ವೀರಾಜಪೇಟೆ, ಡಿ.20: ವೀರಾಜಪೇಟೆ ತಾಲೂಕಿನ ಚೆನ್ನನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಡ್ಡಳ್ಳಿಯಲ್ಲಿ ಇತ್ತೀಚೆಗೆ 577 ಕುಟುಂಬಗಳನ್ನು ದೇವಮಚ್ಚಿ ಪೈಸಾರಿಯಿಂದ ಒಕ್ಕಲೆಬ್ಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೊಡಗಿಗೆ ಭೇಟಿ ನೀಡುವ ತನಕ ತಾ.21ರಿಂದ ಜನತಾ ದಳ ಪಕ್ಷದ ವತಿಯಿಂದ ಮಡಿಕೇರಿಯ ಗಾಂಧೀ ಮೈದಾನದ ಗಾಂಧೀ ಪ್ರತಿಮೆಯ ಮುಂದೆ ಉಪವಾಸ ಸತ್ಯಾಗ್ರಹ ಹೂಡಲಿರು ವದಾಗಿ ಪಕ್ಷದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ವೀರಾಜಪೇಟೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಯಾವದೇ ಪೂರ್ವ ಸೂಚನೆ ನೀಡದೆ ಅರಣ್ಯದಲ್ಲಿ ವಾಸಿಸುತ್ತಿದ್ದ ನಿರಾಶ್ರಿತರನ್ನು ರಾತೋ ರಾತ್ರಿ ಒಕ್ಕಲೆಬ್ಬಿಸಿರುವದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ಇದರಿಂದ ಮಕ್ಕಳು, ಮಹಿಳೆಯರು, ಅಮಾಯಕರು ಬೀದಿ ಪಾಲಾಗಿದ್ದಾರೆ. ಅರಣ್ಯ ಕಾಯಿದೆಗೆ ತಿದ್ದುಪಡಿ ತಂದು ನಿರಾಶ್ರಿತರಿಗೆ ರಕ್ಷಣೆ ನೀಡಬಹುದಿತ್ತು. ಸರಕಾರದ ಸರ್ವಾಧಿಕಾರಿ ಧೋರಣೆಯಿಂದ ಸುಮಾರು 3000 ಮಂದಿ ನಿರಾಶ್ರಿತರು ಕಂಗಾಲಾಗಿದ್ದಾರೆ. ಕೊಡಗಿನ ಸಮಸ್ಯೆಗಳನ್ನು ಅರಿಯದೆ ಕೊಡಗನ್ನು ಅನಾಥ ಮಾಡಿರುವ ಮುಖ್ಯಮಂತ್ರಿ, ಕಾಡಾನೆ ಧಾಳಿಯಿಂದ 25 ಮಂದಿ ಸಾವನ್ನಪ್ಪಿದರೂ ನಿಷ್ಕ್ರಿಯವಾಗಿರುವ ಅರಣ್ಯ ಸಚಿವರಿಂದ ಕೊಡಗಿಗೆ ಯಾವದೇ ಪ್ರಯೋಜನವಾಗುತ್ತಿಲ್ಲ. ಐದು ಬಾರಿ ಕೊಡಗಿನ ಉಸ್ತುವಾರಿ ಸಚಿವರ ಬದಲಾವಣೆ, ಕೊಡಗಿನ ಬಗ್ಗೆ ಆಸಕ್ತಿ ಇಲ್ಲದ ಉಸ್ತುವಾರಿ ಸಚಿವರ ನೇಮಕ, ದಿಡ್ಡಳ್ಳಿ ನಿರಾಶ್ರಿತರ ಹೋರಾಟ ತಾರಕಕ್ಕೇರಿದರೂ ಕೊಡಗಿನ ಬಗ್ಗೆ ಮನ ಕರಗದ ಮುಖ್ಯಮಂತ್ರಿಯ ವರ್ತನೆಯನ್ನು ಖಂಡಿಸಬೇಕಾಗಿದೆ ಎಂದರು. ದಿಡ್ಡಳ್ಳಿಯ ನಿರಾಶ್ರಿತರು ಹಗಲಿರುಳು ಹೋರಾಟ ನಡೆಸುತ್ತಿರುವ ಸ್ಥಳಕ್ಕೆ ತಾ:24ರಂದು ಜನತಾದಳದ ರಾಜ್ಯ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಒಕ್ಕಲೆಬ್ಬಿಸಿದ ಪೂರ್ಣ ಚಿತ್ರಣವನ್ನು ಅವಲೋಕಿಸುವದಾಗಿ ಜಿಲ್ಲಾ ಸಮಿತಿಯ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮನ್ಸೂರ್‍ಆಲಿ ಹೇಳಿದರು. ಗೋಷ್ಠಿಯಲ್ಲಿ ಪಟ್ಟಣ ಪಂಚಾಯಿತಿಯ ಹಿರಿಯ ಸದಸ್ಯ ಎಸ್.ಎಚ್.ಮತೀನ್, ನಗರ ಸಮಿತಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆರ್.ಎ.ಸಕ್ಲೇನ್ ಕುಟ್ಟ ವಿಭಾಗದ ಮುಖಂಡ ಪಿ.ವಿ.ರೆನ್ನಿ ಉಪಸ್ಥಿತರಿದ್ದರು.