ಮಡಿಕೇರಿ, ಆ. 4: ಅಯ್ಯಂಗೇರಿ ಬಳಿಯ ದೇವಟ್ ಪರಂಬು ಎಂಬಲ್ಲಿನ ಅರಣ್ಯ ಪ್ರದೇಶದಲ್ಲಿ ಕೊಡವ ನ್ಯಾಷನಲ್ ಸಂಘಟನೆ ಅಕ್ರಮ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿದೆ ಎಂದು ಆಪಾದಿಸಿ ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳುವಂತೆ ಹೂಡಲಾಗಿದ್ದ ಮೊಕದ್ದಮೆಯನ್ನು ರಾಜ್ಯ ಉಚ್ಛ ನ್ಯಾಯಾಲಯ ರದ್ದುಗೊಳಿಸಿ ಆದೇಶ ಹೊರಡಿಸಿದೆ.
1785ರಲ್ಲಿ ಟಿಪ್ಪು ಸುಲ್ತಾನ್ ಹಾಗೂ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆಗಳು ಧಾಳಿ ಮಾಡಿ, ದೇವಟ್ ಪರಂಬು ಎಂಬ ಸ್ಥಳದಲ್ಲಿ ಸಹಸ್ರಾರು ಸಂಖ್ಯೆಯ ನಿರಾಯುಧ ಕೊಡವರ ಹತ್ಯೆ ಮಾಡಿದ ಕುರುಹಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿದವರ ಸ್ಮರಣೆಗಾಗಿ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿತ್ತು. ಈ ಸಂಬಂಧ ಕಳೆದ ಡಿಸೆಂಬರ್ 21ರಂದು ಅಯ್ಯಂಗೇರಿ ಬಳಿಯ ಅರಣ್ಯ ಪ್ರದೇಶದಲ್ಲಿ ಸ್ಮಾರಕ ಶಿಲೆ ನೆಟ್ಟು ಶ್ರದ್ಧಾಂಜಲಿ ಅರ್ಪಿಸುವ ಕಾರ್ಯ ನಡೆಸಿತ್ತು.
ಆದರೆ ಈ ಪ್ರದೇಶ ಮೀಸಲು ಅರಣ್ಯಕ್ಕೆ ಸೇರಿದ್ದಾಗಿದ್ದು, ಸಿಎನ್‍ಸಿ ಅಕ್ರಮ ಪ್ರವೇಶ ಮಾಡಿ, ಕಾನೂನು ಬಾಹಿರವಾಗಿ ಶಿಲೆಯನ್ನು ನೆಟ್ಟಿದೆ. ಇದನ್ನು ತೆರವುಗೊಳಿಸಿ ಸಿಎನ್‍ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಅರಣ್ಯ ಇಲಾಖೆ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹಾಗೂ 12 ಮಂದಿ ಕಾರ್ಯಕರ್ತರ ವಿರುದ್ಧ ಮೊಕದ್ದಮೆ ದಾಖಲಿಸಿತ್ತು. ಈ ಸಂಬಂಧ ಜಾಮೀನು ಪಡೆದು ಹೊರಬಂದಿದ್ದ ಸಿಎನ್‍ಸಿ ಕಾರ್ಯಕರ್ತರು ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ್ ಬೈರಾ ರೆಡ್ಡಿ ಅವರು, ಮೊಕದ್ದಮೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸಿಎನ್‍ಸಿ ಪರ ವಕೀಲರಾದ ಬಲ್ಲಚಂಡ ಬೆಳ್ಯಪ್ಪ ಅವರು, ಯಾವದೇ ಕಾನೂನು ಬಾಹಿರ ಚಟುವಟಿಕೆ ನಡೆಸಿಲ್ಲ. ದೇವಟ್ ಪರಂಬು ಕೊಡವರ ಶ್ರದ್ಧಾ ಕೇಂದ್ರವಾಗಿದೆ. ಜೀವ ಬಲಿದಾನ ಮಾಡಿದ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಂಬಂಧ ಶಿಲೆಯನ್ನು ಮಾತ್ರ ಅಳವಡಿಸಲಾಗಿದೆ. ಅಲ್ಲದೆ ಪ್ರದೇಶವನ್ನು ಸ್ಮಾರಕವನ್ನಾಗಿ ಪರಿಗಣಿಸಲು ಅನುಮತಿ ಕೋರಲಾಗಿದ್ದು, ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ವಾದ ಮಂಡಿಸಿದರು. ಅರಣ್ಯ ಇಲಾಖೆ ಮೊಕದ್ದಮೆ ದಾಖಲಿಸುವ ಮುನ್ನ ನಿಯಮಗಳನ್ನು ಪರಿಗಣಿಸಿಲ್ಲ ಎಂದು ಮನವರಿಕೆ ಮಾಡಿದರು.
ವಾದ - ವಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಮೊಕದ್ದಮೆಯನ್ನು ರದ್ದುಗೊಳಿಸಿ ದ್ದಾರೆ. ದೇವಟ್ ಪರಂಬು ಜಾಗವು ಕೊಡವರಿಗೆ ಪವಿತ್ರವಾಗಿದ್ದು, ಅಲ್ಲಿ ಯಾವದೇ ಕಾನೂನು ಬಾಹಿರ ಚಟುವಟಿಕೆ ನಡೆದಿಲ್ಲ ಎಂದು ನಾಚಪ್ಪ ಪರ ವಕೀಲರು ಮನವಿ ಮಾಡಿದ್ದು, ಸ್ಮಾರಕ ಸ್ಥಾಪನೆಗೂ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದಿದ್ದಾರೆ. ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಮಾರಕ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ಹಾಗಾದಲ್ಲಿ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಗಣಿಸಬೇಕು ಮತ್ತು ಅವರ ಚಟುವಟಿಕೆ ನ್ಯಾಯ ಬದ್ಧಗೊಳಿಸಿ ಬರುವ ಅನುಮತಿಗೆ ಕಾಯಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.