ಸೋಮವಾರಪೇಟೆ, ಜು. 21: ದೇಶದ ಜನಸಂಖ್ಯೆಯಲ್ಲಿ ಸರಾಸರಿ ಅರ್ಧ ಪಾಲು ಹೊಂದಿರುವ ಮಹಿಳೆಯರ ಭಾವನೆಗಳಿಗೆ ಸಮಾಜ ಗೌರವ ಕೊಡಬೇಕು. ಮಹಿಳೆಯರಿಗೆ ಕೆಲವು ಕಡೆಗಳಲ್ಲಿ ದೇವಾಲಯ ಪ್ರವೇಶಕ್ಕೆ ನಿಬರ್ಂಧವಿದ್ದು, ಈ ಕ್ರಮವನ್ನು ಹೋಗಲಾಡಿಸ ಬೇಕು. ಇಂತಹ ಅಸಾಂವಿಧಾನಿಕ ಕ್ರಮವನ್ನು ದೇವಾಲಯಗಳ ಆಡಳಿತ ಮಂಡಳಿ ಪ್ರಮುಖರೇ ತೆಗೆದು ಹಾಕಬೇಕು ಎಂದು ಚಿತ್ರದುರ್ಗ ಬೃಹನ್ಮಠದ ಪೀಠಾಧ್ಯಕ್ಷ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಇಲ್ಲಿನ ಬೇಳೂರು ಮಠದಲ್ಲಿ ಕಳೆದ ಮೂರು ದಿನಗಳಿಂದ ಜರುಗಿ ಇಂದು ಮುಕ್ತಾಯವಾದ ಚಿಂತನಾ ಕಾರ್ಯಾಗಾರದ ನೇತೃತ್ವ ವಹಿಸಿದ್ದ ಮುರುಘಾ ಶರಣರು ಪತ್ರÀಕರ್ತ ರೊಂದಿಗೆ ಅಭಿಮತ ವ್ಯಕ್ತಪಡಿಸಿದರು.
ಲಿಂಗ ತಾರತಮ್ಯ ಸರಿಯಲ್ಲ. ದೇಶದ ಸಂವಿಧಾನವನ್ನು ಓದಿಕೊಂಡರೆ ಇಂತಹ ವ್ಯತ್ಯಾಸಗಳು ಸಂಭವಿಸುವದಿಲ್ಲ. ಸಂವಿಧಾನದತ್ತ ವಾಗಿ ಎಲ್ಲರೂ ಸಮಾನರೇ ಆಗಿದ್ದಾರೆ. ಮಹಿಳೆಯರ ದೇವಾಲಯ ಪ್ರವೇಶ ನಿಷೇಧ ಆಚರಣೆಗಳು ಚಾಲ್ತಿಯಲ್ಲಿರಲೇಬಾರದು ಎಂದರು.
ರಾಜ್ಯದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಯಾಗದ ಬಗ್ಗೆ ಪ್ರಶ್ನಿಸಿದ ಸಂದರ್ಭ, ಸಚಿವ ಸಂಪುಟ ಸಮಿತಿ ಯಲ್ಲಿಯೇ ಈ ಬಗ್ಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡಿವೆ. ಶತಮಾನಗಳಿಂದ ಆಚರಣೆಯಲ್ಲಿರುವ ಕೆಲವೊಂದು ಮೂಢನಂಬಿಕೆಗಳ ಬಗ್ಗೆ ಜನಜಾಗೃತಿ ಆಗಬೇಕಿದೆ. ಪರಿವರ್ತನೆ ನಿಧಾನಗತಿ ಯಾಗುತ್ತದೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರುವ ಬದಲು ಸಾಮಾಜಿಕವಾಗಿಯೇ ನ್ಯಾಯ ಸಮ್ಮತ ತೀರ್ಮಾನವಾಗಬೇಕು ಎಂದರು.
ಕೆಲವೊಂದು ಸ್ವಾಮೀಜಿಗಳ ಹಗರಣಗಳಿಂದಾಗಿ ಇಡೀ ಸ್ವಾಮೀಜಿಗಳ ಬಗ್ಗೆ ಸಮಾಜದಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತಿರುವ ಬಗ್ಗೆ ಪ್ರಶ್ನಿಸಿದ ಸಂದರ್ಭ, ಸ್ವಾಮೀಜಿ ಯಾದವರು ಸನ್ಮಾರ್ಗದಲ್ಲಿ ಸತ್ಕಾರ್ಯಗಳನ್ನು ಮಾಡಿದರೆ ಮಾತ್ರ ಗೌರವ ಸಲ್ಲುತ್ತದೆ. ಕೆಲವೊಮ್ಮೆ ಸತ್ಕಾರ್ಯ ಮಾಡುವವರಿಗೆ ಕಿರುಕುಳ, ಸವಾಲು ಇದ್ದೇ ಇರುತ್ತದೆ. ಕೆಲವೊಮ್ಮೆ ಅವಮಾನಗಳನ್ನೂ ಸನ್ಮಾನ ಎಂದೇ ತಿಳಿದು ಮುಂದುವರೆಯಬೇಕು. ಸಮಾಜದಲ್ಲಿ ಗೌರವ ಉಳಿಸಿಕೊಂಡು ಹೋಗುವದೇ ದೊಡ್ಡ ಜವಾಬ್ದಾರಿ ಆಗಿದೆ ಎಂದರು.
ಆಸ್ತಿ ಮಾರಾಟ ಬೇಡ: ಕೊಡಗಿನವರು ತಮ್ಮ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಬಾರದು. ಕೊಡಗಿನ ಭೌಗೋಳಿಕ ಪ್ರದೇಶ, ಪರಿಸರ ವಿಶಿಷ್ಟವಾಗಿದ್ದು, ಸಂಸ್ಕøತಿ, ಆಚಾರ, ವಿಚಾರಗಳು ಉಳಿಯಬೇಕಿದೆ. ಇಲ್ಲಿನ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿದರೆ ಮುಂದಿನ ದಿನಗಳಲ್ಲಿ ಅಸಹಾಯಕ ಸ್ಥಿತಿಗೆ ತಲಪಬೇಕಾಗು ತ್ತದೆ. ಈ ಬಗ್ಗೆ ಕೊಡಗಿನವರು ಜಾಗೃತಿ ವಹಿಸಬೇಕಿದೆ ಎಂದು ಮುರುಘಾ ಶರಣರು ಕಿವಿಮಾತು ಹೇಳಿದರು.
ಕೊಡಗಿನಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿ ಬೆಳೆಗಳು ಅವಸಾನದತ್ತ ಸಾಗಿದ್ದರಿಂದ ಪರ್ಯಾಯವಾಗಿ ಸ್ಥಳೀಯರು ಹೋಂಸ್ಟೇ ಉದ್ಯಮ ನಡೆಸುತ್ತಿದ್ದಾರೆ. ಕೊಡಗಿನ ಪ್ರಮುಖ ಬೆಳೆಯಾದ ಕಾಫಿಗೆ ನಿರ್ಧಿಷ್ಟ ಬೆಲೆ ನಿಗದಿಯಾಗಬೇಕು. ನಷ್ಟವನ್ನು ಭರಿಸಿ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಡಗಿನ ಕಿತ್ತಳೆಯೂ ನಶಿಸಿದ್ದು, ಇತರ ಬೆಳೆಗಳಿಗೂ ನಿರ್ಧಿಷ್ಟ ಬೆಲೆ ಇಲ್ಲದ್ದರಿಂದ ಸಹಜವಾಗಿ ಆದಾಯದ ಮೂಲಗಳಿಗಾಗಿ ಇತರ ಉದ್ಯಮ ಗಳನ್ನು ಅವಲಂಬಿಸುವಂತಾಗಿದೆ ಎಂದು ಅಭಿಪ್ರಾಯಿಸಿದರು.