ಗೋಣಿಕೊಪ್ಪಲು, ಡಿ.9: ಚೆನ್ನಯ್ಯನಕೋಟೆ ಗ್ರಾ.ಪಂ.ವ್ಯಾಪ್ತಿಯ ಬಸವನಹಳ್ಳಿ-ದಿಡ್ಡಳ್ಳಿಯಲ್ಲಿ ಅತಿಕ್ರಮಿಸಿಕೊಂಡ ನಿರಾಶ್ರಿತರ ತೆರವು ಪ್ರಕರಣ ಸಂದರ್ಭ ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೊಳಗಾಗಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದ 8 ಮಂದಿ ಜಾಮೀನಿನ ಮೇಲೆ ಡುಗಡೆಗೊಂಡಿದ್ದು, ಅರಣ್ಯ ಇಲಾಖೆಯ ದೌರ್ಜನ್ಯದ ವಿರುದ್ಧ ಹೋರಾಟ ಮಾಡುವದಾಗಿಯೂ, ದೇವಮಚ್ಚಿ ರಕ್ಷಿತಾರಣ್ಯದ ಸುಮಾರು 1926 ಹೆಕ್ಟೇರ್ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ನಡೆದಿರುವ ಮರ ಹನನ, ಕಳ್ಳಬೇಟೆ, ಪ್ರಭಾವಿಗಳ ಅಕ್ರಮ ಒತ್ತುವರಿ, ಶುಂಠಿ ಕೃಷಿ, ಅರಣ್ಯ ಪ್ರದೇಶದಲ್ಲಿ ನಿರಂತರ ನಡೆದಿರುವ ವಿವಿಧ ಅಕ್ರಮ ಕಾಮಗಾರಿ ಬಗ್ಗೆ, ಅರಣ್ಯ ಹಾಗೂ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದ ಕಾನೂನು ಬಾಹಿರ ಚಟುವಟಿಕೆಯನ್ನು ಬಯಲಿಗೆಳೆಯುವದಾಗಿ ಇಂದು ಮಡಿಕೇರಿ ಕಾರಾಗೃಹದಿಂದ ಬಿಡುಗಡೆಗೊಂಡು ದಿಡ್ಡಳ್ಳಿಯಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿಪೆÇನ್ನಪ್ಪ ಅವರೊಂದಿಗೆ ಆಕ್ರೋಶಭರಿತರಾಗಿ ಆದಿವಾಸಿ ಮುಖಂಡರು ಆರೋಪಿಸಿದ ಘಟನೆ ನಡೆದಿದೆ.

ಅಕ್ರಮ ಪ್ರವೇಶ, ಪ್ರಚೋದನೆ ಮುಂತಾದ ಕಠಿಣ ಕಾನೂನು ಕ್ರಮಗಳ ಮೂಲಕ ಬಂಧನಕ್ಕೊಳಗಾಗಿದ್ದ ಚೆನ್ನಯ್ಯನಕೋಟೆ ಗ್ರಾ.ಪಂ.ಸದಸ್ಯ ಜೆ.ಕೆ.ಅಪ್ಪಾಜಿ, ಸಹೋದರಿ ಜೆ.ಕೆ.ಮುತ್ತಮ್ಮ, ಸ್ವಾಮಿಯಪ್ಪ, ಗೌರಿ, ಸರೋಜ, ತಾಯಮ್ಮ, ಗಣೇಶ ಮತ್ತು ಮಲ್ಲ ಅವರುಗಳು ಇಂದು ದಿಡ್ಡಳ್ಳಿ ನಿರಾಶ್ರಿತರಲ್ಲಿಗೆ ತೆರಳಿ ತಮ್ಮ ನೋವನ್ನು ಹೇಳಿಕೊಂಡರು. ಕೆಲವು ಗಿರಿಜನ ಮುಖಂಡರುಗಳು ಪ್ರಭಾವಿಗಳೊಂದಿಗೆ ಹಾಗೂ ಅರಣ್ಯ ಇಲಾಖಾಧಿಕಾರಿ ಗಳೊಂದಿಗೆ ಶಾಮೀಲಾಗಿ ತಮ್ಮ ಬಂಧನಕ್ಕೆ ಕಾರಣರಾಗಿದ್ದಾರೆ. ಅರಣ್ಯ ಇಲಾಖೆ ಪಾರದರ್ಶಕವಾಗಿ ಕ್ರಮ ಕೈಗೊಂಡಿದ್ದಲ್ಲಿ ಇವರುಗಳನ್ನೂ ಬಂಧಿಸಬೇಕಿತ್ತು ಎಂದು ಆರೋಪಿಸಿದರು.

ಜೆ.ಕೆ.ಮುತ್ತಮ್ಮ ಮಾತನಾಡಿ, ತಾನು ಹಾಗೂ ಕೆಲವು ಮಹಿಳೆಯರು ಬೆತ್ತಲೆ ಪ್ರತಿಭಟನೆಗೆ ಮುಂದಾದ ಸಂದರ್ಭ ತಿತಿಮತಿ ವಲಯಾರಣ್ಯಾಧಿಕಾರಿಗಳು ಪೆÇಲೀಸರ ಲಾಠಿಯನ್ನು ಕಿತ್ತುಕೊಂಡು ತಮ್ಮ ಮೇಲೆ ಅಮಾನೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ದೇವಮಚ್ಚಿ ರಕ್ಷಿತಾರಣ್ಯದಲ್ಲಿ ಕೇವಲ 30 ಮಂದಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ರಕ್ಷಕರ ಮೇಲೆ ಪ್ರಭಾವ ಬೀರಿ 2009 ರ ನಂತರ ತಲಾ 3 ರಿಂದ 10 ಎಕರೆಯವರೆಗೂ ಸುಮಾರು 53ಕ್ಕೂ ಅಧಿಕ ವಿವಿಧ ಜನಾಂಗದವರು ಅಕ್ರಮ ಒತ್ತುವರಿ ಮಾಡಿಕೊಂಡಿದ್ದಾರೆ. 2005ರ ನಂತರ ಕಾಫಿ ತೋಟ, ಶುಂಠಿ ಕೃಷಿ ಮಾಡಿರುವವರನ್ನು ತೆರವುಗೊಳಿಸಲಿ. ದೇವಮಚ್ಚಿ ರಕ್ಷಿತಾರಣ್ಯದಲ್ಲಿ ಭಾರೀ ಮರ ಹನನವಾಗಿದೆ, ನಿರಂತರ ಕಳ್ಳಬೇಟೆ ಯಿಂದಾಗಿ ಯಾವದೇ ಕಾಡು ಪ್ರಾಣಿಗಳೂ ಇಲ್ಲಿ ಗೋಚರಿಸುತ್ತಿಲ್ಲ. ದಿಡ್ಡಳ್ಳಿ ವ್ಯಾಪ್ತಿಯಲ್ಲಿ ನಿರಂತರ ಸಿಮೆಂಟ್

(ಮೊದಲ ಪುಟದಿಂದ) ರಸ್ತೆ ಇತ್ಯಾದಿ ಕಾಮಗಾರಿಗಳು ನಡೆಯುತ್ತಿದೆ. ಅರಣ್ಯ ಇಲಾಖೆಯ ಬೆಂಬಲ ದೊಂದಿಗೆ 577 ಮಂದಿ ಗುಡಿಸಲು ನಿರ್ಮಿಸಿಕೊಂಡಿದ್ದು, ಕಳೆದ ಐದು ತಿಂಗಳಿನಿಂದ ಸುಮಾರು ರೂ. 6.40 ಲಕ್ಷ ಮೊತ್ತವನ್ನು ಅರಣ್ಯ ಅಧಿಕಾರಿಗಳು ಹಾಗೂ ಇಲಾಖಾ ಸಿಬ್ಬಂದಿಗಳಿಗೆ ನೀಡಿದ್ದೇವೆ. ಕಾಡು ಬಿದಿರು ಕಡಿಯಲೂ ಇಲಾಖೆಯ ಸಿಬ್ಬಂದಿ ನಮ್ಮಿಂದ ಹಣ ವಸೂಲಿ ಮಾಡಿದ್ದಾರೆ. ಇವರ ಬೆಂಬಲವಿಲ್ಲದೆ ಅರಣ್ಯವನ್ನು ನಮಗೆ ಪ್ರವೇಶಿಸಲು ಸಾಧ್ಯವೆ? ಎಂದು ಗುರುತರ ಆರೋಪ ಮಾಡಿದರು.

ಜೆ.ಕೆ.ಅಪ್ಪಾಜಿ ಮಾತನಾಡಿ, ನಿರಾಶ್ರಿತರ ಪರವಾಗಿ ಹೋರಾಟ ಮಾಡಿದ ತಮ್ಮನ್ನು ಗಿರಿಜನ ಮುಖಂಡರೆಂದು ಹೇಳುವವರಿಂದಲೇ ಬಂಧನಕ್ಕೆ ಒಳಪಡಬೇಕಾಯಿತು. ತಿತಿಮತಿ ಲ್ಯಾಂಪ್ ಸೊಸೈಟಿಯಿಂದ ಗಿರಿಜನ ಫಲಾನುಭವಿಗಳಿಗೆ ಸಿಗಬೇಕಾದ ಸವಲತ್ತುಗಳಲ್ಲಿ ಭಾರೀ ಅಕ್ರಮ ನಡೆದಿದೆ. ಈ ಬಗ್ಗೆ ಪಾರದರ್ಶಕ ತನಿಖೆಯಾಗಬೇಕು. ಅಧ್ಯಕ್ಷ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಪದ್ಮಿನಿಪೆÇನ್ನಪ್ಪ ಅವರಲ್ಲಿ ಒತ್ತಾಯಿಸಿದರಲ್ಲದೆ, ಆದಿವಾಸಿಗಳ ಬಗ್ಗೆ ಇವರಿಗೆ ಕಾಳಜಿ ಇದ್ದಲ್ಲಿ ನಾವು ಜೈಲು ಸೇರಿದ ಮೇಲಾದರೂ ನಿರಾಶ್ರಿತರಲ್ಲಿಗೆ ಭೇಟಿ ನೀಡಿ ನೆರವಿಗೆ ಧಾವಿಸಬಹುದಿತ್ತು ಎಂದರು.

ಇದೇ ಸಂದರ್ಭ ಮಕ್ಕಳಿಗೆ ಹಾಲು ಮತ್ತು ಬ್ರೆಡ್ ವಿತರಿಸಿ ಮಾತನಾಡಿದ ಪದ್ಮಿನಿ ಪೆÇನ್ನಪ್ಪ ಅವರು, ವೀರಾಜಪೇಟೆ ತಾಲೂಕಿನ ವಿವಿಧೆಡೆ ಕಂದಾಯ ಭೂಮಿಯನ್ನು ಗುರುತಿಸಿ ನಿವೇಶನ ನೀಡಲಾಗುವದು. ಬಿ.ಶೆಟ್ಟಿಗೇರಿಯಲ್ಲಿಯೂ ವಸತಿ ಯೋಜನೆಗೆ ಸುಮಾರು 4 ಎಕರೆ ನಿವೇಶನ ಕಾದಿರಿಸಲಾಗಿದ್ದು, ಆಸಕ್ತಿ ಇರುವವರು ತೆರಳಬಹುದು. ವಸತಿಯನ್ನೂ ಹಂತ ಹಂತವಾಗಿ ನಿರ್ಮಿಸಿಕೊಡಲಾಗುವದು. ಯಾವದೇ ಉದ್ವೇಗಕ್ಕೆ ಒಳಗಾಗದೆ ಹಳ್ಳಿಗಟ್ಟುವಿನಲ್ಲಿ ಗುರುತಿಸಲಾದ 7 ಎಕರೆ ಪೈಸಾರಿ ಜಾಗದಲ್ಲಿ ತಾತ್ಕಾಲಿಕ ವಾಸ್ತವ್ಯ ಹೂಡಲು ಮನವಿ ಮಾಡಿದರು. ಅರಣ್ಯ ಸಚಿವರು ಹಾಗೂ ರಾಜ್ಯ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಲ್ಲಿಯೂ ಮಾತನಾಡಿದ್ದು, ಅರಣ್ಯ ಅಂಚಿನಲ್ಲಿಯೂ ನಿವೇಶನ ಗುರುತಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಈ ನಿಟ್ಟಿನಲ್ಲಿ ಸಂಘರ್ಷದ ಹಾದಿ ತುಳಿಯದೆ ಶಾಂತಿಯುತವಾಗಿ ನಡೆದುಕೊಳ್ಳಲು ಮನವಿ ಮಾಡಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಹದೇವ ಸ್ವಾಮಿ ಅವರು ಜೆ.ಕೆ.ಅಪ್ಪಾಜಿ ಹಾಗೂ ಮುತ್ತಮ್ಮ ಅವರನ್ನು ಪ್ರತ್ಯೇಕವಾಗಿ ಕರೆದೊಯ್ದು ಶಾಸಕ ಬೋಪಯ್ಯ ಅವರ ನಿರ್ದೇಶನದಂತೆ ಹಳ್ಳಿಗಟ್ಟು ನಿವೇಶನ ವೀಕ್ಷಣೆ ಮಾಡಿದ್ದು, ತಾತ್ಕಾಲಿಕವಾಗಿ ವಾಸ್ತವ್ಯ ಹೂಡಲು ಎಲ್ಲ್ಲಾ ಪೂರಕ ವ್ಯವಸ್ಥೆ ಮಾಡಲಾಗುವದು ಎಂದು ಹೇಳಿದರು.

ಅರಣ್ಯ ಸಚಿವ ರಮಾನಾಥ ರೈ ಹಾಗೂ ಉಸ್ತುವಾರಿ ಸಚಿವ ಸೀತಾರಾಮ್ ಅವರನ್ನು ಸ್ಥಳಕ್ಕೆ ಕರೆಯಿಸಿ, ನಮ್ಮ ನೋವುಗಳನ್ನು ತಿಳಿಸಿದ ನಂತರವೇ ನಾವೂ ಪೆÇನ್ನಂಪೇಟೆಯತ್ತ ತೆರಳುತ್ತೇವೆ. ಅಲ್ಲಿಯವರೆಗೂ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ ಎಂದು ಅಪ್ಪಾಜಿ ಮತ್ತು ಮುತ್ತಮ್ಮ ಪದ್ಮಿನಿಪೆÇನ್ನಪ್ಪ ಅವರಲ್ಲಿ ಬೇಡಿಕೆ ಮುಂದಿಟ್ಟರು. ತಾ.10 ರಂದು ಬೆಳಿಗ್ಗೆ ಪದ್ಮಿನಿಪೆÇನ್ನಪ್ಪ ಅವರನ್ನು ಮತ್ತೊಮ್ಮೆ ಭೇಟಿ ಮಾಡಿ ನಿರಾಶ್ರಿತ ಮುಖಂಡರು ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ದಿಡ್ಡಳ್ಳಿಗೆ ಕಾಂಗ್ರೆಸ್ ಜಿಲ್ಲಾ ಹಿರಿಯ ಉಪಾಧ್ಯಕ್ಷ ಪಿ.ಕೆ.ಪೆÇನ್ನಪ್ಪ, ಹುದಿಕೇರಿಯ ಪ್ರಮುಖ ಚೆಕ್ಕೇರ ವಾಸು ಕುಟ್ಟಪ್ಪ, ವಕ್ಫ್ ಮಂಡಳಿ ಉಪಾಧ್ಯಕ್ಷ ಎರ್ಮು, ಮಾಲ್ದಾರೆ ವಿಎಸ್‍ಎಸ್‍ಎನ್ ನಿರ್ದೇಶಕ ಪ್ರಭಾಕರ, ಬಿ.ಶೆಟ್ಟಿಗೇರಿ ಗ್ರಾ.ಪಂ.ಅಧ್ಯಕ್ಷ ಕಡೇಮಾಡ ಅಶೋಕ್, ಮಾಲ್ದಾರೆ ಗ್ರಾ.ಪಂ. ಮಾಜಿ ಅಧ್ಯಕ್ಷ ವಿಜು, ಗೋಣಿಕೊಪ್ಪಲು ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಉಪಾಧ್ಯಕ್ಷ ಮುರುಗ, ಕಂದಾಯ ನಿರೀಕ್ಷಕ ಶ್ರೀನಿವಾಸ್, ಸಿದ್ದಾಪುರ ಎಎಸ್‍ಐ ವಸಂತ, ಸಿಬ್ಬಂದಿ ರಾಮಣ್ಣ ನಾಯ್ಕ, ಮಾಲ್ದಾರೆಯ ಬಾವಾ, ಕೆ.ಕೆ. ರಾಮಚಂದ್ರ ಮುಂತಾದವರು ಉಪಸ್ಥಿತರಿದ್ದರು.