ಕುಶಾಲನಗರ, ಡಿ. 22: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ದುಬಾರೆ ಪ್ರವಾಸಿ ಕೇಂದ್ರಕ್ಕೆ ಭೇಟಿ ನೀಡಿ ಕಾವೇರಿ ನದಿ ನೀರಿನ ಗುಣಮಟ್ಟ ಪರಿಶೀಲನೆ ಕೈಗೊಂಡಿದೆ. ಪ್ರವಾಸಿ ಕೇಂದ್ರದಲ್ಲಿ ಮೋಟಾರ್ ಬೋಟ್‍ಗಳ ಮೂಲಕ ನದಿ ನೀರು ಮಾಲಿನ್ಯಗೊಳ್ಳುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ನೀಡಿದ ಸೂಚನೆ ಮೇರೆಗೆ ಮಂಡಳಿಯ ಅಧಿಕಾರಿಗಳು ಈ ಕ್ರಮಕೈಗೊಂಡಿದ್ದಾರೆ.

ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರನ್ನು ಕೊಂಡೊಯ್ಯುವ ಬೋಟ್‍ಗಳಿಂದ ನದಿ ನೀರಿಗೆ ಇಂಧನ ಸೋರಿಕೆಯಾಗುವದರೊಂದಿಗೆ ನದಿ ನೀರು ಮಾಲಿನ್ಯಗೊಳ್ಳುತ್ತಿರುವದಾಗಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಜಿಲ್ಲೆಯ ವಿವಿಧ ಪ್ರವಾಸಿ ಕೇಂದ್ರಗಳು ಹಾಗೂ ಪಟ್ಟಣ, ಗ್ರಾಮಗಳ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ನೀರಿನ ಗುಣಮಟ್ಟ ಪರಿಶೀಲನೆಗೆ ಮುಂದಾಗಿದೆ.

ಗುರುವಾರ ದುಬಾರೆಗೆ ಭೇಟಿ ನೀಡಿದ ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಮತ್ತು ಅಧಿಕಾರಿಗಳ ತಂಡ ನದಿ ನೀರಿನ ಗುಣಮಟ್ಟ ಪರಿಶೀಲನೆಗಾಗಿ ನೀರಿನ ಮಾದರಿಯನ್ನು ಸಂಗ್ರಹಿಸಿ ಮೈಸೂರಿನ ಪ್ರಯೋಗಾಲಯಕ್ಕೆ ಕ್ರಮಕ್ಕೆ ಕಳುಹಿಸಿದ್ದಾರೆ.

ಈ ಸಂದರ್ಭ ಅಧಿಕಾರಿಗಳ ತಂಡವನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ನದಿ ನೀರು ಮಾಲಿನ್ಯಗೊಳ್ಳುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಈ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವದು ಎಂದು ತಿಳಿಸಿದ್ದಾರೆ.