ಸೋಮವಾರಪೇಟೆ,ನ.14: ಐಗೂರು ಗ್ರಾಮದಲ್ಲಿ ನಡೆದ ಆರ್‍ಎಸ್‍ಎಸ್ ಮುಖಂಡರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಧಾಳಿ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಜಿಲ್ಲೆಯಾದ್ಯಂತ ಕೋಮು ಸಾಮರಸ್ಯ ಕದಡುತ್ತಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರಪೇಟೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಜಮಾವಣೆಗೊಂಡ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಯ ನೂರಾರು ಕಾರ್ಯಕರ್ತರು ಘಟನೆಯನ್ನು ಖಂಡಿಸಿ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ತಹಶೀಲ್ದಾರ್ ಕೃಷ್ಣ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಾದ್ಯಂತ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರೇ ಸಮಾಜಘಾತುಕ ಶಕ್ತಿಗಳ ಟಾರ್ಗೆಟ್ ಆಗಿದ್ದು, ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್, ಪಿರಿಯಾಪಟ್ಟಣದ ಮಾಗಳಿ ರವಿ ಅವರ ಹತ್ಯೆ ಸೇರಿದಂತೆ ಸೋಮವಾರಪೇಟೆಯ ಮೋಹನ್ ಹಾಗೂ ಮಸಗೋಡು ಸತೀಶ್ ಅವರುಗಳ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಮತಾಂಧ ಶಕ್ತಿಗಳು ನೇರ ಭಾಗಿಯಾಗಿವೆ. ಇವುಗಳನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಮುಂದಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂ ಸಮಾಜದ ಮುಖಂಡರ ಹತ್ಯೆ, ಹಲ್ಲೆಗಳು ನಡೆಯುತ್ತಲೇ ಇವೆ. ಇವುಗಳಿಗೆ ಕಡಿವಾಣ ಹಾಕಬೇಕಾದ ಸರ್ಕಾರ ಕೈಕಟ್ಟಿ ಕುಳಿತಿದೆ. ಇತ್ತೀಚಿಗೆ ನಡೆದ ಹಲವು ಪ್ರಕರಣಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರ ಕೈವಾಡವಿದೆ. ಇದೀಗ ಐಗೂರಿನಲ್ಲಿ ನಡೆದ ಕಾರಿಗೆ ಬೆಂಕಿ ಪ್ರಕರಣದಲ್ಲೂ ಇದೇ ಸಂಘಟನೆಯ ಕೈವಾಡವಿರುವ ಬಗ್ಗೆ ಸಂಶಯ ಮೂಡಿದೆ ಎಂದು ಆರೋಪಿಸಿದರು.

ಹಿಂದೂ ಸಮಾಜದ ಕಾರ್ಯಕರ್ತರು ಹಾಗೂ ಮುಖಂಡರ ಮೇಲೆ ಹಲ್ಲೆ, ಹತ್ಯೆ ನಡೆಸುವ ಮೂಲಕ ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸಲಾಗುತ್ತಿದೆ. ಸಮಾಜದಲ್ಲಿ ಕೋಮು ಪ್ರಚೋದನೆ ನೀಡುವ ಕಾರ್ಯದಲ್ಲಿ ಪಿಎಫ್‍ಐ ತೊಡಗಿಸಿಕೊಂಡಿದೆ. ಈ ಸಂಘಟನೆಯನ್ನು ರಾಜ್ಯದಲ್ಲೇ ನಿಷೇಧಿಸಬೇಕು. ಸಮಾಜಘಾತುಕ ಕೃತ್ಯದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಯಲ್ಲಿದ್ದವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಅಭಿಮನ್ಯುಕುಮಾರ್, ಜಿ.ಪಂ. ಮಾಜೀ ಸದಸ್ಯ ರಾಜಾರಾವ್, ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಧರ್ಮ ಜಾಗರಣಾ ವೇದಿಕೆಯ ಬನ್ನಳ್ಳಿ ಗೋಪಾಲ್, ತಾ.ಪಂ. ಸದಸ್ಯೆ ಸಬಿತಾ ಚನ್ನಕೇಶವ, ಪ್ರಮುಖರಾದ ಸೋಮೇಶ್, ಉಮೇಶ್, ಶರತ್‍ಚಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.