ಮಡಿಕೇರಿ, ನ. 5: ಮಡಿಕೇರಿ ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಭವಿಷ್ಯ ನಿಧಿಗೆ ಸಂಬಂಧಿಸಿದ ಕಡತವೊಂದು ನಾಪತ್ತೆಯಾಗಿದ್ದು, ಈ ಬಗ್ಗೆ ಇಂದು ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು.ಸಭೆಯಲ್ಲಿ ವಿಚಾರ ಪ್ರಸ್ತಾಪಗೊಂಡು ಆಡಳಿತ ವೈಫಲ್ಯವೆ ಇದಕ್ಕೆ ಕಾರಣ ಎಂಬ ಆರೋಪ ವಿಪಕ್ಷಗಳಿಂದ ಕೇಳಿಬಂದರೆ ವಿಪಕ್ಷಗಳ ಆರೋಪಕ್ಕೆ ಆಡಳಿತ ಪಕ್ಷದ ಸದಸ್ಯರು ತಿರುಗೇಟು ನೀಡುತ್ತಾ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಈ ಸಂದರ್ಭ ಮಾತನಾಡಿದ ಎಸ್‍ಡಿಪಿಐ ಸದಸ್ಯ ಅಮೀನ್ ಮೊಹಿಸಿನ್ ನಗರಸಭೆಯಲ್ಲಿ ಪ್ರಮುಖ ಕಡತವೊಂದು ನಾಪತ್ತೆಯಾ ಗಿದೆ. ಜೊತೆಗೆ ಕಳೆದ ಎರಡು ವರ್ಷದಿಂದ ನಗರಸಭೆಯ ಲೆಕ್ಕಪತ್ರಗಳ ಆಡಿಟ್ ನಡೆದಿಲ್ಲ. ಇದರಿಂದಾಗಿ ಸಾರ್ವಜನಿಕರು ನಗರಸಭೆಯನ್ನು ಕೀಳಾಗಿ ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕಡತ ನಾಪತ್ತೆಯಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಏಕೆ ದೂರು ನೀಡಲಿಲ್ಲ ಎಂದು ಆಯುಕ್ತರನ್ನು ಪ್ರಶ್ನಿಸಿದರು. ಬಿಜೆಪಿ ಸದಸ್ಯರಾದ ಕೆ.ಎಸ್. ರಮೇಶ್, ಪಿ.ಡಿ. ಪೊನ್ನಪ್ಪ, ಇತರರು ಇದಕ್ಕೆ ದನಿಗೂಡಿಸಿದರು.
ಹೀಗೆ ಸದಸ್ಯರುಗಳು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಂತೆ ಮಾತನಾಡಿದ ಆಯುಕ್ತೆ ಪುಷ್ಪಾವತಿ ಅವರು ನಾಪತ್ತೆಯಾಗಿರುವ ಕಡತವನ್ನು ಹುಡುಕುವಂತೆ ಈಗಾಗಲೇ ಸಿಬ್ಬಂದಿಗಳಿಗೆ ಸೂಚಿಸಿದ್ದೇನೆ. ನಾನು ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಮುಂದಾದರೆ ನೀವುಗಳೇ ತಡೆಯೊಡ್ಡುತ್ತಿದ್ದೀರಿ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರುಗಳು ‘ನಿಮ್ಮ ಕರ್ತವ್ಯಕ್ಕೆ ಯಾರು ತಡೆ ಮಾಡುತ್ತಿದ್ದಾರೊ ಆ ಸದಸ್ಯರ ಹೆಸರನ್ನು ಬಹಿರಂಗಪಡಿಸಿ' ಎಂದು ಪಟ್ಟು ಹಿಡಿದರು. ಈ ಹಿಂದೆ ಲೆಕ್ಕಾಧಿಕಾರಿಯಾಗಿದ್ದ ಹನುಮಂತರಾಜ್ ಅವರ ನಿರ್ಲಕ್ಷ್ಯ ಕಡತ ನಾಪತ್ತೆಯಾಗಲು ಕಾರಣವೆಂಬ ಆರೋಪ ವ್ಯಕ್ತವಾಯಿತು. ಕಳೆದ 8 ವರ್ಷಗಳಿಂದ ನಗರಸಭೆಯಲ್ಲಿ 28 ರಶೀದಿ ಪುಸ್ತಕಗಳು ಕಾಣೆಯಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯಮಟ್ಟದ ತನಿಖಾ ಸಂಸ್ಥೆಯಿಂದ ಕಡತ ಹಾಗೂ ರಶೀದಿ ನಾಪತ್ತೆಯಾದ ಬಗ್ಗೆ ತನಿಖೆ ಆಗಬೇಕೆಂಬ ಒತ್ತಾಯವೂ ಸಭೆಯಲ್ಲಿ ಕೇಳಿಬಂತು. ನಂತರ ಈ ಬಗ್ಗೆ ಕಾನೂನಿನಂತೆ ಕ್ರಮಕ್ಕೆ ಮುಂದಾಗಲು ನಿರ್ಧರಿಸಲಾಯಿತು.
ಸ್ಥಾಯಿ ಸಮಿತಿ- ಕೋಲಾಹಲ
ನಗರಸಭಾ ಸ್ಥಾಯಿ ಸಮಿತಿ ಅವಧಿ ಪೂರ್ಣಗೊಂಡಿದ್ದರೂ ಇದುವರೆಗೂ ನೂತನ ಸಮಿತಿ ರಚನೆಯಾಗಿಲ್ಲ ಎಂದು ಬಿಜೆಪಿ ಸದಸ್ಯ ಪಿ.ಡಿ. ಪೊನ್ನಪ್ಪ ಸಭೆಯ ಆರಂಭದಲ್ಲೇ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರ ಸಂಬಂಧ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಬಿಜೆಪಿ ಸದಸ್ಯರುಗಳ ನಡುವೆ ಕೆಲ ಹೊತ್ತು ವಾಗ್ಯುದ್ಧ ನಡೆಯಿತು. ತಾನು ಅಧ್ಯಕ್ಷೆಯಾದ ಬಳಿಕ ಇದು ಮೊದಲ ಸಾಮಾನ್ಯ ಸಭೆಯಾಗಿದ್ದು, ಸದ್ಯದಲ್ಲಿಯೇ ಸ್ಥಾಯಿ ಸಮಿತಿ ರಚನೆಗೆ ಸಭೆ ಕರೆಯುತ್ತೇನೆ ಎಂದು ಕಾವೇರಮ್ಮ ಸೋಮಣ್ಣ ಹೇಳಿದರೂ ಕೂಡ ಒಪ್ಪದ ಬಿಜೆಪಿ ಸದಸ್ಯರು ದಿನಾಂಕ ಪ್ರಕಟಿಸುವಂತೆ ಒತ್ತಾಯಿಸಿದರು. ನಿಮಗೆ ಅನುಕೂಲವಾಗುವ ರೀತಿ ದಿನಾಂಕ ನಿಗದಿಪಡಿಸಿ ಎಂದು ಸದಸ್ಯ ನಂದಕುಮಾರ್ ಹೇಳಿದಾಗ ವಾತಾವರಣ ಮತ್ತಷ್ಟು ಬಿಸಿಯಾಯಿತು. ದಿನಾಂಕ ಘೋಷಣೆ ಮಾಡಿ ಎಂದು ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಕೂಡ ಒತ್ತಾಯಿಸಿದರು. ನೂತನ ಅಧ್ಯಕ್ಷರ ಮೊದಲ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ವಿಚಾರಬೇಡ ಎಂದು ಸದಸ್ಯ ಕೆ.ಎಂ. ಗಣೇಶ್ ಹೇಳಿದಾಗ ಬಿಜೆಪಿ ಸದಸ್ಯರು ಮತ್ತಷ್ಟು ಟೀಕೆಗೆ ಮುಂದಾದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ನವೆಂಬರ್ 30ರೊಳಗೆ ಸಭೆ ಕರೆದು ಸ್ಥಾಯಿ ಸಮಿತಿ ರಚನೆ ಮಾಡುವದಾಗಿ ಅಧ್ಯಕ್ಷರು ಪ್ರಕಟಿಸಿದರು. ನಂತರ ಪರಿಸ್ಥಿತಿ ಶಾಂತವಾಯಿತು.
ಗಾಂಧಿ ಮೈದಾನದಲ್ಲಿ ಪೆಂಡಾಲ್ ತಲೆ ಎತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದು, ನಗರಸಭಾ ಸದಸ್ಯರು ಹಣ ಪಡೆದು ಇದಕ್ಕೆ ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ ಎಂದು ಸದಸ್ಯ ನಂದ ಕುಮಾರ್ ಹೇಳಿದರು. ಯಾವ ಸದಸ್ಯರು ಹಣ ಪಡೆದಿದ್ದಾರೆ ಎಂಬದನ್ನು ಬಹಿರಂಗಪಡಿಸಲು ಹೊರತಾಗಿ ವೃಥಾ ಆರೋಪ ಬೇಡ ಎಂದು ಬಿಜೆಪಿ ಸದಸ್ಯ ಕೆ.ಎಸ್. ರಮೇಶ್ ಹೇಳಿದರು. ಇನ್ನು ಮುಂದೆ ನಗರಸಭೆ ಈ ಬಗ್ಗೆ ಮುಂಜಾಗ್ರತೆ ವಹಿಸಲು ತೀರ್ಮಾನಿಸಲಾಯಿತು. ನಗರಸಭೆ ವ್ಯಾಪ್ತಿಯಲ್ಲಿ ಬರುವ ಖಾಸಗಿ ಮಾಂಸದ ಅಂಗಡಿಗಳಿಗೆ ವಾರ್ಷಿಕ 15 ಸಾವಿರ ಪರವಾನಗಿ ಶುಲ್ಕ ನಿಗದಿಪಡಿಸಲು ಸದಸ್ಯ ಉದಯಕುಮಾರ್ ಒತ್ತಾಯಿಸಿದರು.
ನಗರಸಭಾ ವ್ಯಾಪ್ತಿಯಲ್ಲಿ ಮಾಂಸದ ಅಂಗಡಿಗಳು ಬೇಕಾಬಿಟ್ಟಿಯಾಗಿ ತಲೆ ಎತ್ತುತ್ತಿದ್ದು, ಕಾನೂನಿನಡಿ ಮಾಂಸದ ಅಂಗಡಿಗೆ ಅನುಮತಿ ನೀಡುವಂತೆ ಸದಸ್ಯ ಉಣ್ಣಿಕೃಷ್ಣ ಹೇಳಿದರು. ನಗರಸಭಾ ವ್ಯಾಪ್ತಿಯ ಶಾಲೆಗಳ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ಮಾತ್ರ ನೀಡಲಾಗಿದ್ದು, ಕೂಡಲೇ ಇನ್ನೊಂದು ಜೊತೆ ಸಮವಸ್ತ್ರ ನೀಡಲು ಕ್ರಮಕೈಗೊಳ್ಳುವಂತೆ ಅಧಿಕಾರಿಗೆ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಸೂಚಿಸಿದರು.