೂ 7.50 ಕೋಟಿ ಅನುದಾನ ಲಭಿಸಲಿದೆ ಎಂದು ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆಗಳ ರಾಜ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಹಿಂದೆ 5 ಕೋಟಿ ರೂ. ಗಳ ಅನುದಾನ ಕಲ್ಪಿಸ ಲಾಗಿದ್ದು, ತಾವು ಸಚಿವರಾದ ಮೇಲೆ 2.50ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಕಲ್ಪಿಸಲಾಗಿದೆ. ಇದರಂತೆ ಪಂಚಾಯಿತಿಗಳಿಗೆ 7.50 ಕೋಟಿ ಅನುದಾನ ಲಭ್ಯವಾಗಲಿದೆ ಎಂದರು.
ಪಂಚಾಯಿತಿ ಜಾಗದಲ್ಲಿ, ರಾಜ್ಯ ಸರ್ಕಾರ ನೀಡಿದ ಅನುದಾನ ಶಾಸಕರ ನಿಧಿಯಿಂದ ನೀರು ಶುದ್ದೀಕರಣ ಘಟಕ ನಿರ್ಮಿಸಲಾಗಿದೆ. ಸ್ಥಳೀಯ ಶಾಸಕರ ಹಾಗೂ ಪ್ರಧಾನ ಮಂತ್ರಿಗಳ ಭಾವಚಿತ್ರಗಳನ್ನು ಹಾಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಅಳವಡಿಸಿಲ್ಲ ಎಂದು ಪಂಚಾಯಿತಿ ಸದಸ್ಯರಾದ ಶೀಲಾ ಡಿಸೋಜ ಹಾಗು ಕೆ.ಎ.ಆದಂ ಸಚಿವರಿಗೆ ದೂರು ನೀಡಿದರು.
ಶಾಸಕರ ನಿಧಿಯಲ್ಲಿ ಶುದ್ಧ ಕುಡಿಯುವ ನೀರು ಘಟಕ ನಿರ್ಮಿಸಲಾಗಿದೆ ಹಾಗೂ ಸ್ಥಳೀಯ ಶಾಸಕರು ಹಾಗೂ ಪ್ರಧಾನಿಗಳ ಭಾವಚಿತ್ರ ಅಳವಡಿಸಲಾಗಿದೆ ಎಂದು ಪಂಚಾಯಿತಿ ಇಂಜಿನಿಯರ್ ವೀರೇಂದ್ರ ಹೇಳಿದರು.
ಈ ಉತ್ತರದಿಂದ ಅಸಮಧಾನ ಗೊಂಡ ಸಚಿವರು,
(ಮೊದಲ ಪುಟದಿಂದ) ಪ್ರಧಾನಿ ಹಾಗೂು ಮುಖ್ಯಮಂತ್ರಿ ಯಾವದೇ ರಾಜಕೀಯ ಪಕ್ಷಗಳಿಗೆ ಸೀಮಿತವಾಗಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ತಾರತಮ್ಯ ಸಲ್ಲದು. ಒಂದು ದಿನದ ಒಳಗೆ ಶುದ್ದ ಕುಡಿಯುವ ನೀರು ಶುದ್ಧಿಕರಣ ಘಟಕಕ್ಕೆ ಮುಖ್ಯಮಂತ್ರಿಗಳ ಭಾವಚಿತ್ರ ಅಳವಡಿಸಬೇಕು. ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವದು ಎಂದು ಸಚಿವರು ಹೇಳಿದರು.
ಪಂಚಾಯಿತಿ ವಾಣಿಜ್ಯ ಮಳಿಗೆಗಳನ್ನು ಕೆಲವರು ಪರಭಾರೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಪಂಚಾಯಿತಿಗೆ ಕೋಟ್ಯಾಂತರ ರೂ. ನಷ್ಟವಾಗುತ್ತಿದೆ. ರಾಜಕೀಯ ಪ್ರಭಾವಿಗಳು ಪರಭಾರೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಸದಸ್ಯ ಉದಯ ಶಂಕರ್ ಸಚಿವರ ಗಮನಕ್ಕೆ ತಂದರು. ಪಂಚಾಯಿತಿ ನಿಯಮ ಮೀರಿ ಪರಭಾರೆ ಮಾಡಿದವರ ವಿರುದ್ಧ ಕ್ರಮ ಕೈಗೊಂಡು, ಪೌರಾಡಳಿತ ಇಲಾಖೆಗೆ ವರದಿ ಸಲ್ಲಿಸುವಂತೆ ಸೂಚಿಸಿದರು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿಯವರು ಕಸವಿಲೇವಾರಿಗೆ 4 ಎಕರೆ ಜಾಗವನ್ನು ಖರೀದಿಸಲು ತೀರ್ಮಾನಿಸಿರುವ ಕಾರಣ, ನಗರೋತ್ಥಾನ ಯೋಜನೆಯ ಹಣದಲ್ಲಿ 50ಲಕ್ಷ ರೂ. ಬಳಸಿಕೊಳ್ಳಲು ಅನುವು ಮಾಡಿಕೊಡಲಾಗುವದು ಎಂದರು.
13ನೇ ಹಣಕಾಸು ಯೋಜನೆಯಿಂದ ಬಿಡುಗಡೆಯಾಗಿರುವ ಹಣದಲ್ಲಿ ಅಲ್ಪ ಪ್ರಮಾಣದ ಹಣ ಮಾತ್ರ ಪಂಚಾಯಿತಿಗೆ ಬಂದಿದ್ದು, ಉಳಿದ ಹಣ ಬಿಡುಗಡೆಯಾಗಿಲ್ಲ. ಉದ್ದೇಶಿತ ಕಾಮಗಾರಿಗಳು ಪೂರ್ಣಗೊಂಡಿದ್ದು, ಆದಷ್ಟು ಬೇಗ ಹಣ ಬಿಡುಗಡೆಗೊಳಿಸುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್ ಅವರು ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವರು ಇಲಾಖೆಯ ಹಿರಿಯ ಅಧಿಕಾರಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ 13ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾಗಬೇಕಿರುವ ಹಣವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಸೂಚಿಸಿದರು.
ಉಳಿದಂತೆ ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಸದಸ್ಯರುಗಳು ಸಚಿವರ ಗಮನ ಸೆಳೆದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸುಶೀಲಾ, ಸದಸ್ಯರಾದ ಮೀನಾ ಕುಮಾರಿ, ಲೀಲಾ ನಿರ್ವಾಣಿ, ಬಿ.ಸಿ.ವೆಂಕಟೇಶ್, ಬಿ.ಎಂ.ಈಶ್ವರ್, ಬಿ.ಎಂ.ಸುರೇಶ್, ಇಂದ್ರೇಶ್, ನಾಗರಾಜು, ಉಪವಿಭಾಗಾಧಿಕಾರಿ ನಂಜುಂಡೇಗೌಡ, ಪೌರಾಡಳಿತ ಇಲಾಖೆಯ ಎಇಇ ಶಿವಪ್ರಸಾದ್, ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಪಟ್ಟಣ ಪಂಚಾಯಿತಿ ವತಿಯಿಂದ ಸಚಿವರಿಗೆ ಪೌರ ಸನ್ಮಾನ ಮಾಡಲಾಯಿತು.