ಶ್ರೀಮಂಗಲ, ಜ. 6: ದೇಶದ ಹಿತದೃಷ್ಟಿಯಿಂದ ನಗದು ರಹಿತ ಆರ್ಥಿಕ ವ್ಯವಹಾರ ಕಡ್ಡಾಯ ವಾಗಲಿದೆ. ಇದಕ್ಕೆ ಕನಿಷ್ಠ ಜ್ಞಾನ ಪಡೆದು ಮಾನಸಿಕವಾಗಿ ಪ್ರತಿಯೊಬ್ಬರು ಸಿದ್ದರಾಗಬೇಕಾಗಿದೆ. ಭವಿಷ್ಯದಲ್ಲಿ ಎಲ್ಲಾ ಬಹುಮೌಲ್ಯದ ನೋಟುಗಳು ಅಮಾನ್ಯವಾದರೆ ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ವರು ಸಿದ್ಧರಾಗಬೇಕು. ಪ್ರಾಮಾಣಿಕ-ಪಾರದರ್ಶಕ ಆರ್ಥಿಕ ವ್ಯವಹಾರಕ್ಕೆ ಬ್ಯಾಂಕಿಂಗ್ ಮೂಲಕವೇ ಆದಾಗ ಪ್ರತಿ ಜನರಿಗೆ ಇದರ ಲಾಭ ತಲುಪುತ್ತದೆ. ಈ ನಿಟ್ಟಿನಲ್ಲಿ ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಬಾರ್ಡ್ ವ್ಯವಸ್ಥಾಪಕ ಮುಂಡಂಡ ಸಿ. ನಾಣಯ್ಯ ಹೇಳಿದರು.

ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಜಿಲ್ಲಾ ನಬಾರ್ಡ್, ಡಿ.ಸಿ.ಸಿ. ಬ್ಯಾಂಕ್, ಕಾನೂರು ಕೃಷಿ ಪತ್ತಿನ ಸಹಕಾರ ಸಂಘ, ಮತ್ತು ಕೋಟೂರು ಕೃಷಿ ಪತ್ತಿನ ಸಹಕಾರ ಸಂಘ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

33 ಸಾವಿರ ರೈತರಿಗೆ ರುಪೆ ಕಾರ್ಡ್ : ಜಿಲ್ಲೆಯ ರೈತರಲ್ಲಿರುವ ಕೆ.ಸಿ.ಸಿ ಕಾರ್ಡ್ ಇನ್ನು ಮುಂದೆ ರುಪೆ ಕೆ.ಸಿ.ಸಿ ಸ್ಮಾರ್ಟ್ ಕಾರ್ಡ್ ಆಗಿ ಪರಿವರ್ತ ನೆಯಾಗಲಿದೆ.

(ಮೊದಲ ಪುಟದಿಂದ) ಜಿಲ್ಲೆಯಲ್ಲಿರುವ 33 ಸಾವಿರ ಸಹಕಾರ ಸಂಘದ ಸದಸ್ಯರಿಗೆ ಮುಂದಿನ ಎರಡು ವಾರದೊಳಗೆ ಈ ಸ್ಮಾರ್ಟ್ ಕಾರ್ಡ್‍ಗಳನ್ನು ವಿತರಿಸಲು ಜಿಲ್ಲಾ ನಬಾರ್ಡ್‍ನಿಂದ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್‍ಗೆ ನೀಡಲಾಗಿದೆ. ಇದರಿಂದ ರೈತರು ಮುಂದಿನ ದಿನಗಳಲ್ಲಿ ನಗದು ರಹಿತ ಆರ್ಥಿಕ ವ್ಯವಹಾರ ಮಾಡಲು ಅನುವು ಮಾಡಿಕೊಡಲಾಗುವದು ಎಂದು ಹೇಳಿದರು.

30 ಕಡೆ ಬೀದಿ ನಾಟಕ : ನಗದು ರಹಿತ ಆರ್ಥಿಕ ವ್ಯವಹಾರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 8 ರಂದು 500 ಹಾಗೂ 1000 ನೋಟುಗಳನ್ನು ಅಮಾನ್ಯ ಮಾಡಿದ ಬೆನ್ನಲ್ಲೆ ಜಿಲ್ಲೆಯಲ್ಲಿ 1425 ಕೋಟಿ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ನಗದು ನೋಟುಗಳನ್ನು ಬಚ್ಚಿಟ್ಟುಕೊಳ್ಳದೆ ಚಲಾವಣೆಗೆ ತಂದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ. ಆದ್ದರಿಂದ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 20 ಜನಜಾಗೃತಿ ಕಾರ್ಯಕ್ರಮ, ಮುಂದಿನ ವಾರದಿಂದ 30 ಕಡೆ ಬೀದಿ ನಾಟಕದ ಮೂಲಕ ಜಾಗೃತಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಪ್ರತಿಯೊಬ್ಬರು ಉಳಿತಾಯ ಖಾತೆ ಹಾಗೂ ಡೆಬಿಟ್ ಕಾರ್ಡ್‍ಗಳನ್ನು ಹೊಂದಿಕೊಳ್ಳಬೇಕು. ಬ್ಯಾಂಕಿಂಗ್ ಮೂಲಕವೇ ವ್ಯವಹಾರ, ನಗದು ರಹಿತ ವ್ಯವಹಾರಕ್ಕೆ ಜನ್‍ಧನ್ ಖಾತೆ ತೆರೆಯುವ ಮೂಲಕ ನೋಟು ಅಮಾನ್ಯಕ್ಕೆ ಮುನ್ನ, ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ವ್ಯಾಪಾರ ಮಾಡುವವರು ಪೋಸ್ ಯಂತ್ರ, ಮೊಬೈಲ್ ಫೋನ್ ಮೂಲಕ ಬ್ಯಾಂಕಿಂಗ್ ವ್ಯವಹಾರ, ಮೈಕ್ರೋ ಎ.ಟಿ.ಎಂ.ಗಳ ಬಳಕೆ ಕಡ್ಡಾಯ ವಾಗಲಿದೆ. ಭವಿಷ್ಯದಲ್ಲಿ ನೋಟುಗಳ ಮುದ್ರಣ ಸ್ಥಗಿತಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅಂತಹ ಸಂದರ್ಭದಲ್ಲಿ ನಗದು ರಹಿತ ಆರ್ಥಿಕ ವ್ಯವಹಾರಕ್ಕೆ ಸಿದ್ಧರಾಗಬೇಕಾಗಿದೆ. ಇಂತಹ ಸಂದÀರ್ಭದಲ್ಲಿ ಆರ್ಥಿಕ ವ್ಯವಹಾರ ಎಂದಿನಂತೆ ಸಾಗಿಸಲು ಜನರಿಗೆ ಸಮಸ್ಯೆ ಆಗದಂತೆ ಆರ್ಥಿಕ ವ್ಯವಹಾರ ನಡೆಸಲು ಡಿಜಿಟಲ್ ಆರ್ಥಿಕ ಸಾಕ್ಷರತಾ ಜನಜಾಗೃತಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮಾಹಿತಿ ನೀಡಿದರು.

ಡಿ.ಸಿ.ಸಿ. ಬ್ಯಾಂಕ್‍ನ ನೋಡೆಲ್ ಅಧಿಕಾರಿ ತುಂಗರಾಜ್ ಮಾತನಾಡಿ, 1982ರಲ್ಲಿ ಆರ್.ಬಿ.ಐ.ನಿಂದ ಬೇರ್ಪಡಿಸಿ ಗ್ರಾಮೀಣ ಭಾಗದ ಅಭಿವೃದ್ದಿಗೆ ಉತ್ತೇಜನ ನೀಡಲು ನಬಾರ್ಡ್ ಬ್ಯಾಂಕ್ ಸ್ಥಾಪಿಸಲಾಯಿತು. ಮಹಿಳೆಯರು ಹಾಗೂ ಗ್ರಾಮೀಣ ಭಾಗದ ಬಡ ಜನರನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು ನಬಾರ್ಡ್ ಸ್ವಸಹಾಯ ಸಂಘಗಳಿಗೆ ಸಾಲ ನೀಡುತ್ತಿದೆ. 1982ರಲ್ಲಿ 200 ಸ್ವಸಹಾಯ ಸಂಘವಿತ್ತು. ಇದೀಗ ದೇಶದಲ್ಲಿ 90 ಲಕ್ಷ ಸ್ವಸಹಾಯ ಸಂಘ ರಚನೆಗೊಂಡಿದೆ. ಇದರಲ್ಲಿ 39 ಸಾವಿರ ಕೋಟಿ ಹಣವನ್ನು ಉಳಿತಾಯ ಮಾಡಿದ್ದು, ನಬಾರ್ಡ್ ಇವರಿಗೆ 49 ಸಾವಿರ ಕೋಟಿ ಸಾಲ ನೀಡಿದೆ. ಸ್ವಸಹಾಯ ಸಂಘದ ಸದಸ್ಯರು ನಗದು ರಹಿತ ಆರ್ಥಿಕ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್ ಅವರು, ಕೇಂದ್ರ ಸರಕಾರದ ಮಹತ್ವಕಾಂಕ್ಷಿಯ ನಗದು ರಹಿತ ಆರ್ಥಿಕ ವ್ಯವಹಾರ ಯಶಸ್ವಿಗೊಳಿಸಲು ಎಲ್ಲರು ಇದರಲ್ಲಿ ಭಾಗಿಯಾಗಬೇಕು. ಭವಿಷ್ಯದಲ್ಲಿ ನಗದು ರಹಿತ ವ್ಯವಹಾರ ಹಾಗೂ ಬ್ಯಾಂಕಿಂಗ್ ಮೂಲಕವೇ ಆರ್ಥಿಕ ವ್ಯವಹಾರ ಕಡ್ಡಾಯವಾಗಲಿದೆ. ಆದ್ದರಿಂದ ಆಧುನಿಕ ತಂತ್ರಜ್ಞಾನವನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ನಗದು ರಹಿತ ವ್ಯವಹಾರಕ್ಕೆ ಅಡ್ಡಿಯಾಗಿರುವ ಮೊಬೈಲ್ ನೆಟ್‍ವರ್ಕ್‍ಗಳು: ಸಭೆಯಲ್ಲಿದ್ದ ಪ್ರಮುಖರು ಮಾತನಾಡಿ, ದೇಶದ 70 ಭಾಗ ಹಾಗೂ ಜಿಲ್ಲೆಯ 80 ಭಾಗ ಜನರು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಡಿಜಿಟಲೀಕರಣ, ನಗದು ರಹಿತ ಆರ್ಥಿಕ ವ್ಯವಹಾರಕ್ಕೆ ಗ್ರಾಮೀಣ ಭಾಗದಲ್ಲಿ ಲಭ್ಯವಿಲ್ಲದ ಮೊಬೈಲ್ ನೆಟ್‍ವರ್ಕ್‍ಗಳು ಅಡ್ಡಿಯಾಗಿವೆ.

ಗ್ರಾಮೀಣ ಭಾಗದಲ್ಲಿ ಮಾತನಾಡಲು ಸರಿಯಾಗಿ ಮೊಬೈಲ್ ನೆಟ್‍ವರ್ಕ್‍ಗಳು ಸಿಗುತ್ತಿಲ್ಲ. ಆಗಿರುವಾಗ ಮೊಬೈಲ್ ಇಂಟರ್‍ನೆಟ್ ದೊರೆಯದೆ ಹೇಗೆ ನಗದು ರಹಿತ ವ್ಯವಹಾರ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮೊದಲು ಗ್ರಾಮೀಣ ಭಾಗದ ಮೊಬೈಲ್ ನೆಟ್‍ವರ್ಕ್‍ಗಳನ್ನು ಮೇಲ್ದರ್ಜೆಗೇರಿಸಿ, ಹಾಗೆಯೇ ಗ್ರಾಮೀಣ ಭಾಗದಲ್ಲಿ ಎ.ಟಿ.ಎಂ. ಗಳನ್ನು ಸ್ಥಾಪಿಸಿ. ಇಲ್ಲದಿದ್ದರೆ ಗ್ರಾಮೀಣ ಜನರಿಗೆ ನಗದು ರಹಿತ ವ್ಯವಹಾರ ಮಾಡಲು ಅನಿವಾರ್ಯ ವಾಗಿ ಪಟ್ಟಣ ಪ್ರದೇಶಕ್ಕೆ ಬರಬೇಕಾಗುತ್ತದೆ. ಇದರಿಂದ ಸಮಯ ಹಾಗೂ ಹಣ ವ್ಯರ್ಥವಾಗುತ್ತದೆ. ಗ್ರಾಮೀಣ ಜನರ ಬಗ್ಗೆ ಸರಕಾರ ಹೆಚ್ಚಿನ ಗಮನ ಹರಿಸಬೇಕೆಂದು ಹೇಳಿದರು. ಇದಕ್ಕೆ ಉತ್ತರಿಸಿದ ನಬಾರ್ಡ್ ಡಿ.ಜಿ.ಎಂ ನಾಣಯ್ಯ ಅವರು, ಹಂತ ಹಂತವಾಗಿ ಮೊಬೈಲ್ ನೆಟ್‍ವರ್ಕ್ ಹಾಗೂ ಎ.ಟಿ.ಎಂ.ಗಳನ್ನು ಗ್ರಾಮೀಣ ಭಾಗದ ಜನರಿಗೆ ಸೌಲಭ್ಯ ದೊರಕಿಸಲು ಪ್ರಯತ್ನಿಸಲಾಗು ವದೆಂದು ಹೇಳಿದರು.

ಈ ಸಂದÀರ್ಭ ಕಾನೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೇಚಮಾಡ ನಂಜಪ್ಪ, ನಿರ್ದೇಶಕರು ಗಳಾದ ಮಾಚಿಮಾಡ ಸತೀಶ್, ಕುಂಞÂಮಾಡ ಸದಾಶಿವ, ಕೆ.ಆರ್. ಸುರೇಶ್, ಮನ್ನಕ್ಕಮನೆ ಅಶ್ವಿನಿ, ಪೋರಂಗಡ ಲೀನಾ ಬೋಪಣ್ಣ, ಚಿರಿಯಪಂಡ ರೇಖಾ, ಹೆಚ್.ಕೆ. ಬೊಗ್ಗುರು, ಕಾಡ್ಯಮಾಡ ಬೋಪಣ್ಣ, ಚಿರಿಯಪಂಡ ಬೆಳ್ಯಪ್ಪ, ಸಿ.ಇ.ಒ ವಿ.ಆರ್. ಉಮೇಶ್, ಕೋಟೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೊಟ್ಟಂಗಡ ಮುದ್ದಪ್ಪ, ಸಿ.ಇ.ಒ ಮೊಣ್ಣಪ್ಪ, ಡಿ.ಸಿ.ಸಿ. ಬ್ಯಾಂಕ್ ನಿರೀಕ್ಷಕ ಬಲ್ಯಮೀದೇರಿರ ಶರೀನ್ ಕುಮಾರ್, ನಬಾರ್ಡ್‍ನ ಆರ್ಥಿಕ ಸಾಕ್ಷರತೆ ಸಂಪನ್ಮೂಲ ಅಧಿಕಾರಿ ರಶಿತಾ ಮತ್ತಿತರರು ಹಾಜರಿದ್ದರು.