ಕುಶಾಲನಗರ, ಜೂ. 7: ದೇವಟ್ಪರಂಬು ಎನ್ನುವ ಹೆಸರಿನಲ್ಲಿ ಸುಳ್ಳು ಇತಿಹಾಸ ಸೃಷ್ಟಿಸುವ ಮೂಲಕ ಕೊಡವ ಸಮುದಾಯದ ವರ್ಚಸ್ಸನ್ನು ಕಡಿಮೆ ಮಾಡಲು ಸಿಎನ್ಸಿ ಸಂಘಟನೆ ಮುಂದಾಗಿರುವದು ದುರಂತ ಎಂದು ಜಿಲ್ಲೆಯ ಗೌಡ ಸಮುದಾಯದ ಪ್ರಮುಖರು ಆರೋಪಿಸಿದ್ದಾರೆ.
ಸ್ವಯಂ ಘೋಷಿತ ದೇವಟ್ ಪರಂಬು ಸ್ಮಾರಕ ವಿರೋಧಿಸಿ ಕುಶಾಲನಗರದ ಗೌಡ ಸಮಾಜ ಆಶ್ರಯದಲ್ಲಿ ಕೊಡಗು ಜಿಲ್ಲೆಯ ವಿವಿಧ ಗೌಡ ಸಮಾಜಗಳ ಸಹಯೋಗ ದೊಂದಿಗೆ ಮೆರವಣಿಗೆ ಮತ್ತು ಮಾನವ ಸರಪಳಿ ರಚಿಸಲಾಯಿತು. ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಗೌಡ ಸಮುದಾಯದ ಪ್ರಮುಖರು, ತಲಕಾವೇರಿ-ಭಾಗಮಂಡಲ ‘ಜೀವನದಿ ಕಾವೇರಿ’ಯ ಮೂಲ ಸ್ಥಾನವಾಗಿದ್ದು, ಇದು ಆರಾಧನಾ ಕೇಂದ್ರವಾಗುವದ ರೊಂದಿಗೆ ಸಾಂಸ್ಕøತಿಕ ಕ್ಷೇತ್ರವಾಗಿದೆ. ಇದೀಗ ಕೆಲವು ಸಂಘಟನೆಗಳು ದೇವಟ್ ಪರಂಬು ಎನ್ನಲಾದ ಪ್ರದೇಶದಲ್ಲಿ ಸ್ಮಾರಕದ ನೆಪದಲ್ಲಿ ಕೊಡಗು ಜಿಲ್ಲೆಯ ಗೌಡ ಜನಾಂಗದ ವಿರುದ್ಧ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿರುವದನ್ನು ಪ್ರತಿಭಟನಾಕಾರರು ಖಂಡಿಸ ಬೇಕಾಗಿದೆ ಎಂದರು.
ಜಾತಿ, ಜನಾಂಗದ ಹೆಸರಿನಲ್ಲಿ ಗೊಂದಲ ನಿರ್ಮಿಸುತ್ತಿರುವ ಕೆಲವು ವ್ಯಕ್ತಿಗಳ ಮೂಲಕ ಅಶಾಂತಿ ಸೃಷ್ಟಿಯಾಗುತ್ತಿದೆ. ಭಾಗಮಂಡಲ-ತಲಕಾವೇರಿ ದೇವಾಲಯಗಳ ಆಡಳಿತ ಮಂಡಳಿಯಲ್ಲಿ ಸ್ವಯಂಘೋಷಿತ ಸಂಘಟನೆಗಳು ಹಸ್ತಕ್ಷೇಪ ಮಾಡುತ್ತಿವೆ ಎಂದು ಆರೋಪಗಳು ಕೇಳಿಬಂದವು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಕೀಲ ಕೆ.ಆರ್.ವಿದ್ಯಾಧರ್, ಸಿಎನ್ಸಿ ಪ್ರಮುಖ ನಾಚಪ್ಪ ಕೊಡವ ಸಮುದಾಯದ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ವರ್ತಿಸುತ್ತಿದ್ದು, ಊಹಾಪೋಹ ಕೇಂದ್ರವಾದ ದೇವಟ್ ಪರಂಬು ಹೆಸರಿನಲ್ಲಿ ಮುಗ್ಧ ಜನರನ್ನು ವಂಚಿಸುತ್ತಿದ್ದಾರೆ ಎಂದರು. ಇದೀಗ ಕಾನೂನು ಬಾಹಿರವಾಗಿ ದೇವಟ್ ಪರಂಬು ಸ್ಮಾರಕ ನಿರ್ಮಿಸಲು ಹೊರಟಿರುವದು ಸರಿಯಲ್ಲ. ಈ ಬಗ್ಗೆ ಕೊಡಗಿನ ಜನತೆ ಎಚ್ಚರ ವಹಿಸಬೇಕಾಗಿದೆ ಎಂದರು. ದೇವಟ್ ಪರಂಬು ಮಾತ್ರ ನಾಚಪ್ಪ ಬೆಂಬಲಿಗರ ಬೀಡಾಗಿದ್ದು ನಾಚಪ್ಪ ಅವರಿಂದ ಕೊಡವರ ಉದ್ಧಾರ ಅಸಾಧ್ಯ ಎಂದರು. ನಾಚಪ್ಪ ಓರ್ವ ನಕ್ಸಲ್ ಬೆಂಬಲಿಗ ಎನ್ನುವದನ್ನು ಹಂಪಿ ವಿವಿಯ ಇತಿಹಾಸ ತಜ್ಞ ತಂಬಂಡ ವಿಜಯ ಪೂಣಚ್ಚ ದಾಖಲಿಸಿದ್ದಾರೆ ಎಂದು ವಿದ್ಯಾಧರ್ ಮಾಹಿತಿ ನೀಡಿದರು. ಕೊಡವ ಸಮಾಜ ನಾಚಪ್ಪ ಅವರ ಹಿನೆÀ್ನಲೆ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕಾಗಿದೆ. ಒಂದು ವೇಳೆ ಸಿಎನ್ಸಿ ನಾಚಪ್ಪ ಕಳಂಕ ರಹಿತ ಆದಲ್ಲಿ ನಾವು ಕೂಡ ನಾಯಕತ್ವ ಒಪ್ಪುತ್ತೇವೆ ಎಂದರು.
ನಾವು ಕೊಡಗು ಸೌಹಾರ್ದ ವೇದಿಕೆ ರೂಪಿಸಿದ್ದು, ಎಲ್ಲರೂ ಇಂತಹ ವ್ಯಕ್ತಿಗಳ ಬಗ್ಗೆ ನಿಗಾವಹಿಸ ಬೇಕಾಗಿದೆ ಎಂದರು. ತಲಕಾವೇರಿ ಮತ್ತು ಭಾಗಮಂಡಲದಲ್ಲಿ ತಮ್ಮ ಕಡೆಯವರನ್ನು
ತಕ್ಕ ಮುಖ್ಯಸ್ಥರಾಗಿ ನೇಮಕಗೊಳಿಸುವದು ನಾಚಪ್ಪ ಹುನ್ನಾರವಾಗಿದೆ. ನಾಚಪ್ಪ ಮಾಡುತ್ತಿರುವ ಆಟಕ್ಕೆ ಕೊಡವರು ಬಲಿಯಾಗುತ್ತಿದ್ದಾರೆ ಎಂದರು. ತನ್ನನ್ನು ನಕ್ಸಲೈಟ್ ಎಂದು ಬಿಂಬಿಸುತ್ತಿರುವ ನಾಚಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿದ್ಯಾಧರ್, ದೇಶ ದ್ರೋಹಿಗಳಿಗೆ, ನಕ್ಸಲೈಟ್ಗಳಿಗೆ ಯಾವದೇ ಅಪರಾಧಿಗಳಿಗೆ ವಕಾಲತ್ತು ವಹಿಸುವದು ವಕೀಲರ ಹಕ್ಕಾಗಿದೆ ಎಂದು ಸ್ಪಷ್ಟಪಡಿಸಿದರು.
ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸದಸ್ಯ ಮನೋಜ್ ಕುಯ್ಯಮುಡಿ ಮಾತನಾಡಿ, ಅಕ್ರಮವಾಗಿ ದೇವಟ್ ಪರಂಬು ಸ್ಮಾರಕ ನಿರ್ಮಾಣ ಮಾಡಿದಲ್ಲಿ ಉಗ್ರ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದರು. ಜಿಲ್ಲೆಯ ಜಮ್ಮಾ ಸಮಸ್ಯೆ ಸೇರಿದಂತೆ ಅಭಿವೃದ್ಧಿ ಬಗ್ಗೆ ಹೋರಾಟ ಮಾಡುವ ಬದಲು ಸಿಎನ್ಸಿ ಪ್ರಮುಖ ನಾಚಪ್ಪ ಮೀಸಲು ಅರಣ್ಯದಲ್ಲಿ ಕಲ್ಲು ನೆಟ್ಟು ಜಿಲ್ಲೆಯ ಸಮುದಾಯಗಳ ನಡುವೆ ಗೊಂದಲ ಉಂಟು ಮಾಡುತ್ತಿದ್ದಾರೆ ಎಂದರು. ಕೊಡಗು ಗೌಡ ಫೆಡರೇಷನ್ ಉಪಾಧ್ಯಕ್ಷ ಭರತ್ ಕುದುಕುಳಿ ಮಾತನಾಡಿ, ದೇವಟ್ ಪರಂಬು ಹತ್ಯಾಕಾಂಡ ಹೆಸರಿನಲ್ಲಿ ನಡೆಯುತ್ತಿರುವ ಘಟನೆಗಳ ಮೂಲಕ ಜಿಲ್ಲೆಯಲ್ಲಿ ಜಾತಿ ಜನಾಂಗದ ನಡುವೆ ವಿಷ ಬೀಜ ಬಿತ್ತುವದನ್ನು ತಕ್ಷಣ ನಿಲ್ಲಿಸಬೇಕಾಗಿದೆ ಎಂದು ಆಗ್ರಹಿಸಿದರು. ಅಮರ ಸುಳ್ಯ ದಂಗೆ ಸಂಘಟಿಸಿದವರಿಗೆ ಕಿರುಕುಳ ಮುಂದುವರೆಯುತ್ತಿದೆ ಎಂದರು. ಲಿವಾಕ್ ಸ್ಥಾಪಕ ಸದಸ್ಯರಾದ ನಮಗೆ ಎಲ್ಲಾ ಮಾಹಿತಿಯಿದ್ದು, ಲೀವಾಕ್ ಜನರನ್ನು ಹಾದಿ ತಪ್ಪಿಸಿದ್ದ ಸಂಘಟನೆಯಾಗಿದೆ ಎಂದು ದೂರಿದರು. ಗೌಡ ಜನಾಂಗಕ್ಕೂ ಕೊಡವರಷ್ಟೇ ಹಕ್ಕಿದೆ ಎಂದು ಭರತ್ ಪ್ರತಿಪಾದಿಸಿದರು. ಕುಶಾಲನಗರ ಗೌಡ ಸಮಾಜದ ಪ್ರಮುಖ ಆನಂದ್ ಕರಂದ್ಲಾಜೆ ಮಾತನಾಡಿ, ನಾಡಿನ ಜನತೆ ಕಾವೇರಿ ಮಾತೆಯನ್ನು ಸಾಮೂಹಿಕವಾಗಿ ಪೂಜಿಸುತ್ತಿದ್ದು, ಇದೀಗ ಕೆಲವು ಸಂಘಟನೆಗಳ ಪ್ರಮುಖರು ಕೊಡವರ ಆರಾಧ್ಯ ದೈವ ಎಂದು ಹೇಳಲು ಹೊರಟಿರುವದು ವಿಪರ್ಯಾಸ ಎಂದರು. ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಭಕ್ತಾದಿಗಳಿಗೆ ನಿರ್ಬಂಧÀ ವಿಧಿಸಿರುವ ಜಿಲ್ಲಾಡಳಿತ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಗೌಡ ಸಮಾಜದಿಂದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ತೆರಳಿ ಕುಶಾಲನಗರದ ಗಣಪತಿ ದೇವಾಲಯದ ಬಳಿ ಸ್ವಲ್ಪ ಕಾಲ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿದರು. ಈ ಸಂದರ್ಭ ರಸ್ತೆ ತಡೆಯೊಂದಿಗೆ ವಾಹನ ಸಂಚಾರಕ್ಕೆ ಸ್ವಲ್ಪ ಕಾಲ ಅಡ್ಡಿಯುಂಟಾಯಿತು. ನಂತರ ಪ್ರತಿಭಟನಾಕಾರರು ನಾಡ ಕಚೇರಿಗೆ ತೆರಳಿ ಉಪ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್, ಉಪಾಧ್ಯಕ್ಷ ಚಿಲ್ಲನ ಗಣಿಪ್ರಸಾದ್, ಪೊನ್ನಚ್ಚನ ಮೋಹನ್, ನಡುವಟ್ಟಿರ ಮೋಹನ್ ಮತ್ತು ಗೌಡ ಯುವ ವೇದಿಕೆಯ ಅಧ್ಯಕ್ಷ ರಿಶಿಕ್ ಪುದಿನೆರ, ಕೊಡಗು ಗೌಡ ಫೆಡರೇಷನ್ನ ಸೂರ್ತಲೆ ಸೋಮಣ್ಣ, ಮಡಿಕೇರಿ ಗೌಡ ಸಮಾಜ ಅಧ್ಯಕ್ಷ ಪೇರಿಯನ ಜಯಕುಮಾರ್, ಮನೋಜ್ ಕುಯ್ಯಮುಡಿ, ಪಟ್ಟೆಮನೆ ಶೇಷಪ್ಪ, ಗೌಡ ಮಹಿಳಾ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘಗಳ ಪ್ರಮುಖರು, ಭಾಗಮಂಡಲ ಗೌಡ ಸಮಾಜ, ಕೊಡಗು ಗೌಡ ಯುವಕ ಸಂಘ, ಮಡಿಕೇರಿ ಗೌಡ ಯುವಕ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಇದ್ದರು.