ನಾಪೆÇೀಕ್ಲು, ಜ. 26: ಜ್ಞಾನಶಕ್ತಿ, ಇಚ್ಛಾ ಶಕ್ತಿ, ಕ್ರಿಯಾಶಕ್ತಿ ಇದ್ದಾಗಲೂ ಎಲ್ಲವನ್ನೂ ನಡೆಸಲು ಸಾಧ್ಯವಿಲ್ಲ; ಅದಕ್ಕಿಂತ ಮೀರಿದ ಶಕ್ತಿಯೇ ದೇವತಾ ಶಕ್ತಿ. ಪೂರ್ವ ಸಂಪ್ರದಾಯದಂತೆ ಒಂದು ನಿಯಮಕ್ಕೆ ಬದ್ಧರಾಗಿ ಬದುಕುವದೇ ಧರ್ಮ. ದೇವರ ಕಣ್ಣು ತಪ್ಪಿಸಿ ಯಾವದೇ ತಪ್ಪು ಕೆಲಸ ಮಾಡಲು ಸಾಧ್ಯವಿಲ್ಲವೆಂಬ ಭಾವನೆ ಇದ್ದಾಗ ನಮ್ಮಲ್ಲಿ ತಪ್ಪುಗಳಾಗುವದಿಲ್ಲ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಅವರು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನವೀಕರಣ ಪುನರ್‍ಪ್ರತಿಷ್ಠೆ ಅಷ್ಟಬಂಧಕಲಶೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಗೌರವಾಧ್ಯಕ್ಷ ಡಾ. ಕೆ.ವಿ. ಚಿದಾನಂದ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಧಾರ್ಮಿಕ ಉಪನ್ಯಾಸ ನೀಡಿದ ರಾಜ್ಯ ಸಂಸ್ಕಾರ ಭಾರತೀಯ ಲೋಕ ಕಲಾವಿದ ಪ್ರಮುಖ್ ದಯಾನಂದ ಕತ್ತಲ್‍ಸಾರ್ ಮಾತನಾಡಿ, ತುಳುನಾಡಿನಲ್ಲಿರುವ ಜನ ಸತ್ಯದ ಮಣ್ಣಿನಲ್ಲಿ ಬದುಕುತ್ತಿದ್ದಾರೆ. ಇಲ್ಲಿ ಸುನಾಮಿ, ಭೂಕಂಪ, ಚಂಡಮಾರುತದಂತಹ ದುರಂತಗಳು ನಡೆಯುವದಿಲ್ಲ. ಏಕೆಂದರೆ ನಾವೆಲ್ಲ ಪ್ರಕೃತಿ ಮಾತೆಯ ಆರಾಧಕರು. ಈ ನೆಲದ ನಂಬಿಕೆಗಳು ಮೂಢನಂಬಿಕೆ ಗಳಲ್ಲ. ಅವು ಮೂಲನಂಬಿಕೆಗಳು. ಇಂದು ತುಳುನಾಡಿನ ಸತ್ಯದ ಮಣ್ಣಿನಲ್ಲಿ ಅಂತರ್‍ಜಲದ ನದಿತಿರುವು ನಂತಹ ಯೋಜನೆಗಳ ಮೂಲಕ ಸತ್ಯದ ಮಣ್ಣಿಗೆ ಅಪಚಾರ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ನಮ್ಮ ಮೂಲ ನಂಬಿಕೆಗಳಿಗೆ ಯಾವತ್ತೂ ಅಪಚಾರವಾಗಬಾರದು. ಆಗದಂತೆ ಧಾರ್ಮಿಕ ನೆಲೆಗಟ್ಟಿನಲ್ಲಿ ಒಂದಾಗಬೇಕು ಎಂದು ಹೇಳಿದರು. ಕ್ಷೇತ್ರದ ತಂತ್ರಿಗಳಾದ ವೇ. ಮೂ. ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳನ್ನು ಹಾಗೂ ಇತರ ಅತಿಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಉತ್ಸವದ ಪೋಷಕರಾದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿದರು.
ಅತಿಥಿಗಳಾಗಿ ಮಡಿಕೇರಿ ತಾ.ಪಂ. ಅಧ್ಯಕ್ಷೆ ತಕ್ಕಡೆ ಶೋಭಾ, ದ.ಕ. ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ದೇವಳದ ಮಾಜಿ ಆಡಳಿತ ಶ್ಯಾನುಭೋಗ ಡಿ.ಬಿ. ಬಾಲಕೃಷ್ಣ ಭಾಗವಹಿಸಿದ್ದರು. ದೇವತಕ್ಕರಾದ ರಾಜಗೋಪಾಲ್ ರಾಮಕಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆರ್.ಡಿ. ಆನಂದ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ಬಂಗಾರಕೋಡಿ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ನಿಡ್ಯಮಲೆ, ಆರ್ಥಿಕ ಸಮಿತಿ ಅಧ್ಯಕ್ಷ ಡಾ. ಎನ್.ಎ. ಜ್ಞಾನೇಶ್, ಕಾರ್ಯದರ್ಶಿ ಗಳಾದ ವಿಶ್ವನಾಥ ಕುಂಬಳಚೇರಿ, ತಿಲೋತ್ತಮ ಅಡ್ಕ, ತೇಜಪ್ರಸಾದ್ ಎ.ಎಸ್., ಕೋಶಾಧಿಕಾರಿ ಹರಿಶ್ಚಂದ್ರ ಮುಡ್ಕಜೆ, ಕಾರ್ಯಕ್ರಮ ಸಮಿತಿಯ ಸಂಚಾಲಕ ಪುರುಷೋತ್ತಮ ಕಿರ್ಲಾಯ ಮೊದಲಾದವರು ಉಪಸ್ಥಿತರಿದ್ದರು. ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಚಿನ್ನಪ್ಪ ಅಡ್ಕ ವಂದಿಸಿ ಪ್ರಸನ್ನ ನಿಡ್ಯಮಲೆ ಹಾಗೂ ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು.
-ದುಗ್ಗಳ ಸದಾನಂದ