ಮಡಿಕೇರಿ, ಡಿ. 17: ದಿಡ್ಡಳ್ಳಿಯಲ್ಲಿ ಇತ್ತೀಚೆಗೆ ನಡೆದ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಶ್ರಿತರಿಗೆ ನ್ಯಾಯ ಸಿಗುವವರೆಗೂ ಕೊಡಗು ಜಿಲ್ಲಾ ಜೆಡಿಎಸ್ ಹೋರಾಟ ಮಾಡಲಿದೆ ಎಂದು ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.ಇಂದು ದಿಡ್ಡಳ್ಳಿಗೆ ಭೇಟಿ ನೀಡಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ದೊಡ್ಡಮಟ್ಟದಲ್ಲಿ ನಡೆದಿರುವ ಒತ್ತುವರಿಗಳನ್ನು ತೆರವು ಮಾಡದ ಸರ್ಕಾರ ಬಡ ಕುಟುಂಬಗಳ ಮೇಲೆ ತನ್ನ ಬಲಪ್ರಯೋಗ ಮಾಡಿರುವದು ಖಂಡನೀಯ. ಅರಣ್ಯ ಕಾಯಿದೆಯನ್ನು ಅನುಷ್ಠಾನ ಮಾಡು ವದಕ್ಕೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೀತಿ- ನೀತಿಗಳಿವೆ. ಅವುಗಳನ್ನು ಪಾಲಿಸದೆ ಏಕಾಏಕಿ ಬಡ ಕುಟುಂಬ ಗಳನ್ನು ಬೀದಿಗೆ ತಳ್ಳುವದು ಸರಿಯಲ್ಲ ಎಂದರು. ಕೂಡಲೇ ಮುಖ್ಯಮಂತ್ರಿ ಗಳು ಹಾಗೂ ಅರಣ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ನಿರ್ಗತಿಕರಿಗೆ ನೆರವು ನೀಡಬೇಕು. ಇಲ್ಲವಾದರೆ ನಿರ್ಗತಿಕರಿಗೆ ನ್ಯಾಯ ಸಿಗುವವರೆಗೂ ಜೆಡಿಎಸ್ ತನ್ನ ಹೋರಾಟವನ್ನು ಮುಂದುವರೆಸಲಿದೆ ಎಂದು ಸಂಕೇತ್ ಹೇಳಿದರು.

ಈ ಸಂದರ್ಭ ಜೆಡಿಎಸ್‍ನ ಸ್ಥಳೀಯ ಹಾಗೂ ಜಿಲ್ಲಾ ಮುಖಂಡರುಗಳು ಇದ್ದರು.