ಗೋಣಿಕೊಪ್ಪಲು, ಡಿ. 22: ದಿಡ್ಡಳ್ಳಿಯ ನಿರಾಶ್ರಿತರ ತೆರವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಲ್ಲ್ಲಾ ರಾಜಕೀಯ ಪಕ್ಷಗಳು ಅನುಕಂಪ ಗಿಟ್ಟಿಸುವ ನಿಟ್ಟಿನಲ್ಲಿ ಅಸಂಬದ್ಧ ಹೇಳಿಕೆ ನೀಡಿ ನೈಜ ಗಿರಿಜನರನ್ನು ಹಾದಿ ತಪ್ಪಿಸುತ್ತಿವೆÉ. ಹೊರಜಿಲ್ಲೆಯ ದುಷ್ಟ ಶಕ್ತಿಗಳೂ ಜೇನುಕುರುಬರು ಹಾಗೂ ಯರವ ಜನಾಂಗದೊಂದಿಗೆ ಸೇರಿಕೊಂಡು ಪ್ರತಿಭಟನೆಯ ನೆಪದಲ್ಲಿ ಜಿಲ್ಲೆಯಲ್ಲಿ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುತ್ತಿವೆÉ. ಇದೀಗ ಉದ್ಭವವಾಗಿರುವ ಸಮಸ್ಯೆಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ ಅಧೀಕ್ಷಕರು ಹಾಗೂ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಇತ್ಯರ್ಥ ಮಾಡಲು ಸಾಧ್ಯವಿದೆ. ಈ ಬಗ್ಗೆ ಯಾವದೇ ರಾಜಕಾರಣಿಗಳ ಹಸ್ತಕ್ಷೇಪಕ್ಕೆ ಅವಕಾಶ ಬೇಡ ಎಂದು ಮಾಜಿ ಜಿಲ್ಲಾ ಪರಿಷತ್ ಅಧ್ಯಕ್ಷ ಜೆ.ಎ.ಕರುಂಬಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಮಾಧ್ಯಮದೊಂದಿಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ಹಿಂದೆ ದಿ.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅರಣ್ಯ ಇಲಾಖೆಯ ಸುಪರ್ದಿಗೆ 1980ರ ದಶಕದಲ್ಲಿ ಜಿಲ್ಲೆಯ ಸುಮಾರು 38 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಸಾಮಾಜಿಕ ಅರಣ್ಯ ಅಭಿವೃದ್ಧಿಗೆ ವಹಿಸಿಕೊಡಲಾಗಿತ್ತು. ಆದರೆ, ಅರಣ್ಯ ಇಲಾಖೆ ಕೇವಲ 3 ಸಾವಿರ ಎಕರೆಯಲ್ಲಿ ಮಾತ್ರ ಸಾಮಾಜಿಕ ಅರಣ್ಯೀಕರಣ ಕೈಗೊಂಡು ಉಳಿಕೆ 35,000 ಎಕರೆ ಪ್ರದೇಶವನ್ನು ಪಾಳುಬಿಟ್ಟಿತ್ತು. ಈ ಹಂತದಲ್ಲಿ ಇಂತಹ ಪ್ರದೇಶದ ಮೇಲೆ ಅಕ್ರಮ ಪ್ರವೇಶ ನಡೆದಿದೆ. ಇದರಲ್ಲಿ 2006 ಕ್ಕೂ ಮುನ್ನ ಅರಣ್ಯ ಹಕ್ಕು ಕಾಯ್ದೆ ಅನ್ವಯ ವಾಸವಿರುವ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಮಾತ್ರ ಪುನರ್ವಸತಿ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಲಿ. ಉಳಿದ ಇತರ ಜನಾಂಗದ ಅಕ್ರಮ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಿ ಎಂದು ಕರುಂಬಯ್ಯ ಹೇಳಿದ್ದಾರೆ. 35 ಸಾವಿರ ಎಕರೆ ಜಾಗದ ಬಗ್ಗೆ ಅರಣ್ಯ - ಕಂದಾಯ ಇಲಾಖಾಧಿಕಾರಿಗಳಲ್ಲಿ ಸಮಗ್ರ ಮಾಹಿತಿ ಇದೆ. ಕೂಡಲೇ ಈ ಬಗ್ಗೆ ಸರ್ವೆ ಕಾರ್ಯ ನಡೆಸಿ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸಲಿ ಎಂದು ಹೇಳಿದರು.
ಜಿಲ್ಲೆಯಲ್ಲಿ ಅರಣ್ಯ-ಕಂದಾಯ ಇಲಾಖೆಯ ಸುಪರ್ದಿಯಲ್ಲಿರುವ ಜಾಗದ ಸಮಗ್ರ ಮರು ಸರ್ವೆ ಆಗಲಿ. ಅಕ್ರಮ ಒತ್ತುವರಿ ಬಗ್ಗೆಯೂ ಮಾಹಿತಿ ಸಂಗ್ರಹಿಸಬೇಕಾಗಿದೆ. ಆದಿವಾಸಿಗಳನ್ನು ಜಿಲ್ಲೆಯಿಂದ ಹೊರಹಾಕುವದು ಬೇಡ. ಇಲ್ಲಿಯೇ ಅರಣ್ಯದಂಚಿನಲ್ಲಿ ಪುನರ್ವಸತಿ ಕಲ್ಪಿಸಲಿ.
ದಿಡ್ಡಳ್ಳಿಯಲ್ಲಿ ಇದೀಗ ಆದಿವಾಸಿಗಳ ಪರ ಪಟ್ಟಭದ್ರ ಹಿತಾಶಕ್ತಿಗಳು ಸೇರಿಕೊಂಡು ಡೊಂಬರಾಟ ನಡೆಸುತ್ತಿದ್ದಾರೆ. ಜಿಲ್ಲೆಯ ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ದಿಡ್ಡಳ್ಳಿ ಸಂರಕ್ಷಿತಾರಣ್ಯದಲ್ಲಿ ವಸತಿ ವ್ಯವಸ್ಥೆಯನ್ನು ಇದೀಗ ಹೋರಾಟ ಮಾಡುತ್ತಿರುವ 577 ಕುಟುಂಬಗಳಿಗೆ ಕಲ್ಪಿಸುವದು ಬೇಡ. ದಿಡ್ಡಳ್ಳಿ ಗಿರಿಜನ ವಸತಿ ಶಾಲೆಯ ಮಕ್ಕಳಿಗೆ ವ್ಯಾಸಂಗಕ್ಕೆ ತೊಂದರೆಯಾಗದ ಹಾಗೆ ಅಧಿಕಾರಿಗಳು ನಿರಾಶ್ರಿತರನ್ನು ಪರ್ಯಾಯ ಜಾಗಕ್ಕೆ ಸ್ಥಳಾಂತರಿಸಲಿ.
ತಿತಿಮತಿ ಅರಣ್ಯ ಇಲಾಖೆಯಲ್ಲಿಯೂ ತಪ್ಪು ನಡೆದಿದೆ. 5 ವರ್ಷ ಮೇಲ್ಪಟ್ಟು ವೀರಾಜಪೇಟೆ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ್ಲಾ ಅರಣ್ಯಾಧಿಕಾರಿಗಳನ್ನೂ ಜಿಲ್ಲೆಯಿಂದ ಹೊರಕ್ಕೆ ವರ್ಗಾವಣೆ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ಕೊಡಗಿನ ಎಲ್ಲಾ ಗ್ರಾ.ಪಂ., ಜಿ.ಪಂ.ಹಾಗೂ ತಾಲೂಕು ಪಂಚಾಯಿತಿ ಮಟ್ಟದಲ್ಲಿ ಆದಿವಾಸಿಗಳ ಬಗ್ಗೆ ಸಮೀಕ್ಷೆ ನಡೆಸಿ, ಗುರುತಿನ ಚೀಟಿ, ಆಧಾರ್ ಕಾರ್ಡ್ ನೀಡುವ ನಿಟ್ಟಿನಲ್ಲಿ ಆಡಳಿತ ಯಂತ್ರ ಚುರುಕಾಗಬೇಕಾಗಿದೆ. ಬಡತನ ರೇಖೆಗಿಂತ ಕಡಿಮೆ ಇರುವವರು, ಯೋಧರು, ಮಾಜಿ ಯೋಧರಿಗೂ ಜಿಲ್ಲೆಯಲ್ಲಿ ವಸತಿ ನಿವೇಶನ ನೀಡುವಂತಾಗಬೇಕು.
ಜಿಲ್ಲೆಯಲ್ಲಿ 5 ಎಕರೆಗಿಂತಲೂ ಅಧಿಕ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕಾಫಿ ತೋಟ ಮಾಲೀಕರು, ಟೀ ತೋಟ ಮಾಲೀಕರು ಎಷ್ಟೇ ಪ್ರಭಾವಿಗಳಾಗಿದ್ದರೂ ತುರ್ತು ತೆರವುಗೊಳಿಸಿ ಜಿಲ್ಲೆಯಲ್ಲಿ ಜನಿಸಿದಂತಹ ವಸತಿ ಹೀನರಿಗೆ ನೀಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.