ಸೋಮವಾರಪೇಟೆ, ಸೆ.28: ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ತಾಕೇರಿ ಗ್ರಾಮದಲ್ಲಿ ನಕಲಿ ವೈದ್ಯರೊರ್ವರು ಗ್ರಾಮಸ್ಥರನ್ನು ವಂಚಿಸುತ್ತಿದ್ದು, ಇದಕ್ಕೆ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಸಾಥ್ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಿರಗಂದೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರ ಆಗ್ರಹಿಸಿದ್ದಾರೆ.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ವೈದ್ಯರೆಂದು ಪರಿಚಯಿಸಿಕೊಂಡಿರುವ ಓರ್ವರು ಮತ್ತು ಇವರೊಂದಿಗೆ ಸಹಾಯಕ ರೋರ್ವರು ಗ್ರಾಮಕ್ಕೆ ಆಗ್ರಹಿಸಿ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮುಖಾಂತರ ಐಗೂರು, ತಾಕೇರಿ, ಕಿರಗಂದೂರು ಗ್ರಾಮಗಳಿಗೆ ತೆರಳಿ ಮುಗ್ಧ ಗ್ರಾಮಸ್ಥರುಗಳಿಗೆ ನಿಮಗೆ ಕಾಯಿಲೆಗಳು ಇದೆ ಎಂದು ನಂಬಿಸಿ ಭಯಭೀತರನ್ನಾಗಿಸುತ್ತಿದ್ದಾರೆ. ಓರ್ವ ವ್ಯಕ್ತಿಗೆ ತಲಾ 300 ರೂ.ಗಳಂತೆ ತಪಾಸಣಾ ವೆಚ್ಚವನ್ನು ಪಡೆದು ಕೊಂಡು ನಕಲಿ ಔಷಧವನ್ನು ನೀಡಿರು ತ್ತಾರೆ ಎಂದು ಆರೋಪಿಸಿದರು.
ನಕಲಿ ವೈದ್ಯರ ವಂಚನೆಗೆ ಬಲಿಯಾಗಿರುವ ಈರ್ವರು ಮಹಿಳೆಯರು ಹೊರ ಜಿಲ್ಲೆಯ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಕೊಂಡ ಮೇರೆ ಯಾವದೇ ಖಾಯಿಲೆಗಳಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ತಾಕೇರಿ ಗ್ರಾಮದ ನಾಗಮಣಿ ಎಂಬವರು ತಪಾಸಣೆಗೆಂದು ವೈದ್ಯರ ಬಳಿ ತೆರಳಿದ ಸಂದರ್ಭ ಲಿವರ್ನಲ್ಲಿ ಫ್ಯಾಟ್ ಇದೆ, ಕರುಳಿನಲ್ಲಿ ಕಜ್ಜಿ ಇದೆ, ಕಿಡ್ನಿಯಲ್ಲಿ ಕಲ್ಲು ಇದೆ ಎಂದು ತಿಳಿಸಿ ಚಿಕಿತ್ಸೆಯ ಔಷಧಿ ಗಳನ್ನು ನಾವೇ ಕೊಡುತ್ತೇವೆ ಎಂದು ನಂಬಿಸಿ ಹಣ ವಸೂಲಿ ಮಾಡಿದ್ದಾರೆ.
ನಂತರ ಇವರು ಮೈಸೂರಿನ ಕಾರ್ಡಿಯೋ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಎಂಆರ್ಐ ಸ್ಕ್ಯಾನಿಂಗ್ ಮಾಡಿಸಿದ ಸಂದರ್ಭ ಯಾವದೇ ಖಾಯಿಲೆ ಇಲ್ಲ ಎಂಬದು ದೃಢಪಟ್ಟಿದೆ.
ಪ್ರತಿಯೊಂದು ಔಷಧಗಳು ಔಷಧ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಆದರೆ ಈ ವೈದ್ಯರು ಔಷಧಿ ನಿಯಂತ್ರಕರ ಅನುಮತಿಯನ್ನು ಪಡೆದಿರುವದಿಲ್ಲ. ಇದರ ಬಗ್ಗೆ ಪ್ರಶ್ನಿಸಿದಾಗ ಆಯುರ್ವೇದಿಕ್ ಔಷಧಿಗಳನ್ನು ರಸ್ತೆ ಬದಿಯಲ್ಲೂ ನಾನು ಮಾರಬಹುದು ಇದಕ್ಕೆ ಪರವಾನಗಿ ಅವಶ್ಯಕತೆ ಇಲ್ಲ ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದಾರೆ ಎಂದು ದೂರಿದರು. ವೈದ್ಯರು ಗ್ರಾಮ ಪಂಚಾಯಿತಿಯಿಂದ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಅನುಮತಿ ಪತ್ರವನ್ನು ಸಹ ಪಡೆದಿರುವದಿಲ್ಲ. ಕಿರಗಂದೂರು ಗ್ರಾಮದ ಕಾಲೋನಿಯಲ್ಲಿ 25 ಸಾವಿರಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದಾರೆ. ಗ್ರಾಮದ ಅನೇಕ ಮಹಿಳೆಯರಿಗೆ 2500ಕ್ಕೂ ಹೆಚ್ಚಿನ ಮೊತ್ತದ ಔಷಧಿ ಪೊಟ್ಟಣಗಳನ್ನು ವಿತರಿಸಿದ್ದಾರೆ ಎಂದು ಆರೋಪಿಸಿದರು.
ನಕಲಿ ವೈದ್ಯರಿಗೆ ತಾಕೇರಿ ಬಿ. ಗ್ರಾಮದ ಅಂಗನವಾಡಿ ಹಾಗೂ ಕಿರಗಂದೂರು ಗ್ರಾಮದ ಅಂಗನವಾಡಿ ಕೆಂದ್ರದ ಕಾರ್ಯಕರ್ತೆ ಯರು ಸಾಥ್ ನೀಡಿದ್ದಾರೆ. ಇವರುಗಳೇ ಗ್ರಾಮದ ಮನೆಗಳಿಗೆ ತೆರಳಿ ವೈದ್ಯರು ಬಂದಿದ್ದಾರೆ; ಪರೀಕ್ಷಿಸಿಕೊಳ್ಳಿ; ಔಷಧಿಯನ್ನು ನಾವೇ ತರಿಸಿ ಕೊಡುತ್ತೇವೆ ಎಂದು ಮನವೊಲಿಸಿ ವಂಚಿಸಿದ್ದಾರೆ. ಇವರ ಮೇಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಇಲ್ಲಿನ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ ಎಂದರು.
ಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಭರತ್, ಎಂ. ಗಣೇಶ್, ಗ್ರಾಮಸ್ಥರಾದ ಎಸ್.ಪಿ. ರಾಜು, ಕೆ.ಪಿ. ಯಜೇಂದ್ರ ಉಪಸ್ಥಿತರಿದ್ದರು.