ಸಿದ್ದಾಪುರ, ಡಿ. 10: ಸರ್ಕಾರದ ಗಮನಕ್ಕೆ ದಿಡ್ಡಳ್ಳಿಯ ಗಿರಿಜನರ ಸಮಸ್ಯೆಯನ್ನು ಪ್ರಾಸ್ತಾಪಿಸಿ ಶಾಶ್ವತ ಸೂರು ಒದಗಿಸಿ ಕೊಡುವದಾಗಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ದಿಡ್ಡಳ್ಳಿಯ ಗುಡಿಸಲು ಕಳೆದುಕೊಂಡ ನಿವಾಸಿಗಳು ತಾ. 14ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಪ್ರತಿಭಟ&divound; Éಯನ್ನು ಕೈ ಬಿಟ್ಟಿದ್ದಾರೆ. ಇತ್ತೀಚೆಗೆ ದಿಡ್ಡಳ್ಳಿಯ ಮೀಸಲು ಅರಣ್ಯದಲ್ಲಿ ಕಳೆದ 6 ತಿಂಗಳಿನಿಂದ 575ಕ್ಕೂ ಅಧಿಕ ಕುಟುಂಬಗಳು ಗುಡಿಸಲು ನಿರ್ಮಾಣ ಮಾಡಿ ಕೊಂಡು ವಾಸ ಮಾಡಿಕೊಂಡಿದ್ದರು. ಆದರೆ ಕಳೆದ 5 ದಿನಗಳ ಹಿಂದೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಗಿರಿಜನರು ನಿರ್ಮಿಸಿಕೊಂಡಿದ್ದ ಗುಡಿಸಲುಗಳನ್ನು ಜೆ.ಸಿ.ಬಿ. ಮೂಲಕ ತೆರವುಗೊಳಿಸಿ ನೆಲಸಮ ಮಾಡಿದ್ದರು. ನಂತರ ಗಿರಿಜನ ಮುಖಂಡರಾದ ಜೆ.ಕೆ. ಅಪ್ಪಾಜಿ ಹಾಗೂ ಸಹೋದರಿ ಜೆ.ಕೆ. ಮುತ್ತಮ್ಮ ಸೇರಿದಂತೆ 8 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿ ಬಂಧಿಸಲಾಗಿತ್ತು. ಬಂಧನದ ಬಳಿಕ ಅಪ್ಪಾಜಿ ಹಾಗೂ ಮುತ್ತಮ್ಮ ಸೇರಿದಂತೆ ಎಲ್ಲರೂ ಬಿಡುಗಡೆ ಗೊಂಡಿದ್ದರು. ಆದರೆ ಗುಡಿಸಲು ಕಳೆದುಕೊಂಡ ಗಿರಿಜನರು ಶಾಶ್ವತ ಸೂರು ಸಿಗುವರೆಗೂ ಅರಣ್ಯದಂಚಿ ನಿಂದ ಕದಲುವದಿಲ್ಲ ವೆಂದು 577 ಕುಟುಂಬದವರು ದಿಡ್ಡಳ್ಳಿಯ ಆಶ್ರಮ ಶಾಲೆಯ ಬಳಿ ತಮ್ಮ ಮಕ್ಕಳೊಂದಿಗೆ ಬಿಡಾರ ಹೂಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಶಾಲೆಯ ಮುಂಭಾಗದ ಅರಣ್ಯ ಪ್ರದೇಶದೊಳಗೆ ಆಹಾರ ತಯಾರಿಸಿ ಕೊಂಡು ಸಾವಿರಾರು ಮಂದಿ ವಾಸ್ತವ್ಯ ಹೂಡಿದ್ದರು. ಶನಿವಾರದಂದು ದಿಡ್ಡಳ್ಳಿಗೆ ಭೇಟಿ
(ಮೊದಲ ಪುಟದಿಂದ) ನೀಡಿದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಗುಡಿಸಲು ಕಳೆದುಕೊಂಡವರ ಬಳಿ ಮಾತನಾಡಿ ಮೀಸಲು ಅರಣ್ಯದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ತಾಂತ್ರಿಕ ದೋಷವಿರುವ ಕಾರಣ ಇಲ್ಲಿ ವಾಸ ಮಾಡಲು, ಮನೆ ನಿರ್ಮಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರಿ ಪೈಸಾರಿ ಜಾಗಗಳನ್ನು ಈಗಾಗಲೇ ಜಿಲ್ಲಾಡಳಿತ ಹಾಗೂ ಕಂದಾಯ ಇಲಾಖೆಯವರು ಗುರುತಿಸಿದ್ದು, ಈ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರಲ್ಲದೆ, ಪರ್ಯಾಯ ಜಾಗದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ತೆರಳಿ ಕಂದಾಯ ಹಾಗೂ ಅರಣ್ಯ ಸಚಿವರ ಬಳಿ ಮಾತನಾಡಿ ಶಾಶ್ವತ ಸೂರು ಒದಗಿಸಿಕೊಡುವದಾಗಿ ಭರವಸೆ ನೀಡಿದರು. ಇದಲ್ಲದೇ ಈಗಾಗಲೇ ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಬಳಿ ಚರ್ಚಿಸಲಾಗಿದ್ದು, ಆದಷ್ಟು ಬೇಗ ಸೂರು ಒದಗಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸರ್ಕಾರವು ಕೂಡ ಸೂರು ಇಲ್ಲದ ಕಟುಂಬಗಳಿಗೆ ಸೂರು ಒದಗಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಆದಿವಾಸಿಗಳ ಹಾಗೂ ಗಿರಿಜನರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಸೂರು ಇಲ್ಲದ ಮಂದಿ ತಮ್ಮ ನೋವನ್ನು ದೂರ ಮಾಡಿ ಸಹಕಾರ ನೀಡಿ ಮೀಸಲು ಅರಣ್ಯ ಬಿಟ್ಟು ಶಾಶ್ವತ ಸೂರಿಗೆ ವ್ಯವಸ್ಥೆಗೆ ಸಹಕಾರ ನೀಡಬೇಕೆಂದರು.
ಹಣ ಪಡೆದಿದ್ದ ಅಧಿಕಾರಿಗಳ ವಿರುದ್ಧ ಕ್ರಮ: ಮೀಸಲು ಅರಣ್ಯದಲ್ಲಿ ಕಳೆದ 6 ತಿಂಗಳಿನಿಂದ ಗಿರಿಜನರಿಗೆ ಗುಡಿಸಲು ನಿರ್ಮಿಸಿ ಸೂರು ನೀಡಲು ಅರಣ್ಯ ಇಲಾಖಾಧಿಕಾರಿಗಳು ತಮ್ಮಿಂದ ಹಣವನ್ನು ಪಡೆದುಕೊಂಡಿ ದ್ದಾರೆಂದು ಗಿರಿಜನ ಮುಖಂಡ ಹಾಗೂ ಗುಡಿಸಲು ಕಳೆದುಕೊಂಡ ಬಡ ಗಿರಿಜನರು ಆರೋಪಿಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ವೀಣಾ ಅಚ್ಚಯ್ಯ ಅವರು ಮಾತನಾಡಿ ಹಣ ಪಡೆದುಕೊಂಡಿರುವ ಅಧಿಕಾರಿಗಳ ಬಗ್ಗೆ ತನಿಖೆಯನ್ನು ನಡೆಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್ ಮಾತನಾಡಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿ ಕೊಂಡವರು ತಮ್ಮ ಗುಡಿಸಲು ಕಳೆದುಕೊಂಡಿರುವ ಬಗ್ಗೆ ಧೃತಿಗೆಡುವ ದುಬೇಡ. ಸರ್ಕಾರದ ವತಿಯಿಂದ ಶಾಶ್ವತ ಸೂರು ಒದಗಿಸುವದಾಗಿ ಭರವಸೆ ನೀಡಿದರು. ಅಲ್ಲದೇ ಶಾಶ್ವತ ಸೂರಿನೊಂದಿಗೆ ಹಕ್ಕುಪತ್ರವನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗುವ ದೆಂದರು. ಇದೇ ಸಂದರ್ಭ ಕಾಂಗ್ರೆಸ್ ಮುಖಂಡ ಬಿ.ಟಿ. ಪ್ರದೀಪ್ ಹಾಗೂ ಮಾಜಿ ತಾ.ಪಂ. ಸದಸ್ಯ ಮಾಲ್ದಾರೆಯ ಸಿ.ಎ. ಹಂಸ ಅವರು ಗುಡಿಸಲು ಕಳೆದುಕೊಂಡ ಕುಟುಂಬಗಳಿಗೆ ತರಕಾರಿ, ಹಾಲು ಬ್ರೆಡ್ ನೀಡಿ ಮಾನವೀಯತೆ ಮೆರೆದರು.
ಈ ಸಂದರ್ಭ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ತಾ.ಪಂ. ಸದಸ್ಯರುಗಳಾದ ಚಿನ್ನಮ್ಮ, ಕಾವೇರಮ್ಮ, ರಾಜು ಅಪ್ಪಯ್ಯ, ಗ್ರಾ.ಪಂ. ಸದಸ್ಯರುಗಳಾದ ಸಜೀಥೋಮಸ್, ಮುತ್ತಪ್ಪ, ಉಮೇಶ್, ಲಲಿತಾ ಹಾಗೂ ಇನ್ನಿತರರು ಹಾಜರಿದ್ದರು.;