ಮಡಿಕೇರಿ, ಡಿ.20 : ದಿಡ್ಡಳ್ಳಿಯಲ್ಲಿ ಗಿರಿಜನರ ವಿರುದ್ಧ ಅರಣ್ಯ ಇಲಾಖೆ ನಡೆಸಿರುವ ಅಮಾನವೀಯ ಕಾರ್ಯಾಚರಣೆಯನ್ನು ತೀವ್ರವಾಗಿ ಖಂಡಿಸುವದಾಗಿ ತಿಳಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ನಿರಾಶ್ರಿತರ ಎಲ್ಲಾ ಹೋರಾಟಗಳಿಗೆ ಬೆಂಬಲ ಸೂಚಿಸುವದಾಗಿ ತಿಳಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಅರಣ್ಯ ಅಧಿಕಾರಿಗಳು ತಾವು ನಡೆಸುತ್ತಿರುವ ಅಕ್ರಮಗಳನ್ನು ಮುಚ್ಚಿ ಹಾಕುವದಕ್ಕಾಗಿ ಗಿರಿಜನರಿಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಇಂದಿಗೂ ಕೊಡಗು ಜಿಲ್ಲೆಯಲ್ಲಿ ಜೀತದಾಳು ಪದ್ಧತಿ ಚಾಲ್ತಿಯಲ್ಲಿದ್ದು, ಗಿರಿಜನರನ್ನು ಲೈನ್‍ಮನೆ ಎಂಬ ಕಾರಾಗೃಹದಲ್ಲಿಟ್ಟು ದುಡಿಸಿಕೊಳ್ಳುತ್ತಿದ್ದಾರೆ ಹೊರತು ಕನಿಷ್ಟ ವೇತನ ನೀಡುತ್ತಿಲ್ಲ. ಇಂದಿಗೂ ದಲಿತ ಕಾಲೋನಿ ಹಾಗೂ ಗಿರಿಜನ ಹಾಡಿಗಳಲ್ಲಿ ಮೂಲಭೂತ ಸೌಲಭ್ಯಗಳಿರುವದಿಲ್ಲ ಮತ್ತು ದುರ್ಬಲರಿಗೆ ಬದುಕಲು ಸ್ವಂತ ಸೂರಿಲ್ಲ. ಗಿರಿಜನರು ಕಾಫಿ ತೋಟಗಳಲ್ಲಿ ದುಡಿಯುತ್ತಾ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ದುರ್ಬಲ ಜನ ಸ್ವಂತಿಕೆ ಇಲ್ಲದೆ ಗುಲಾಮರಂತೆ ಬದುಕು ಸಾಗಿಸುತ್ತಿದ್ದಾರೆ. ಮಾರುಕಟ್ಟೆಯಿಂದ ಪಡಿತರ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಕೂಡ ಮಾಲೀಕರನ್ನೇ ಅವಲಂಬಿಸಿರುತ್ತಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಗಿರಿಜನ ಮಕ್ಕಳು ತೀವ್ರ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ದಲಿತರು ಹಾಗೂ ಗಿರಿಜನರ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ದುಡಿಸಿಕೊಳ್ಳಲಾಗುತ್ತಿದೆ. ಇಂದಿಗೂ ಅರಣ್ಯ ತಪ್ಪಲಿನಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡಬೇಕಾದ ದುಸ್ಥಿತಿ ಎದುರಾಗಿದೆ ಎಂದು ವೀರಭದ್ರಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಇನ್ನೂ ಜೀವಂತವಾಗಿರುವ ಜೀತ ಪದ್ಧತಿಯನ್ನು ತೊಲಗಿಸಿ ಗಿರಿಜನರಿಗೆ ಸ್ವಾತಂತ್ರ್ಯವಾಗಿ ಜೀವನ ನಡೆಸಲು ಜಿಲ್ಲಾಡಳಿತ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಿರಾಶ್ರಿತ ದಲಿತರನ್ನು ಗುರುತಿಸಿ ಅವರಿಗೆ ವಸತಿ ಹಾಗೂ ನಿವೇಶನ ನೀಡಬೇಕು ಮತ್ತು ಶಿಕ್ಷಣ ವಂಚಿತ ಗಿರಿಜನ ಮಕ್ಕಳಿಗೆ ಶಿಕ್ಷಣವನ್ನು ನೀಡಲು ಶಿಕ್ಷಣ ಇಲಾಖೆ ಯೋಜನೆ ರೂಪಿಸಬೇಕೆಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಮಾತನಾಡಿ ದಲಿತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕಾಟಾಚಾರದ ಸಭೆಗಳನ್ನು ನಡೆಸುತ್ತಿದ್ದು, ಕಳೆದ 25 ವರ್ಷಗಳಿಂದ ಯಾವದೇ ಭರವಸೆಗಳು ಈಡೇರಿಲ್ಲವೆಂದು ಆರೋಪಿಸಿದರು. ಕೊಡಗಿನಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಮುಂದಿನ ಜನವರಿ ತಿಂಗಳಿನಲ್ಲಿ ತೀವ್ರ ರೀತಿಯ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕಗ್ಗೋಡ್ಲು ಗ್ರಾಮ ಸಂಚಾಲಕರಾದ ದೀಪಕ್ ಉಪಸ್ಥಿತರಿದ್ದರು.