ಮಡಿಕೇರಿ, ಆ. 26: ಮಡಿಕೇರಿ ತಾಲೂಕು ಚೆಂಬು ಗ್ರಾಮದ ಆನ್ಯಾಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಆರಂಭವಾದ ಕುಡುಮ ಶ್ರೀ ಸ್ವಸಹಾಯ ಸಂಘದ ದಶಮಾನೋತ್ಸವ ಕಾರ್ಯಕ್ರಮ ಬಿ. ಕೃಷ್ಣಪ್ಪ ಅವರ ಮನೆಯಲ್ಲಿ ನಡೆಯಿತು. ಚೆಂಬು ಗ್ರಾಮದ ನವಸಾಕ್ಷರೆ ಬಿ.ಸಿ. ಭಾಗೀರಥಿ ಅವರು ಮನೆ ಮನೆಗೆ ಭೇಟಿಕೊಟ್ಟು ಮಹಿಳೆಯರನ್ನು ಒಂದು ಗುಂಪು ಮಾಡಿದಂತಹ ಈ ಸಂಘವು ಆನ್ಯಾಳ ತುಕ್ರ ಅವರ ಮನೆಯಲ್ಲಿ ತುಕ್ರ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟನೆಗೊಂಡಿತು. ನಂತರ ಈ ಸಂಘವು ಹತ್ತು ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡು ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದೀಗ ಹತ್ತು ವರ್ಷ ಪೂರೈಸಿದೆ.
ಈ ಸಂದರ್ಭ ಕುಡುಮ ಶ್ರೀ ಸ್ವಸಹಾಯ ಸಂಘಕ್ಕೆ ಕಾರಣಕರ್ತರಾದ ಬಿ.ಸಿ. ಭಾಗೀರಥಿ ಅವರಿಗೆ ಸಂಘದ ಎಲ್ಲರ ಸಮ್ಮುಖದಲ್ಲಿ ಸನ್ಮಾನ ಮಾಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮಹಿಳೆಯರಲ್ಲಿ ಒಗ್ಗಟ್ಟಿನ ಶಕ್ತಿ ಹೆಚ್ಚಾಗಿ ಮಹಿಳೆಯರು ಮುಂದೆ ಬರಬೇಕು ಮತ್ತು ಅಭಿವೃದ್ಧಿಯತ್ತ ಸಾಗಬೇಕು ಎಂದು ಶುಭ ಹಾರೈಸಿದರು.