ಮಡಿಕೇರಿ, ಅ. 5: ಮಡಿಕೇರಿ ದಸರಾ ಅಂಗವಾಗಿ ದಸರಾ ಕ್ರೀಡಾ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ ಕ್ರೀಡಾಕೂಟ ಇಂದಿನಿಂದ ಆರಂಭಗೊಂಡಿತು. ಪ್ರಥಮ ದಿನ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮೆರಥಾನ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಈ ಸ್ಪರ್ಧೆಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರು ಚಾಲನೆ ನೀಡಿದರು. ಅತಿಥಿಗಳಾಗಿ ದಸರಾ ಸಮಿತಿಯ ಗೌರವ ಅಧ್ಯಕ್ಷ ‘ಶಕ್ತಿ' ಪ್ರಧಾನ ವ್ಯವಸ್ಥಾಪಕ ಜಿ. ಚಿದ್ವಿಲಾಸ್, ನಗರ ಸಂಚಾರಿ ಠಾಣೆಯ ಎಸ್.ಐ. ಸಂತೋಷ್ ಕಷ್ಯಪ್ ಉದ್ಘಾಟನೆ ಸಂದರ್ಭ ಹಾಜರಿದ್ದರು.
ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದಲ್ಲಿ ಹಾಗೂ ಸಾರ್ವಜನಿಕ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಿತು. ಪುರುಷರಿಗೆ ಜನರಲ್ ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್ ತನಕ 10 ಕಿ.ಮೀ. ಅಂತರದ ಸ್ಪರ್ಧೆ ನಡೆದರೆ ಮಹಿಳೆಯರಿಗೆ 5 ಕಿ.ಮೀ. ಅಂತರದ ಸ್ಪರ್ಧೆ ನಡೆಯಿತು.
ಉದ್ಘಾಟನೆ ಸಂದರ್ಭ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ನಗರಸಭಾ ಸದಸ್ಯರಾದ ಪಿ.ಡಿ. ಪೊನ್ನಪ್ಪ, ತಜಸುಂ, ಕ್ರೀಡಾ ಸಮಿತಿ ಅಧ್ಯಕ್ಷ ಮಂಡೀರ ಸದಾ ಮುದ್ದಪ್ಪ, ಪ್ರಧಾನ ಕಾರ್ಯದರ್ಶಿ ಕಪಿಲ್, ಉಪಾಧ್ಯಕ್ಷ ವೇಣು ಕುಮಾರ್, ಸುನಿಲ್ ನಂಜಪ್ಪ, ವಿನೋದ್ ಕುಮಾರ್ ಮತ್ತಿತರರು ಹಾಜರಿದ್ದರು. ದಸರಾ ಕ್ರೀಡಾಕೂಟದ ಅಧಿಕೃತ ಉದ್ಘಾಟನಾ ಸಮಾರಂಭ ತಾ. 6ರಂದು (ಇಂದು) ಬೆಳಿಗ್ಗೆ 10.30ಕ್ಕೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.