ಮಡಿಕೇರಿ, ಡಿ. 30: ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಕೊಡಗಿನ ಹೊಸ ಚರಿತ್ರೆಯೊಂದು ನಿರ್ಮಾಣ ವಾಗಿದೆ. ದೇಶದ ರಕ್ಷಣಾ ಪಡೆಯ ಪ್ರಪ್ರಥಮ ಮಹಾದಂq Àನಾಯಕ (ಕಮಾಂಡರ್ ಇನ್ ಚೀಫ್)ರಾಗಿ ಸೇನಾ ಪಿತಾಮಹ ಎಂದು ಖ್ಯಾತಿ ಪಡೆದಿರುವ ಕೊಡಗಿನ ಹೆಮ್ಮೆಯ ಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರನ್ನು ದೆಹಲಿಯಲ್ಲಿರುವ ಆರ್ಮಿ ಪೆರೇಡ್ ಮೈದಾನಕ್ಕೆ ನಾಮಕರಣ ಮಾಡಲಾಗಿದೆ. ಕಾರ್ಯಪ್ಪ ಅವರ ಪ್ರತಿಮೆಯೊಂದಿಗೆ ಪೆರೇಡ್ ಮೈದಾನಕ್ಕೆ ಈ ಹೆಸರು ಇಡಲಾಗಿದೆ.

ಭೂ ಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರು ಪ್ರತಿಮೆ ಉದ್ಘಾಟಿಸಿದ್ದಾರೆ. ಭೂ ಸೇನೆಯ ಉನ್ನತ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು. ದೇಶದ ರಕ್ಷಣಾ ಪಡೆಯ ಮೂರು ವಿಭಾಗದ ಮುಖ್ಯಸ್ಥರಾಗಿ ಕಾರ್ಯಪ್ಪ ಅವರು ಮಾತ್ರ ಕರ್ತವ್ಯ ನಿರ್ವಹಿಸಿರುವದು ಸೇನಾ ಇತಿಹಾಸ. ರಕ್ಷಣಾ ಪಡೆಯ ಮಹಾದಂಡ ನಾಯಕರಾಗಿದ್ದು, ಫೀಲ್ಡ್ ಮಾರ್ಷಲ್‍ನಂತಹ ಅತ್ಯುನ್ನತ ಬಿರುದುಗಳಿಸಿರುವ ಇವರ ಹೆಸರನ್ನು ರಾಜಧಾನಿ ದೆಹಲಿಯಲ್ಲಿನ ಆರ್ಮಿ ಪೆರೇಡ್ ಮೈದಾನಕ್ಕೆ ಇಡಬೇಕು ಎಂಬ ಬೇಡಿಕೆ ಕೊಡಗಿನ ಜನತೆಯಿಂದ ಹಲವು ವರ್ಷಗಳಿಂದ ಕೇಳಿಬಂದಿತ್ತು. ಇತ್ತೀಚೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದ ಭೂ ಸೇನೆಯ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಅವರಿಗೆ ಜಿಲ್ಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ,

(ಮೊದಲ ಪುಟದಿಂದ) ಜನರಲ್ ತಿಮ್ಮಯ್ಯ ಫೋರಂನಿಂದಲೂ ಈ ಬಗ್ಗೆ ಮನವಿ ಸಲ್ಲಿಸಲಾಗಿತ್ತಲ್ಲದೆ ಜಿಲ್ಲೆಯ ನಿವೃತ್ತ ಹಿರಿಯ ಸೇನಾಧಿಕಾರಿಗಳು ಗಮನ ಸೆಳೆದಿದ್ದರು. ಜನರಲ್ ದಲ್ಬೀರ್ ಸಿಂಗ್ ಅವರು ಇದಕ್ಕೆ ಸ್ಪಂದಿಸಿದ್ದು, ಇದೀಗ ಇದು ಕಾರ್ಯರೂಪಕ್ಕೆ ಬರುವ ಮೂಲಕ ಕೊಡಗಿಗೆ ವಿಶೇಷ ಗೌರವ ದೊರೆತಂತಾಗಿದೆ.

ಕೊಡಗಿನವರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಲೆಫ್ಟಿನೆಂಟ್ ಜನರಲ್‍ಗಳಾಗಿ ಅಪ್ಪಾರಂಡ ಅಯ್ಯಪ್ಪ, ಕೋದಂಡ ಸೋಮಣ್ಣ, ಬಿದ್ದಂಡ ಸಿ. ನಂದ, ಬುಟ್ಟಿಯಂಡ ಕೆ. ಬೋಪಣ್ಣ, ಬಲ್ಲಚಂಡ ಕೆ. ಚಂಗಪ್ಪ ಅವರುಗಳು ಸೇನೆಯ ಉನ್ನತಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇವರಲ್ಲದೆ ಸುಮಾರು 20 ಮಂದಿ ಮೇಜರ್ ಜನರಲ್‍ಗಳಾಗಿ ಕೊಡಗಿನಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಜಿಲ್ಲೆಯ ಸೇನಾ ಪರಂಪರೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.

ಕೊಡಂದೇರ ದಿವಂಗತ ಮಾದಪ್ಪ- ಕಾವೇರಿ ದಂಪತಿಯ ಪುತ್ರರಾಗಿದ್ದ ಕಾರ್ಯಪ್ಪ ಅವರು 1949ರಿಂದ 1952ರ ತನಕ ಮಹಾದಂಡನಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರ ಸೇವೆಯನ್ನು ಪರಿಗಣಿಸಿ 1986ರಲ್ಲಿ ಅವರಿಗೆ ಫೀಲ್ಡ್ ಮಾರ್ಷಲ್ ಉನ್ನತ ಬಿರುದನ್ನು ನೀಡಲಾಗಿತ್ತು.