ಎಸ್ಡಿಪಿಐ ವತಿಯಿಂದ ಪ್ರತಿಭಟನೆ
ಮಡಿಕೇರಿ, ಆ. 6: ದೇಶಾದ್ಯಂತ ದಲಿತರ ವಿರುದ್ಧ ದೌರ್ಜನ್ಯ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಲಾಗಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಎಸ್ಡಿಪಿಐ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಗುಜರಾತ್ ರಾಜ್ಯದ ಸೋಮನಾಥ ಜಿಲ್ಲೆಯ ಉನಾದ ಮೋಡಾ ಸಮಾಲಿಯಾಲ ಗ್ರಾಮದಲ್ಲಿ ಇತ್ತೀಚೆಗೆ ದನದ ಚರ್ಮವನ್ನು ಸುಲಿದರು ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೋ ಮಾಂಸ ತಿಂದರು ಎಂಬ ನೆಪವೊಡ್ಡಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಿರುವದು, ಅಲ್ಲದೆ ಬಿಎಸ್ಪಿ ನಾಯಕಿ ಮಾಯಾವತಿ ಅವರ ವಿರುದ್ಧ ಉತ್ತರ ಪ್ರದೇಶದ ಬಿಜೆಪಿ ರಾಜ್ಯ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಮಾನಹಾನಿಕರ ಹೇಳಿಕೆ ನೀಡಿದ್ದು, ಎರಡು ಘಟನೆಗಳು ಖಂಡನೀಯ ಎಂದು ಪ್ರತಿಭಟನಾಕಾ ರರು ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿಯ ಬಿಜೆಪಿ ಸರಕಾರವು ಅಸ್ತಿತ್ವಕ್ಕೆ ಬಂದ ನಂತರ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರ ಮೇಲೆ ಒಂದಿಲ್ಲೊಂದು ದೌರ್ಜನ್ಯ ನಡೆಯುತ್ತಲೇ ಬಂದಿದೆ. ಬಿಜೆಪಿಯ ಹಿಂಬಾಲಕರು, ಗೋರಕ್ಷಣೆಯ ನೆಪದಲ್ಲಿ ನರಭಕ್ಷಣೆಯನ್ನು ಮಾಡಲು ಹೊರಟಂತಿದೆ ಎಂದು ಆರೋಪಿಸಿದ ಅವರು, ದೇಶವ್ಯಾಪಿ ಹೋರಾಟ ಕೈಗೊಳ್ಳಬೇಕಾಗಿದೆ. ಶಾಂತಿಯುತ ಜಿಲ್ಲೆಯಲ್ಲಿ ಅಶಾಂತಿ ಮೂಡಿಸುವ ಕೆಲಸ ನಡೆಯುತ್ತಿದೆ. ದೇವಟ್ ಪರಂಬ್ ಹೆಸರಿನಲ್ಲಿ ಶಾಂತಿ ಕದಡುತ್ತಿದೆ. ಟಿಪ್ಪು ದೇವಟ್ ಪರಂಬ್ನಲ್ಲಿ ಯಾವದೇ ರಕ್ತಪಾತ ನಡೆಸಿಲ್ಲ ಎಂದು ಹೇಳಿದರು.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಅವರೇ ಕಾರಣರಾಗಿದ್ದಾರೆ. ಆದರೆ ಪ್ರಕರಣ ನಡೆದ ಸಂದರ್ಭ ಕುಟುಂಬದವರು ನಡೆದುಕೊಂಡ ರೀತಿ ದುರಂತವಾಗಿದೆ. ಗಣಪತಿ ಅವರು ಆರೋಪಿಸಿದಂತೆ ಬಿಜೆಪಿ ಸರಕಾರದ ಅವಧಿಯಲ್ಲಿ ಕಿರುಕುಳ ನಡೆದಿತ್ತು. ಆದರೆ ಅವರು ಬಿಜೆಪಿ ವಿರುದ್ಧ ಆರೋಪ ಮಾಡುವದನ್ನು ಬಿಟ್ಟು ಈಗಿನ ಸರಕಾರದ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಎಸ್ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಜಿಲ್ಲಾ ಖಜಾಂಚಿ ಅಬ್ದುಲ್ ಅಡ್ಕಾರ್, ನಗರ ಅಧ್ಯಕ್ಷ ಪೀಟರ್, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಯೋಗೇಶ್ ಕುಮಾರ್, ಪಿಎಫ್ಐ ಜಿಲ್ಲಾಧ್ಯಕ್ಷ ಅಬೂಬಕರ್ ಹಾಗೂ ಇನ್ನಿತರರು ಇದ್ದರು.