ವೀರಾಜಪೇಟೆ, ಡಿ. 24: ದಿಡ್ಡಳ್ಳಿ ಹಾಡಿಯಲ್ಲಿ ಗಿರಿಜನರು ಗುಡಿಸಲು ನಿರ್ಮಿಸಿ ಪ್ರತಿಭಟನೆ ನಡೆಸಿ ಮಹಿಳೆ ನಗ್ನವಾಗಿ ಓಡಲು ವೀರಾಜಪೇಟೆ ತಿತಿಮತಿ ಅರಣ್ಯ ವಲಯದ ಅಧಿಕಾರಿಯೊಬ್ಬರು ನೇರ ಹೊಣೆ ಎಂದು ವೀರಾಜಪೇಟೆ ತಾಲೂಕು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮಂಡೇಟ್ಟಿರ ಅನಿಲ್ ಅಯ್ಯಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅನಿಲ್ ಅವರು ತಿತಿಮತಿ ವಲಯಕ್ಕೆ ಸೂರ್ಯಸೇನ್ ಎಸಿಎಫ್ ಆಗಿ ಕಳೆದ 6 ತಿಂಗಳ ಹಿಂದೆ ಅಧಿಕಾರ ವಹಿಸಿಕೊಂಡಾಗ ದಿಡ್ಡಳ್ಳಿ ಹಾಡಿಯಲ್ಲಿ ಕೇವಲ 8 ಮನೆಗಳಿದ್ದವು. ನಂತರದ ದಿನಗಳಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಪ್ರಭಾವಕ್ಕೆ ಹಾಗೂ ಆಮಿಷಕ್ಕೆ ಒಳಗಾಗಿ 577 ಮನೆಗಳು ತಲೆ ಎತ್ತುವಂತೆ ನೋಡಿಕೊಂಡರು. ಪ್ರತಿ ಮನೆಯಿಂದ ಪರೋಕ್ಷವಾಗಿ ಮಾಸಿಕ ವಂತಿಗೆ ನಿರಂತರವಾಗಿ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಿರಿಜನರ ಮನೆಗಳಿಗೆ ಹಿಂಬಾಗಿಲ ಮೂಲಕ ರಕ್ಷಣೆಯನ್ನು ಎಸಿಎಫ್ ನೀಡುತ್ತಿದ್ದರು. ಹಾಡಿಗಳಿಗೆ ರಾತ್ರಿ ಸಮಯದಲ್ಲಿ ಸಂಚರಿಸಿ ಹಾಡಿ ನಿವಾಸಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಡಿಡ್ಡಳ್ಳಿಯಿಂದ ಹೊರಬಂದ ಗಿರಿಜನರೇ ನಮ್ಮ ಬಳಿ ಬಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಅವರ ಅಳಲನ್ನು ಸಾಕ್ಷಿಗಾಗಿ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಅರಣ್ಯದೊಳಗೆ ಗುಡಿಸಲು ನಿರ್ಮಿಸಿ ಗಿರಿಜನರ ಬದುಕಿನ ಜೊತೆಯಲ್ಲಿ ಚೆಲ್ಲಾಟವಾಡಿರುವ ಅಧಿಕಾರಿಯನ್ನು ತನಿಖೆ ನಡೆಸಿ ಅಮಾನತು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವಾರದೊಳಗೆ ಇವರನ್ನು ಅಮಾನತು ಪಡಿಸದಿದ್ದರೆ ಡಿಎಫ್‍ಓ ಕಚೇರಿ ಎದುರು ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಕುಂಞÂರ ಸುನು ಸುಬ್ಬಯ್ಯ, ನಗರ ಸಮಿತಿ ಅಧ್ಯಕ್ಷ ಎಸ್.ಎಚ್ ಮಂಜುನಾಥ್, ಉಪಾಧ್ಯಕ್ಷ ಪಿ.ಎ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.