*ಗೋಣಿಕೊಪ್ಪಲು, ಸೆ. 8: ದಸರಾ ಆರಂಭಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿದೆ. ಕೂಡಲೇ ಶ್ರಿ ಕಾವೇರಿ ದಸರಾ ಸಮಿತಿಯ ಸಭೆ ಕರೆದು ವಿವಿಧ ಸಮಿತಿಗಳನ್ನು ರಚನೆ ಮಾಡಬೇಕು ಎಂದು ನಗರ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಹಿಂದೆ ಶ್ರೀ ಕಾವೇರಿ ದಸರಾ ಸಮಿತಿ ಗ್ರಾ.ಪಂ.ಯೊಂದಿಗೆ ವಿಲೀನವಾಗುವಾಗ ಸ್ಥಳೀಯ ಗ್ರಾ.ಪಂ ಅಧ್ಯಕ್ಷರೆ ದಸರಾ ಸಮಿತಿಯ ಅಧ್ಯಕ್ಷರಾಗಬೇಕು ಎಂಬ ಒಡಂಬಡಿಕೆ ಆಗಿದೆ. ಈ ನಿಟ್ಟಿನಲ್ಲಿ ಇದೀಗ ಗ್ರಾ.ಪಂ. ಅಧ್ಯಕ್ಷರೇ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಕೂಡಲೇ ದಸರಾ ಸಭೆ ಕರೆದು ವಿವಿಧ ಸಮಿತಿಯನ್ನು ರಚನೆ ಮಾಡಬೇಕಿದೆ. ಪಕ್ಷಾತೀತವಾಗಿ ನಡೆಯುವ ಈ ದಸರಾ ನಾಡಹಬ್ಬಕ್ಕೆ ಸರಕಾರದಿಂದ ಹೆಚ್ಚಿನ ಅನುದಾನ ತರಲು ಸಂಬಂದಪಟ್ಟವರನ್ನು ಒತ್ತಾಯಿಸಬೇಕಿದೆ ಎಂದು ತಿಳಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ತಾ. 9 ರಂದು (ಇಂದು) ನಡೆಯಲಿರುವ ಕರ್ನಾಟಕ ಬಂದ್ಗೆ ಗೋಣಿಕೊಪ್ಪಲು ನಗರ ಬಿ.ಜೆ.ಪಿ ಸ್ಥಾನೀಯ ಸಮಿತಿಯ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದ್ದಾರೆ.