ಮಡಿಕೇರಿ, ಡಿ. 28: ದಿಡ್ಡಳ್ಳಿ ಪ್ರಕರಣ ಹಾಗೂ ಹಗರಣದ ಹಿಂದೆ ಐಎಸ್‍ಐಎಸ್ ಮಾವೋವಾದಿಗಳು, ಹವಾಲ ಮತ್ತು ನರ್ಕೋಟಿಕ್ ಮಾಫಿಯಾಗಳ ಕೈಚಳಕವಿದ್ದು, ‘ಘಝ್ವ್ - ತುರ್ - ಹಿಂದ್’ ಮತ್ತು ರೆಡ್ ಕಾರಿಡಾರ್ ರಚನೆಯ ದುರುದ್ದೇಶದಿಂದ ಕೂಡಿದ್ದು, ಎನ್‍ಐಎ ಮತ್ತು ‘ರಾ’ದಿಂದ ತನಿಖೆ ನಡೆಸಬೇಕು. ದೇಶದ್ರೋಹಿ ಕೈವಾಡ ನಡೆಸುವ ಪಾತಿಕಿಗಳನ್ನು ‘ಫೊಟಾ’ ಕಾಯಿದೆಯಡಿ ಬಂದಿಸಬೇಕೆಂದು ಕೋರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹಮಂತ್ರಿ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಹಾಗೂ ಕರ್ನಾಟಕ ರಾಜ್ಯಪಾಲ ವಾಜುಬಾಯಿ ವಾಲಾ ಅವರಿಗೆ ಸಿಎನ್‍ಸಿ ದೂರು ಮತ್ತು ಜ್ಞಾಪನಾ ಪತ್ರ ರವಾನಿಸಿದೆ.
ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ನಕ್ಸಲ್ ಮಾವೋವಾದಿ ‘ಐಎಸ್‍ಐಎಸ್’ ಧಾಳಿಯಿಂದ ಬಚಾವು ಮಾಡಲು (ಪಾರು ಮಾಡಿ) ಒಡನೆ ಬುಡಕಟ್ಟು ಕುಲದ ಅಧಿಕೃತ ಮಾನ್ಯತೆಯನ್ನು ಸಂವಿಧಾನಾತ್ಮಕವಾಗಿ ನೀಡಲು ಕೋರಿ 2017 ಜನವರಿ 5 ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಎನ್‍ಸಿಯಿಂದ ಸತ್ಯಾಗ್ರಹ ನಡೆಯಲಿದೆ.
ದಿಡ್ಡಳ್ಳಿ ಕರ್ಮಕಾಂಡದ ವೇಷದಲ್ಲಿ ಮಾವೋವಾದಿಗಳು ಪ್ರವೇಶಿಸಿದ್ದು, ಉದ್ದೇಶಿತ ‘ಘಝ್ವ್ - ತುರ್ - ಹಿಂದ್’ ಪ್ರತಿಪಾದಕ ಐಎಸ್‍ಐಎಸ್ ಶಕ್ತಿಗಳೊಂದಿಗೆ ಯಾವದೇ ರಾಜಿ ಬೇಡ ಮತ್ತು ಉಪಚಾರವೂ ಬೇಡ. ಅವರಿಗೆ ಭೂ ಪುನರ್ವಸತಿಯ ಪರಿಹಾರವಾಗಲಿ, ಆರ್ಥಿಕ ಪ್ಯಾಕೇಜ್ ಆಗಲಿ ಅಥವಾ ರಾಜಕೀಯ ಪ್ಯಾಕೇಜ್ ಆಗಲಿ ಮಾಡಕೂಡದು. ಬದಲಿಗೆ ಕೊಡಗಿನ ಕೊಡವ ಅಸ್ಮಿತತೆÀಯ ರಕ್ಷಣೆಯೊಂದಿಗೆ ರಾಷ್ಟ್ರದ ಅಖಂಡತೆ ಮತ್ತು ಆಂತರಿಕ ಭದ್ರತೆ ದೃಷ್ಟಿಯಿಂದ 1970ರ ದಶಕದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿದ್ದ ಸಿದ್ಧಾರ್ಥ ಶಂಕರ್ ರೇ ಸರ್ಜಿಕಲ್ ಧಾಳಿ ಮಾಡಿ ಹುಡುಕಿ ನಕ್ಸಲೀಯರನ್ನು ನಿರ್ನಾಮ ಮಾಡಿದ ರೀತಿಯಲ್ಲಿ ಈ ದಿಡ್ಡಳ್ಳಿಗೆ ಬಂದಿರಬಹುದಾದ ದಂಧೆಕೋರ ಮಾವೋವಾದಿ - ಐಎಸ್‍ಐಎಸ್ ಕೂಟವನ್ನು ಸರ್ಜಿಕಲ್ ಆಪರೇಷನ್ ಮೂಲಕ ನಿರ್ಧಾಕ್ಷಿಣ್ಯವಾಗಿ ನಾಶಮಾಡಬೇಕೆಂದು ಸಿಎನ್‍ಸಿ ಆಗ್ರಹಿಸಿದೆ.
ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಆಂತರಿಕ ಭದ್ರತೆ ಹಾಗೂ ಕೊಡವ ಅಸ್ಮಿತತೆಯ ಹಿತದೃಷ್ಟಿಯಿಂದ ಮೊದಲ ಆದ್ಯತೆಗಾಗಿ ಈ ಕೆಲಸವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಿಎನ್‍ಸಿ ಅಧ್ಯಕ್ಷ ಎನ್. ಯು ನಾಚಪ್ಪ ಒತ್ತಾಯಿಸಿದ್ದಾರೆ.