ಗೋಣಿಕೊಪ್ಪಲು, ಡಿ.8: ಕಳೆದ 6 ತಿಂಗಳಿನಿಂದ ಬಸವನಹಳ್ಳಿ-ದಿಡ್ಡಳ್ಳಿ ರಕ್ಷಿತಾರಣ್ಯದಲ್ಲಿ ಗುಡಿಸಲು ನಿರ್ಮಿಸಿಕೊಂಡು ನಿವೇಶನ-ವಸತಿ ವ್ಯವಸ್ಥೆಗಾಗಿ ಹೋರಾಟ ಮಾಡುತ್ತಿದ್ದ ಜೇನುಕುರುಬ ಹಾಗೂ ಯರವ ಜನಾಂಗವನ್ನು ತಾ.7 ರಂದು ಅರಣ್ಯ ಇಲಾಖೆ ಹಾಗೂ ಪೆÇಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದ್ದು, ಇಂದು ಪೂರ್ವಾಹ್ನ 11 ಗಂಟೆಗೂ ಮುನ್ನ ತಮ್ಮ ವಸ್ತುಗಳೊಂದಿಗೆ ಜಾಗ ಖಾಲಿ ಮಾಡುವಂತೆ ತಿತಿಮತಿ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಗೋಪಾಲ್ ಖುದ್ದು ತೆರಳಿ ನಿರ್ದೇಶನ ನೀಡಿದ್ದರು. ಇಂದು ದಿಡ್ಡಳ್ಳಿಗೆ ‘ಶಕ್ತಿ’ಪರವಾಗಿ ತೆರಳಿದ ಸಂದರ್ಭ ನಿರಾಶ್ರಿತ ಆದಿವಾಸಿಗಳು ಪಾತ್ರೆ, ಚೆಂಬು, ಬಕೆಟ್, ಬಿಂದಿಗೆ ಇತ್ಯಾದಿ ತಮ್ಮ ತಮ್ಮ ವಸ್ತುಗಳನ್ನು ಗಂಟು ಮೂಟೆ ಕಟ್ಟಿ ಬಸವನಹಳ್ಳಿ ರಸ್ತೆ ಬದಿಗೆ ತಂದು ಜೋಡಿಸುತ್ತಿದ್ದುದು ಕಂಡು ಬಂತು. ಚೆನ್ನಯ್ಯನಕೋಟೆ ಗ್ರಾ.ಪಂ.ಸದಸ್ಯ ಜೇನುಕುರುಬರ ಅಪ್ಪಾಜಿ, ಸಹೋದರಿ ಮುತ್ತಮ್ಮ ಸೇರಿದಂತೆ ಎಂಟು ಮಂದಿ ಮುಖಂಡರನ್ನು ಸಿದ್ಧಾಪುರ ಪೆÇಲೀಸರು ಮುಂಜಾಗೃತ

(ಮೊದಲ ಪುಟದಿಂದ) ಕ್ರಮವಾಗಿ ಬಂಧಿಸಿದ ಹಿನ್ನೆಲೆ ಇಂದು ಇಲ್ಲಿನ ನಿರಾಶ್ರಿತ ಕುಟುಂಬ ತಮ್ಮ ನಾಯಕರನ್ನು ಕಳೆದುಕೊಂಡ ಆತಂಕದಲ್ಲಿತ್ತು.

ಅತ್ತ ಲೈನ್‍ಮನೆ ಕಳೆದುಕೊಂಡು ಮಾಲೀಕರ ಕೆಂಗಣ್ಣಿಗೆ ಗುರಿಯಾದ ಆದಿವಾಸಿ ಕಾರ್ಮಿಕವರ್ಗ ದಿಡ್ಡಳ್ಳಿ ಅರಣ್ಯದಿಂದಲೂ ನಿನ್ನೆ ತೆರವುಗೊಂಡ ಹಿನ್ನೆಲೆ ಇಂದು ಬೆಳಗಿನ ತಿಂಡಿ, ಮಧ್ಯಾಹ್ನದ ಉಪಹಾರವಿಲ್ಲದೆ ಹಸಿವಿನಲ್ಲಿಯೇ ಕಳೆದಿತ್ತು. ನಿನ್ನೆ ರಾತ್ರಿ ಜಿ.ಪಂ. ಸದಸ್ಯ ಮೂಕೋಂಡ ವಿಜು ಸುಬ್ರಮಣಿ ನಿರ್ದೇಶನದ ಮೇರೆ ಅರಣ್ಯ ಇಲಾಖಾಧಿಕಾರಿಗಳು ಸುಮಾರು 400 ಮಂದಿ ನಿರಾಶ್ರಿತರಿಗೆ ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಆದರೆ, ಇಂದು ಅರಣ್ಯದಲ್ಲಿದ್ದ ಬಿದಿರು, ಮರದ ದಿಮ್ಮಿ, ಸೌದೆ ಇತ್ಯಾದಿ ಗಳೊಂದಿಗೆ ಜಾಗ ಖಾಲಿ ಮಾಡುವಂತೆ ಅರಣ್ಯ ಇಲಾಖಾಧಿಕಾರಿಗಳ ನಿರ್ದೇಶನ ಹಾಗೂ ಸಿದ್ಧಾಪುರ ಪೆÇಲೀಸ್ ಉಪ ನಿರೀಕ್ಷಕ ಸಂತೋಷ್ ಕಶ್ಯಪ್ ಮತ್ತು ಸಿಬ್ಬಂದಿಗಳು ಭದ್ರತಾ ವ್ಯವಸ್ಥೆ ಕೈಗೊಂಡ ಹಿನ್ನೆಲೆ ಸುಮಾರು 575ಕ್ಕೂ ಅಧಿಕ ಕುಟುಂಬ ದಿಕ್ಕೇ ತೋಚದಂತೆ ಪರಿತಪಿಸತೊಡಗಿದ್ದ ಸಂದರ್ಭ ಮಧ್ಯಾಹ್ನ 2 ಗಂಟೆ ಸುಮಾರಿಗೆ ಶಾಸಕ ಕೆ.ಜಿ.ಬೋಪಯ್ಯ ಅವರು ಅಲ್ಲಿನ ಆಶ್ರಮ ಶಾಲಾ ಮುಂಭಾಗ ಜಮಾವಣೆಗೊಂಡ ಆದಿವಾಸಿಗಳಲ್ಲಿಗೆ ತೆರಳಿ ಸಾಂತ್ವನ ಹೇಳಿದರು.

ಮೊದಲ ಆದ್ಯತೆ ಮೇರೆ ನಿವೇಶನ-ಮನೆ

ಶಾಸಕ ಬೋಪಯ್ಯನವರನ್ನು ಕಾಣುತ್ತಲೇ ನೂರಾರು ಗಿರಿಜನರು, ತಮ್ಮ ಮೇಲೆ ನಡೆದ ಅರಣ್ಯ ಇಲಾಖೆ ದೌರ್ಜನ್ಯ ಕುರಿತು ಆರೋಪಿಸಿದರು. ಸುಮಾರು 6 ತಿಂಗಳ ನಂತರ ನಮ್ಮನ್ನು ತೆರವು ಮಾಡಿದ್ದಾರೆ.ನಮಗೆ ಪುನರ್ವಸತಿ ಕಲ್ಪಿಸಿದ ನಂತರ ನಾವೇ ಖಾಲಿ ಮಾಡಲು ಸಿದ್ಧರಿದ್ದೆವು ಎಂದು ಹಲವರು ಶಾಸಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭ ಶಾಸಕ ಬೋಪಯ್ಯ ಅವರು, ನಿಮ್ಮನ್ನು ಅರಣ್ಯದಲ್ಲಿ ಕೂರಿಸಿದ ಮುಖಂಡರೆಲ್ಲಿ? ಡಿ ನೋಟಿಫಿಕೇಶನ್ ಮಾಡಿ ಪುನರ್ವಸತಿ ಕಲ್ಪಿಸುವದಾಗಿ ಹೇಳಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೆಲ್ಲಿ? ಎಂದು ಪ್ರಶ್ನಿಸಿದರು.

ದೇವಮಚ್ಚಿ ರಕ್ಷಿತಾರಣ್ಯಕ್ಕೆ ಸುಮಾರು 1986 ಹೆಕ್ಟೇರ್ ಪ್ರದೇಶ ಸೇರಿದ್ದು, 2005ಕ್ಕೂ ಮುನ್ನ ವಾಸ್ತವ್ಯ ಹೂಡಿದವರಿಗೆ ಮಾತ್ರ ಹಕ್ಕುಪತ್ರ ನೀಡಲು ಸಾಧ್ಯ ಹಾಗೂ ದಿಡ್ಡಳ್ಳಿ ಮೀಸಲು ಅರಣ್ಯ ಬಫರ್ ವಲಯಕ್ಕೆ ಸೇರಿರುವ ಹಿನ್ನೆಲೆ ಇಲ್ಲಿ ನೂತನವಾಗಿ ನಿವೇಶನ ಗುರುತಿಸಲು ಹಾಗೂ ವಸತಿ ನಿರ್ಮಾಣ ಅಸಾಧ್ಯ. ನಿಮ್ಮ ಮುಖಂಡರು ನಿಮ್ಮನ್ನು ವಂಚಿಸಿದ್ದಾರೆ ಎಂದು ಹೇಳಿದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ ನಂಜುಂಡೇ ಗೌಡ ಹಾಗೂ ತಿತಿಮತಿ ವಲಯಾರಣ್ಯಾಧಿಕಾರಿ ಗೋಪಾಲ್ ಭೇಟಿ ನೀಡಿ ಶಾಸಕರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಶಾಸಕ ಬೋಪಯ್ಯ ಅವರು 6 ತಿಂಗಳು ತಡವಾಗಿ ತೆರವು ಕಾರ್ಯಾಚರಣೆ ಮಾಡಿದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಅರುವತ್ತೊಕ್ಕಲು ಗ್ರಾ.ಪಂ.ಅಧ್ಯಕ್ಷ ತೀತಮಾಡ ಸುಗುಣ ಅವರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಫೆಡ್ನೇಕರ್ ಅವರೊಂದಿಗೆ ಆಗಮಿಸಿದ್ದು, ಇದೀಗ ತೆರವುಗೊಳಿಸಲ್ಪಟ್ಟ 577 ಮಂದಿಗೆ ಹಳ್ಳಿಗಟ್ಟುವಿನಲ್ಲಿರುವ 7 ಎಕರೆ ಪ್ರದೇಶದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಲು ಸಹಕರಿಸುವದಾಗಿ ಹೇಳಿದರು.

ಅಮ್ಮತ್ತಿ ಸಮೀಪ ಬಿಳುಗುಂದ ದಲ್ಲಿ 1/1 ಸರ್ವೆ ನಂ.ನಲ್ಲಿ ಸುಮಾರು 5.30 ಎಕರೆ ನಿವೇಶನ ವಸತಿ ಇಲ್ಲದವರಿಗೆ ಕಾದಿರಿಸಲಾಗಿದ್ದು, ತಲಾ 3 ಸೆಂಟ್‍ನಲ್ಲಿ ಮನೆ ನಿರ್ಮಾಣ ಮಾಡುವ ಮೂಲಕ ಸುಮಾರು 170 ಮಂದಿ ಅಮ್ಮತ್ತಿ ಹೋಬಳಿಯ 10 ಗ್ರಾ.ಪಂ. ನಿರಾಶ್ರಿತರಿಗೆ ಅವಕಾಶ ಕಲ್ಪಿಸಲಾಗುವದು ಎಂದು ಕಂದಾಯ ನಿರೀಕ್ಷಕ ಶ್ರೀನಿವಾಸ್ ಮಾಹಿತಿ ನೀಡಿದರು.

ತಾ.ಪಂ.ಇಓ ಹೆಸರಿನಲ್ಲಿ ತಾಲೂಕಿನಾದ್ಯಂತ ಕಂದಾಯ ಜಮೀನು ಹಾಗೂ ಒತ್ತುವರಿ ತೆರವು ಮಾಡಲಾದ ಜಮೀನಿದ್ದು, ಅಂತಹಾ ಜಮೀನಿನಲ್ಲಿ ಇಲ್ಲಿನ ನಿರಾಶ್ರಿತರಿಗೆ ಆದ್ಯತೆ ಮೇರೆ ಮನೆ ನಿರ್ಮಾಣ ಮಾಡಿಕೊಡಲು ಬೋಪಯ್ಯ ಸೂಚಿಸಿದರು.

ಮಡಿಕೇರಿ ಹಾಗೂ ಸೋಮವಾರ ಪೇಟೆ ತಾಲೂಕಿ ನಿಂದಲೂ ಸುಮಾರು 49 ಮಂದಿ ತಮ್ಮ ಲೈನ್‍ಮನೆ ತೊರೆದು ಇಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದು, ಮತ್ತೆ ತಮ್ಮ ಊರಿಗೆ ವಾಪಾಸ್ಸಾಗುವದಿಲ್ಲ. ಇಲ್ಲಿಯೇ ವಸತಿ ನಿರ್ಮಾಣ ಮಾಡಿಕೊಡಿ ಎಂದು ಮನವಿ ಮಾಡಿದರು.

ಕಂದಾಯ ಇಲಾಖೆಯು ಎಲ್ಲಾ ನಿರಾಶ್ರಿತರ ಅಂಕಿ ಅಂಶ ಸಂಗ್ರಹಿಸಿದ್ದು, ಅಮ್ಮತ್ತಿ ಹೋಬಳಿ ವ್ಯಾಪ್ತಿಯಿಂದ ಸುಮಾರು 239 ಆದಿವಾಸಿಗಳು, ಪೆÇನ್ನಂಪೇಟೆ ಹೋಬಳಿಯಿಂದ 153, ವೀರಾಜಪೇಟೆ ಹೋಬಳಿ- 24, ಶ್ರೀಮಂಗಲ ಹೋಬಳಿ-43, ಬಾಳೆಲೆ ಹೋಬಳಿ- 53, ಹುದಿಕೇರಿ ಹೋಬಳಿ- 16, ಸೋಮವಾರಪೇಟೆ ತಾಲೂಕಿನ ಚಟ್ಟಳ್ಳಿ, ಕಾನನ್‍ಕಾಡು ಇತ್ಯಾದಿ ಕಡೆಗಳಿಂದ -39 ಹಾಗೂ ಮಡಿಕೇರಿ ತಾಲೂಕಿನಿಂದ ಸುಮಾರು 10 ಕುಟುಂಬಗಳು ವಾಸ್ತವ್ಯ ಹೂಡಿದ್ದ ಬಗ್ಗೆ ಕಂದಾಯ ನಿರೀಕ್ಷಕರು ಮಾಹಿತಿ ನೀಡಿದರು.

ಅರುವತ್ತೊಕ್ಕಲು ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಟ್ಟುವಿನಲ್ಲಿ ನಿರಾಶ್ರಿತರಿಗೆ ತಾತ್ಕಾಲಿಕ ವ್ಯವಸ್ಥೆಯಾಗಿ ಶೌಚಾಲಯ, ಕಸದ ತೊಟ್ಟಿ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಿ ಸಹಕರಿಸಲು ಹಾಗೂ 6 ತಿಂಗಳ ಅವಧಿಯಲ್ಲಿ ನಿವೇಶನ ಗುರುತಿಸಿ ಮನೆ ನಿರ್ಮಿಸಿಕೊಡಲು ತಾ.ಪಂ.ಇಓ ಫಡ್ನೇಕರ್ ಅವರಿಗೆ ಬೋಪಯ್ಯ ಸೂಚನೆ ನೀಡಿದರು.

ಇದೇ ಸಂದರ್ಭ ದಿಡ್ಡಳ್ಳಿಯಿಂದ ತೆರವುಗೊಳ್ಳಲು ಎರಡು-ಮೂರು ದಿನ ಕಾಲಾವಕಾಶ ಬೇಕಾಗಿದ್ದು, ಅಲ್ಲಿನ ಬಸವನಹಳ್ಳಿ ಆಶ್ರಮ ಶಾಲಾ ಮುಂಭಾಗ ಮೈದಾನದಲ್ಲಿ ವಾಸ್ತವ್ಯ ಹೂಡಲು ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ಕಲ್ಪಿಸಿಕೊಡಲು ಆರ್‍ಎಫ್‍ಓ ಗೋಪಾಲ್ ಅವರಿಗೆ ಬೋಪಯ್ಯ ಸೂಚನೆ ನೀಡಿದರು.

ಅರಣ್ಯ ಇಲಾಖೆ ಮತ್ತು ಆದಿವಾಸಿ ಜನಾಂಗದ ನಡುವೆ ಭಾರೀ ಸಂಘರ್ಷ ಉಂಟಾಗುವ ಸಾಧ್ಯತೆ ಇದ್ದು ಜಿಲ್ಲಾಧಿಕಾರಿ ಡಾ.ಆರ್. ವಿ.ಡಿಸೋಜಾ, ಉಪವಿಭಾಗಾಧಿಕಾರಿ ನಂಜುಂಡೇ ಗೌಡ ಹಾಗೂ ತಹಶೀಲ್ದಾರ್ ಮಹದೇವಸ್ವಾಮಿ, ಕಂದಾಯ ಇಲಾಖಾಧಿಕಾರಿಗಳ ತುರ್ತು ಸ್ಪಂದನೆಯಿಂದಾಗಿ ಇದೀಗ ಸುಖಾಂತ್ಯ ಕಂಡಿದೆ.

ಸದ್ಯದ ಮಟ್ಟಿಗೆ ಲೈನ್‍ಮನೆ ವಾಪಾಸ್ಸು ಹೋಗಿರಲು ಹೇಳಿದ್ದಾಗ್ಯೂ ಎಲ್ಲರೂ ಸಾಮೂಹಿಕವಾಗಿ ನಾವು 6 ತಿಂಗಳು ಕಳೆದು ಹೋಗಲಾರೆವು, ಇಲ್ಲಿಯೇ ವಾಸ್ತವ್ಯ ಹೂಡುತ್ತೇವೆ ಎಂದು ಶಾಸಕರಲ್ಲಿ ಮನವಿ ಮಾಡಿದ ಪ್ರಸಂಗವೂ ನಡೆಯಿತು.

ಸ್ಥಳಕ್ಕೆ ಐಟಿಡಿಪಿ ಅಧಿಕಾರಿಗಳೂ ಆಗಮಿಸಿದ್ದು, ಪೆÇನ್ನಂಪೇಟೆ ಸಮೀಪ ಹಳ್ಳಿಗಟ್ಟುವಿನಲ್ಲಿ ನಿರಾಶ್ರಿತರಿಗೆ ಗುಡಿಸಲು ಕಟ್ಟಿಕೊಳ್ಳಲು ಫ್ಲಾಸ್ಟಿಕ್ ಹೊದಿಕೆ, ಪೌಷ್ಟಿಕ ಆಹಾರ ಇತ್ಯಾದಿ ಸಹಕಾರ ನೀಡುವಂತೆ ಬೋಪಯ್ಯ ಸೂಚನೆ ನೀಡಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜು ಸುಬ್ರಮಣಿ, ಮಾಲ್ದಾರೆ ಗ್ರಾ.ಪಂ.ಅಧ್ಯಕ್ಷೆ ರಾಣಿ, ಹೊಸೂರು ಆದಿವಾಸಿ ಪ್ರಮುಖ ವೈ.ಕೆ.ರಮೇಶ್, ಬಿಜೆಪಿ ಪ್ರಮುಖ ಮಲ್ಲಂಡ ಮಧುದೇವಯ್ಯ, ಆಪ್ತ ಸಹಾಯಕ ನರಸಿಂಹ ಉಪಸ್ಥಿತರಿದ್ದರು. ಪಾಲಿಬೆಟ್ಟ ತಾ.ಪಂ. ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಅವರು ನಿರಾಶ್ರಿತ ಆದಿವಾಸಿಗಳಿಗೆ ತುರ್ತು ಸ್ಪಂದಿಸಿ ವಸತಿ ನಿರ್ಮಾಣ ಮಾಡಿಕೊಡಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ತಾಲೂಕು ಐಡಿಡಿಪಿ ಅಧಿಕಾರಿ ಚಂದ್ರಶೇಖರ್ ಅವರು ದಿಡ್ದಳ್ಳಿಯಲ್ಲಿಯೇ ಇಂದೂ-ನಾಳೆ ವಾಸ್ತವ್ಯ ಹೂಡುವದಲ್ಲದೆ, ಆಹಾರ ಸಾಮಗ್ರಿಯನ್ನು ಕೂಡಲೇ ವಿತರಿಸಲು ಶಾಸಕರು ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರು ಇದೇ ಸಂದರ್ಭ ಸೂಚನೆ ನೀಡಿದ್ದಾರೆ.