ಮಡಿಕೇರಿ, ಜು. 13: ಸಂಬಾರ ಪದಾರ್ಥವೆಂದು ಹೇಳಿ ಆರೋಗ್ಯಕ್ಕೆ ಹಾನಿಕಾರಕವಾದ ಕ್ಯಾಸಿಯಾವನ್ನೆ ಚಕ್ಕೆಯೆಂದು ನಂಬಿಸಿ ಆಮದು ಮಾಡಿಕೊಳ್ಳುತ್ತಿದ್ದ ದಂಧೆಯ ವಿರುದ್ಧ ತಾವು ಮಾಡುತ್ತಿರುವ ಹೋರಾಟಕ್ಕೆ ಫಲ ದೊರಕಿದ್ದು, ಕೇಂದ್ರ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿದೆ ಎಂದು ಕಣ್ಣನ್ನೂರಿನ ಸಾಮಾಜಿಕ ಕಾರ್ಯಕರ್ತ ಲಿಯೋನಾರ್ಡ್ ಜಾನ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕ್ಯಾಸಿಯಾ ಮಾರಾಟದ ವಿರುದ್ಧ ಕಳೆದ ಏಳು ವರ್ಷಗಳಿಂದ ಮಾಡಿದ ಹೋರಾಟಕ್ಕೆ ಇತ್ತೀಚೆಗೆ ಜಯ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರಕ್ಕೆ ಬರೆದ ಪತ್ರಕ್ಕೆ ಸ್ಪಂದಿಸಿದ ಅಧಿಕಾರಿಗಳು ಕ್ಯಾಸಿಯಾ ಆಮದನ್ನು ನಿಷೇಧಿಸಿದ್ದಾರೆ. ಈ ಕ್ರಮದಿಂದ ಮುಂಬೈ, ಗುಜರಾತ್, ಕಲ್ಕತ್ತಾ, ಮಂಗಳೂರು ಭಾಗದಲ್ಲಿ ಕ್ಯಾಸಿಯಾ ಆಮದು ಮತ್ತು ಮಾರಾಟದಲ್ಲಿ ನಿಯಂತ್ರಣವಾಗಲಿದೆ ಎಂದು ಲಿಯೋನಾರ್ಡ್ ಜಾನ್ ಅಭಿಪ್ರಾಯಪಟ್ಟರು.
ಮಾಹಿತಿ ಹಕ್ಕು ಕಾಯ್ದೆಯಡಿ, ಕರ್ನಾಟಕ ರಾಜ್ಯ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಅರ್ಜಿ ಸಲ್ಲಿಸಿ ಕ್ಯಾಸಿಯಾ ಮಾರಾಟ ಮತ್ತು ಅದರಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಕೋರಲಾಗಿತ್ತು.
ಕಳೆದ ಏಳು ವರ್ಷಗಳ ಹೋರಾಟಕ್ಕೆ ಕೊನೆಗೂ ಜಯ ಲಭಿಸಿದೆ ಎಂದು ಲಿಯೋನಾರ್ಡ್ ಜಾನ್ ಹರ್ಷ ವ್ಯಕ್ತಪಡಿಸಿದರು.