ಮಡಿಕೇರಿ, ಡಿ.16 : ಅರಣ್ಯ ಪ್ರದೇಶದಲ್ಲಿ ಭೂಮಿ ಮಂಜೂರಾಗುವದಿಲ್ಲ ಎನ್ನುವ ಮಾಹಿತಿಯಿದ್ದರೂ ಚೆನ್ನಯ್ಯನ ಕೋಟೆ ಗ್ರಾ.ಪಂ ವ್ಯಾಪ್ತಿಯ ದಿಡ್ಡಳ್ಳಿ ಮೀಸಲು ಅರಣ್ಯ ಪ್ರದೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಅಮಾಯಕರನ್ನು ಕರೆ ತಂದು ಗುಡಿಸಲು ನಿರ್ಮಿಸಲು ಕುಮ್ಮಕ್ಕು ನೀಡುವ ಮೂಲಕ ಗಿರಿಜನರ ಹಾದಿ ತಪ್ಪಿಸುವ ಕೆಲಸವನ್ನು ಕೆಲವರು ಮಾಡಿದ್ದಾರೆ ಎಂದು ಕರ್ನಾಟಕ ಆದಿವಾಸಿ ಬುಡಕಟ್ಟು ಜನರ ಹಕ್ಕುಗಳ ಸಮನ್ವಯ ಸಮಿತಿ ಆರೋಪಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಸಂಚಾಲಕ ವೈ.ಕೆ.ಗಣೇಶ ಜಿಲ್ಲೆಯಲ್ಲಿ ಸುಮಾರು 56 ಸಾವಿರ ಮಂದಿ ಆದಿವಾಸಿಗಳಿದ್ದು, ಶೇ.45 ರಷ್ಟು ಮಂದಿಗೆ ಹಲವಾರು ವರ್ಷಗಳಿಂದ ನೆಲೆ ನಿಂತಿರುವ ಮೂಲಜಾಗದ ಹಕ್ಕು ಪತ್ರವನ್ನೇ ಇಲ್ಲಿಯವರೆಗೆ ನೀಡಿಲ್ಲ್ಲ. ಆದರೆ ಗ್ರಾ.ಪಂ ಸದಸ್ಯರಾಗಿರುವ ಬಿಜೆಪಿಯ ಅಪ್ಪಾಜಿ ಹಾಗೂ ಗಿರಿಜನ ಮುಖಂಡರೆಂದು ಹೇಳಿಕೊಳ್ಳುತ್ತಿರುವ ಮುತ್ತಮ್ಮ ಅವರು ಅರಣ್ಯ ಪ್ರದೇಶಕ್ಕೆ ಅಮಾಯಕರನ್ನು ಕರೆ ತಂದು ಹಾದಿ ತಪ್ಪಿಸಿದ್ದಾರೆ ಎಂದು ಆರೋಪಿಸಿದರು.
ಗುಡಿಸಲುಗಳನ್ನು ನಿರ್ಮಿಸಿ ಕೊಂಡರೆ ಮೂರರಿಂದ ಐದು ಎಕರೆ ಯವರೆಗೆ ಭೂಮಿ ಮಂಜೂರಾಗುತ್ತದೆ ಎಂದು ಜಿಲ್ಲೆಯ ವಿವಿಧ ಭಾಗಗಳ 575 ಕ್ಕೂ ಹೆಚ್ಚು ಕುಟುಂಬಗಳನ್ನು ನಂಬಿಸಿ ಹಣ ವಸೂಲಿ ಮಾಡಲಾಗಿದೆ ಎನ್ನುವ ಆರೋಪವಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಮತ್ತು ಅಪ್ಪಾಜಿ ಹಾಗೂ ಮುತ್ತಮ್ಮ ಅವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಣೇಶ ಒತ್ತಾಯಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳಿಗೆ 6 ಲಕ್ಷ ರೂ.ಗಳಿಗೂ ಅಧಿಕ ಲಂಚವನ್ನು ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅರಣ್ಯ ಭಾಗದಲ್ಲಿ ವಾಸಿಸುವದು ಗಿರಿಜನರÀ ಹಕ್ಕಾಗಿದ್ದರೆ ಅಧಿಕಾರಿಗಳಿಗೆ ಲಂಚ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು ಲಂಚ ನೀಡುವದು ಮತ್ತು ಪಡೆಯುವದು ಎರಡೂ ಕೂಡ ಅಪರಾಧವಾಗಿರುವದರಿಂದ ಈ ಬಗ್ಗೆಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಳೆದ ಆರು ತಿಂಗಳಿನಿಂದ ಸುಮ್ಮನಿದ್ದ ಅರಣ್ಯ ಅಧಿಕಾರಿಗಳು ದಿಢೀರ್ ಆಗಿ ಗುಡಿಸಲುಗಳನ್ನು ತೆರವುಗೊಳಿಸಿರುವದು ಸರಿಯಾದ ಕ್ರಮವಲ್ಲ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿರಾಶ್ರಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕೆಂದರು. ಸ್ಥಳಕ್ಕೆ ರಾಜಕಾರಣಿಗಳು ಭೇಟಿ ನೀಡುವದರಿಂದ ಸಮಸ್ಯೆಗೆ ಪರಿಹಾರ ದೊರೆಯುವದಿಲ್ಲವೆಂದು ಅಭಿಪ್ರಾಯಪಟ್ಟ ವೈ.ಕೆ.ಗಣೇಶ್ ಈಗಾಗಲೇ ಗಿರಿಜನರು ಆಯಾ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಕೋರಿ ನೀಡಿರುವ ಅರ್ಜಿಗಳನ್ನು ವಿಲೇವಾರಿ ಮಾಡಿ ನಿವೇಶನ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಪೈಸಾರಿ ಜಾಗವನ್ನು ಗುರುತಿಸಿ ಹಂಚುವ ಕಾರ್ಯ ಮಾಡಬೇಕೆ ಹೊರತು ತಮ್ಮ ಸ್ವಾರ್ಥ ಸಾಧನೆಗಾಗಿ ಬುಡಕಟ್ಟು ಜನರನ್ನು ಬಳಸಿಕೊಳ್ಳಬಾರದೆಂದರು.
ಆದಿವಾಸಿಗಳು ಕೊಡಗಿನ ಮೂಲನಿವಾಸಿಗಳಾಗಿದ್ದು, ಇಂದಿನ ಆಧುನಿಕ ಯುಗದಲ್ಲೂ ಲೈನ್‍ಮ&divound; Éಗಳಲ್ಲಿ ನರಕ ಯಾತನೆ ಅನುಭವಿಸು ತ್ತಿದ್ದಾರೆ. ಸರಕಾರ ನೀಡುವ ಸೌಲಭ್ಯ ಗಳೆಲ್ಲವೂ ಮಧ್ಯವರ್ತಿಗಳ ಪಾಲಾಗುತ್ತಿದ್ದು, ಇತರರಂತೆ ಬದುಕುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ. ಆದಿವಾಸಿಗಳ ಅಸಹಾಯಕತೆಯ ಲಾಭ ಪಡೆಯುತ್ತಿರುವವÀರಿಂದಾಗಿ ಇಂದು ದಿಡ್ಡಳ್ಳಿಯಲ್ಲಿ ಅಮಾಯಕರು ಹಣ ಮತ್ತು ಕೆಲಸ ಕಳೆದುಕೊಂಡು ಬೀದಿ ಪಾಲಾಗುವಂತಾಗಿದೆ ಎಂದು ಗಣೇಶ ಆರೋಪಿಸಿದರು. ಜಿಲ್ಲೆಯಲ್ಲಿ ಶ್ರೀಮಂತ ವರ್ಗದಿಂದ ಒತ್ತುವರಿ ಯಾಗಿರುವ ಸರಕಾರದ ಭೂಮಿಯನ್ನು ಜಿಲ್ಲಾಡಳಿತ ತಕ್ಷಣ ತೆರವುಗೊಳಿಸಿ ಗಿರಿಜನರಿಗೆ ಹಾಗೂ ಬಡವರಿಗೆ ಹಂಚಬೇಕೆಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಹ ಸಂಚಾಲಕರುಗಳಾದ ರವಿ ಹಾಗೂ ಗುರುರಾಜ್ ಉಪಸ್ಥಿತರಿದ್ದರು.