ವೀರಾಜಪೇಟೆ, ಜು. 28: ಪಂಚಾಯಿತಿ ಸದಸ್ಯನ ದಿಗ್ಬಂಧನ ದಿಂದ ಹೊರ ಬಂದ ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಎಸ್. ಈಶ್ವರಿ ಚುನಾಯಿತೆಯಾದ ಒಂದು ವರ್ಷದ ನಂತರ ಇಂದು ಎರಡನೇ ಮಾಸಿಕ ಸಭೆಗೆ ಹಾಜರಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಅಪರಾಧ ಪ್ರಕರಣಕ್ಕೊಳ ಗಾಗಿರುವ ಪಂಚಾಯಿತಿ ಸದಸ್ಯ ಕೆ.ಎಸ್. ಗೋಪಾಲಕೃಷ್ಣ ಇಂದಿನ ಸಭೆಗೆ ಗೈರು ಹಾಜರಾಗಿದ್ದರು. ಪಂಚಾಯಿತಿಯಲ್ಲಿ ಆರೋಪಿ ಗೋಪಾಲಕೃಷ್ಣ ಸೇರಿದಂತೆ ಕಾಂಗ್ರೆಸ್‍ನ 6 ಮಂದಿ ಹಾಗೂ ಬಿಜೆಪಿಯ 4 ಮಂದಿ ಸದಸ್ಯರು ಇದ್ದಾರೆ.
ಪಂಚಾಯಿತಿಯ ಇಂದಿನ ಸಭೆಗೆ ಹಾಜರಾದ ಸದಸ್ಯರುಗಳು ಸದಸ್ಯ ಗೋಪಾಲಕೃಷ್ಣನ ವರ್ತನೆ ಬಗ್ಗೆ ನಿಂದಿಸಿದರಲ್ಲದೆ ಇನ್ನು ಮುಂದೆ ಪಂಚಾಯಿತಿಯ ಅಭಿವೃದ್ಧಿ ಹಾಗೂ ಮೂಲ ಸೌಲಭ್ಯದ ಜನಪರ ಕಾಮಗಾರಿ ನಿರ್ವಹಿಸಲು ಅಧ್ಯಕ್ಷೆ ಯೊಂದಿಗೆ ಸಹಕಾರ ನೀಡುವದಾಗಿ ಸಭೆಗೆ ತಿಳಿಸಿದರು.
ಗ್ರಾಮ ಪಂಚಾಯಿತಿಯ ಗೌರವ ಉಳಿಸುವ ಸಲುವಾಗಿ ಈಗ ಆರೋಪಿ ಸ್ಥಾನದಲ್ಲಿರುವ ಗೋಪಾಲಕೃಷ್ಣ ಸದಸ್ಯತನಕ್ಕೆ ರಾಜೀನಾಮೆ ನೀಡಿ ಹೊರ ಹೋದರೆ ಪಂಚಾಯಿತಿ ಹಾಗೂ ಸದಸ್ಯರೆಲ್ಲರಿಗೂ ಗೌರವ ದೊರೆಯಲಿದೆ ಎಂದು ಸಭೆಯಲ್ಲಿ ಹಾಜರಿದ್ದ ಕೆಲವು ಸದಸ್ಯರುಗಳು ತಮ್ಮೊಳಗೆ ಚರ್ಚಿಸುತ್ತಿದ್ದುದು ಕಂಡು ಬಂದಿತು.
ಪಂಚಾಯಿತಿಗೆ ಚುನಾಯಿತರಾಗಿ ಅಧ್ಯಕ್ಷ ಪದವಿಯ ಒಂದು ವರ್ಷದ ನಂತರ ಮಾಸಿಕ ಸಭೆಗೆ ಹಾಜರಾದ ಈಶ್ವರಿ ಇಂದಿನ ಸಭೆ ಸೇರಿದಂತೆ ಎರಡು ಸಭೆಗಳ ಮಾಸಿಕ ಗೌರವ ವೇತನ ಹಾಗೂ ದಿನಭತ್ಯೆ ಪಡೆದಿರುವದಾಗಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ ತಿಳಿಸಿದ್ದಾರೆ.
ಕಳೆದ 2015ರಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಈಶ್ವರಿಯ ಹೆಸರು ನಮೂದಿಸಲಾಗಿತ್ತಾದರೂ ಸಮಾರಂಭಕ್ಕೆ ತೆರಳಲು ಗೋಪಾಲಕೃಷ್ಣ ಬಿಡಲಿಲ್ಲ ಎಂದು ಈಶ್ವರಿ ಇಂದು ಮಾಧ್ಯಮದವರೊಂದಿಗೆ ದೂರಿದರು.
ಪಂಚಾಯಿತಿ ಅಧ್ಯಕ್ಷರ ಕೊಠಡಿಯಲ್ಲಿಯೇ ಗೋಪಾಲಕೃಷ್ಣನಿಗೆ ವಿ.ಐ.ಪಿ. ಸದಸ್ಯನಂತೆ ಉಪಚರಿಸಲು ಪ್ರತ್ಯೇಕ ಕುರ್ಚಿ ಹಾಗೂ ಟೇಬಲ್ ಅಳವಡಿಸಲಾಗಿತ್ತು ಎಂದು ಪೂಣಚ್ಚ ತಿಳಿಸಿದ್ದಾರೆ.
ಸದಸ್ಯನ ಆರೋಪ ಗಂಭೀರ
ಪಂಚಾಯಿತಿ ಸದಸ್ಯ ಗೋಪಾಲಕೃಷ್ಣನಿಗೆ ಗ್ರಾಮಾಂತರ ಪೊಲೀಸರು ದಾಖಲಿಸಿರುವ ಕ್ರಿಮಿನಲ್ ಪ್ರಕರಣದ ಜೊತೆಗೆ ಅಧ್ಯಕ್ಷೆÉ ಈಶ್ವರಿ ಸೇರಿದಂತೆ ಅವರ ಕುಟುಂಬವನ್ನು 9 ವರ್ಷಗಳಿಂದ ಜೀತದಾಳುವನ್ನಾಗಿ ತೋಟದಲ್ಲಿ ದುಡಿಸಿದ್ದು, ಜೊತೆಗೆ ಮಕ್ಕಳು ಶಾಲೆಗೆ ಹೋಗುವ ಅರ್ಹತೆ ಪಡೆದಿದ್ದರೂ 6 ವರ್ಷಗಳಿಂದ ಶಾಲೆಗೆ ಹೋಗದಂತೆ ತಡೆದಿರುವದರ ಬಗ್ಗೆಯೂ ಕಣ್ಣಂಗಾಲ ಗ್ರಾಮಸ್ಥರು ಆರೋಪಿಸಿದ್ದು, ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.