ಮಡಿಕೇರಿ, ಡಿ. 22: ದಿಡ್ಡಳ್ಳಿಯಲ್ಲಿ ಹೋರಾಟದ ಹೆಸರಿನಲ್ಲಿ ನಕ್ಸಲ್ ಸಂಘಟನೆಗಳು ಸಮಸ್ಯೆಯನ್ನು ಹುಟ್ಟು ಹಾಕುತ್ತಿವೆಯೆಂದು ಸಣ್ಣ ಬೆಳೆಗಾರರ ಒಕ್ಕೂಟದ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ ಗಂಭೀರ ಆರೋಪ ಮಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಕ್ಸಲ್ ಸಂಘÀಟನೆಗಳು ಗಿರಿಜನ ಮುಖಂಡರಾದ ಜೆ.ಕೆ.ಅಪ್ಪಾಜಿ ಹಾಗೂ ಜೆ.ಕೆ. ಮುತ್ತಮ್ಮ ಅವರನ್ನು ಬಳಸಿಕೊಂಡು ಹಣ ಮಾಡುವ ಷಡ್ಯಂತ್ರ ರೂಪಿಸುತ್ತಿದ್ದಾವೆ ಎಂದು ಆರೋಪಿಸಿದರು. ಇವರಿಬ್ಬರು ಅಮಾಯಕರಿಂದ ಹಣ ಸಂಗ್ರಹಿಸಿ ತೀವ್ರ ಗಾಮಿ ಸಂಘಟನೆಗಳಿಗೆ ನೀಡಿರುವ ಬಗ್ಗೆ ಸಂಶಯವಿದೆ. ವಾಟ್ಸ್‍ಅಪ್‍ಗಳಲ್ಲಿ ಆಕ್ಷೇಪಾರ್ಹ ಸಂದೇಶಗಳು ರವಾನೆಯಾಗುತ್ತಿದ್ದು, ದಿಡ್ಡಳ್ಳಿ ನಿರಾಶ್ರಿತರ ಹೋರಾಟಕ್ಕೆ ಆರ್ಥಿಕ ಬಲದ ಕರೆಯನ್ನು ನೀಡಲಾಗಿದೆ.
ಹಣ ಸಂದಾಯ ಮಾಡುವವರು ಸಾಗರದ ಬ್ಯಾಂಕ್‍ವೊಂದರ ಖಾತೆ ಸಂಖ್ಯೆಯನ್ನು ನಮೂದಿಸಿ ಹಣ ಸಂದಾಯ ಮಾಡುವಂತೆ ತಿಳಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆ ತೀವ್ರಗೊಂಡಿರು ವದು ಖಚಿತವಾಗಿದೆಯೆಂದು ಆರೋಪಿಸಿದರು.
ಇದೇ ಜೂನ್ ತಿಂಗಳಿನಿಂದ ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಸಮಸ್ಯೆ ಆರಂಭವಾಗಿದೆ. ತಲೆ ತಲಾಂತರ ಗಳಿಂದ ಈ ಭಾಗದಲ್ಲಿ ಜೇನು ಕುರುಬರು ಮತ್ತು ಅರೆಭಾಷೆ ಗೌಡರು ಸಾಮರಸ್ಯದಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಲ್ಲಿ ಒಂದು ರೀತಿಯ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಇದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಚೇತ್ ಅವರು ಚೆಕ್ ಪೋಸ್ಟ್‍ಗಳನ್ನು ನಿರ್ಮಿಸಿ ಕಣ್ಗಾವಲು ಇರಿಸಿದ್ದರು. ಇದೀಗ ಬಂದಿರುವ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಕೂಡ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾವಹಿಸಿದ್ದಾರೆ. ಆದರೂ ದಿಡ್ಡಳ್ಳಿಯಲ್ಲಿ ಹಣಕ್ಕಾಗಿ ತೀವ್ರಗಾಮಿ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಅಪ್ಪಾಜಿ ಹಾಗೂ ಮುತ್ತಮ್ಮ ಅವರನ್ನು ಹಾದಿ ತಪ್ಪಿಸಲಾಗಿದೆ ಎಂದು ಆರೋಪಿಸಿದರು. ಈ ಪ್ರದೇಶಕ್ಕೆ ಹೋರಾಟಕ್ಕೆಂದು ಬರುವವರು ಕಾರುಗಳಲ್ಲಿ ಆಗಮಿಸುತ್ತಿದ್ದಾರೆ. ಅಮಾಯಕರಿಂದ ಸಂಗ್ರಹವಾದ ಹಣ ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಭಾಗದ ತೀವ್ರಗಾಮಿ ಸಂಘಟನೆಗೆ ಸಂದಾಯವಾದ ಬಗ್ಗೆ ಸಂಶಯವಿದೆ ಎಂದರು.
ದಿಡ್ಡಳ್ಳಿಯಲ್ಲಿ ನೆಲೆ ನಿಂತವರು ಮಂಡ್ಯ, ಮೈಸೂರು ಹಾಗೂ ತಮಿಳುನಾಡು ಭಾಗದವರಾಗಿದ್ದು, ಇಲ್ಲಿ ಇರುವವರೆಲ್ಲರೂ ಗಿರಿಜನರೆನ್ನುವದು ನಂಬಲ ಸಾಧ್ಯವಾಗಿದೆ. ನಿರಾಶ್ರಿತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಕ್ಸಲ್ ಪ್ರಚೋದಿತವಾಗಿದೆ. ಈ ಹೋರಾಟ ಹಾದಿ ತಪ್ಪುತ್ತಿರುವದರಿಂದಲೆ ಗಿರಿಜನ ಪರ ಹೋರಾಟಗಾರರಾದ ಬುಡಕಟ್ಟು ಕೃಷಿಕರ ಸಂಘದ ಜೆ.ಪಿ. ರಾಜು, ಜೆ.ಕೆ. ರಾಮು ಇನ್ನಿತರರು ತೊಡಗಿಸಿಕೊಂಡಿಲ್ಲವೆಂದು ನಂದಾ ಸುಬ್ಬಯ್ಯ ಅಭಿಪ್ರಾಯಪಟ್ಟರು.
ಬೆಳೆಗಾರರು ಗಿರಿಜನರನ್ನು ಜೀತದಾಳುಗಳಂತೆ ನೋಡಿಕೊಳ್ಳುತ್ತಿ ದ್ದಾರೆ ಎಂದು ಆಕ್ಷೇಪಾರ್ಹ ಸಂದೇಶಗಳನ್ನು ವ್ಯಾಟ್ಸ್‍ಅಪ್‍ನಲ್ಲಿ ರವಾನಿಸಲಾಗುತ್ತಿದೆ. ಇದು ಅಮಾಯಕರ ಹಾದಿ ತಪ್ಪಿಸುವ ಯತ್ನವಾಗಿದ್ದು, ನಕ್ಸಲ್ ಚಟುವಟಿಕೆ ಬಗ್ಗೆ ಗುಪ್ತಚರ ಇಲಾಖೆ ಸೂಕ್ತ ರೀತಿಯಲ್ಲಿ ಕೆಲಸ ಮಾಡಿದ್ದರೆ ಈ ರೀತಿಯ ಅರಾಜಕತೆ ಉಂಟಾಗುತ್ತಿರ ಲಿಲ್ಲವೆಂದು ಅವರು ಆರೋಪಿಸಿದರು.
ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಹೋರಾಟ ಸಮಸ್ಯೆಯನ್ನು ಹುಟ್ಟು ಹಾಕುವದಕ್ಕಾಗಿಯೇ ಹೊರತು ನಿವೇಶನಗಳನ್ನು ನೀಡುವದಕ್ಕಾಗಿ ಅಲ್ಲವೆಂದು ನಂದಾ ಸುಬ್ಬಯ್ಯ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡುವ ಮೂಲಕ ಸರಿಯಾದ ನಿರ್ಧಾರ ಕೈಗೊಂಡಿದೆಯೆಂದು ತಿಳಿಸಿದರು.
ಎಸಿಎಎಫ್ ಕೂಡಕಂಡಿ ಬೆಳ್ಳಿಯಪ್ಪ ಅವರ ಕುಟುಂಬದ ನಾಲ್ಕು ತಲೆಮಾರಿನವರು ದಿಡ್ಡಳ್ಳಿ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದು, ಬೆಳ್ಳಿಯಪ್ಪ ಅವರು ಜಾಗ ಅತಿಕ್ರಮಣ ಮಾಡಿಕೊಂಡಿದ್ದಾರೆ ಎನ್ನುವದು ಸುಳ್ಳು ಆರೋಪವೆಂದರು. ಕಳೆದ ಆರು ತಿಂಗಳಿನಿಂದ ಅಕ್ರಮ ಗುಡಿಸಲು ನಿರ್ಮಾಣದ ವಿರುದ್ಧ ಅರಣ್ಯ ಸಿಬ್ಬಂದಿಗಳು ಕಾರ್ಯಾ ಚರಣೆÉಗೆ ಮುಂದಾಗುತ್ತಿ ದ್ದಾರಾದರೂ, ಅಲ್ಲಿದ್ದ ಕೆಲವು ಗುಡಿಸಲು ವಾಸಿಗಳು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಮತ್ತು ಕತ್ತಿಯಿಂದ ಹಲ್ಲೆ ಮಾಡುವದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಕಳೆದ ಆರು ತಿಂಗಳಿನಿಂದ ನೆಲೆ ನಿಂತವರು ಮರಗಳ ರೆಂಬೆÉಗಳನ್ನು ಕಡಿದು ಸೌದೆ ಮಾರಾಟ ಮಾಡಿದ್ದಾರೆ, ಶುಂಠಿ ಬೆಳೆಯಲು ಜಾಗವನ್ನು ನೀಡಿದ್ದಾರೆ. ಲೈನ್ ಮನೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದವರನ್ನು ನಿವೇಶನ ನೀಡುವದಾಗಿ ನಂಬಿಸಿ ಹಾದಿ ತಪ್ಪಿಸುವ ಮೂಲಕ ತೀವ್ರಗಾಮಿ ಸಂಘಟನೆ ಅಮಾಯಕರನ್ನು ನಿರಾಶ್ರಿತರನ್ನಾಗಿ ಮಾಡಿದೆಯೆಂದು ನಂದಾ ಸುಬ್ಬಯ್ಯ ಆರೋಪಿಸಿದರು.
ಮಾಲ್ದಾರೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಾಜು ಮಾತನಾಡಿ, ತಟ್ಟಳ್ಳಿ ವಿಭಾಗದಲ್ಲಿ 40 ಕುಟುಂಬಗಳು ಮಾತ್ರ ಮೂಲ ಆದಿವಾಸಿಗಳಿದ್ದು, ಇತರರು ದಿಡ್ಡಳ್ಳಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ತಿಳಿಸಿದರು. ಇಲ್ಲಿನ ಪ್ರಾಣಿ ಪಕ್ಷಿ, ಔಷಧ ಸಸ್ಯ , ಜೇನು ಇನ್ನಿತರ ಅರಣ್ಯೋತ್ಪನ್ನಗಳನ್ನು ಸಂಗ್ರಹಿಸ ಬೆÉೀಕಾದರೆ ಮೀಸಲು ಅರಣ್ಯ ಅಗತ್ಯವೆಂದರು. ಇದೀಗ ಪ್ರತಿಭಟನೆ ನಡೆಸುತ್ತಿರುವವರಿಗೆ ನಿವೇಶನ ಮಂಜೂರು ಮಾಡಿದಲ್ಲಿ ತಲೆ ತಲಾಂತರಗಳಿಂದ ಇಲ್ಲೆ ವಾಸಿಸುತ್ತಿರುವ ಮೂಲ ಗಿರಿಜನ ಕುಟುಂಬಗಳಿಗೆ ನಿವೇಶನ ಅಥವಾ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಣಿ, ಸ್ಥಳೀಯರಾದ ಯತೀಶ್, ಎಂ.ಕೆ. ಕುಂಞಪ್ಪ ಹಾಗೂ ಟಿ.ಎನ್. ಗಣೇಶ್ ಉಪಸ್ಥಿತರಿದ್ದರು.