ಮಡಿಕೇರಿ, ಡಿ.1 : ಹೊದ್ದೂರು ಪಾಲೆಮಾಡು ವ್ಯಾಪ್ತಿಯಲ್ಲಿ ಸುಮಾರು 75 ಕುಟುಂಬಗಳು ವಾಸಿಸುತ್ತಿದ್ದು, ನಿವೇಶನದ ಹಕ್ಕುಪತ್ರ ನೀಡುವ ಆಮಿಷವೊಡ್ಡಿ ದಲಿತ ಸಂಘಟನೆಗಳ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಪ್ರತಿ ಕಟುಂಬದಿಂದ 30 ರಿಂದ 50 ಸಾವಿರ ರೂ. ಪಡೆದಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಶಾಖೆ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ವಿಭಾಗೀಯ ಸಂಚಾಲಕ ಹೆಚ್.ಎಸ್. ಕೃಷ್ಣಪ್ಪ, ಹೊದ್ದೂರು ಪಾಲೆಮಾಡು ಗ್ರಾಮ ವ್ಯಾಪ್ತಿಯಲ್ಲಿ ಮುಗ್ಧ ಜನರಿಗೆ ನಿವೇಶನ ಕೊಡಿಸು ವದಾಗಿ ಹೇಳಿ, ದಲಿತ ಸಂಘಟನೆಯ ಹೆಸರಿನಲ್ಲಿ ಕೆಲವರು ಹಣ ವಸೂಲಿ ಮಾಡುತ್ತಿದ್ದಾರೆ. ಈ ನಿಯಮ ಬಾಹಿರ ಚಟುವಟಿಕೆ ವಿರುದ್ಧ ಜಿಲ್ಲಾ ಪೆÇಲೀಸ್ ಇಲಾಖೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡು ತಪ್ಪಿತಸ್ಥರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಮುಗ್ಧ ದಲಿತ ಮಂದಿಗೆ ಕಿರುಕುಳ ನೀಡುವ ಬೆಳವಣಿಗೆಯೂ ಈ ಪ್ರದೇಶದಲ್ಲಿ ಕಂಡು ಬಂದಿದ್ದು, ಅಕ್ರಮ ಸಕ್ರಮದಡಿ ಸಲ್ಲಿಸಿರುವ 94 ಸಿ ಅರ್ಜಿಯು ದುರ್ಬಳಕೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಈ ವಂಚನೆಯನ್ನು ಬಯಲಿಗೆಳೆದು ಹಣ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಮಾತನಾಡಿ, ಹೊದ್ದೂರು ಪಾಲೆಮಾಡು ವ್ಯಾಪ್ತಿ ಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆಂದು ಜಾಗವನ್ನು ಮೀಸಲಿಡಲಾಗಿದ್ದು, ಇದರಲ್ಲಿರುವ ಸ್ವಲ್ಪ ಜಾಗ ಸ್ಮಶಾನಕ್ಕೆ ಸೇರಿದ್ದೆಂದು ಕೆಲವರು ಮಾಡುತ್ತಿರುವ ಆರೋಪ ದಲ್ಲಿ ಯಾವದೇ ಹುರುಳಿಲ್ಲವೆಂದು ಸ್ಪಷ್ಟಪಡಿಸಿದರು. ಸರ್ಕಾರ ನಿಯಮ ಬದ್ಧವಾಗಿಯೇ ಕ್ರೀಡಾ ಮೈದಾನಕ್ಕೆ ಜಾಗ ಗುರುತಿಸಿದ್ದು, ಅದೇ ಪ್ರಕಾರ ವಾಗಿ ಮೈದಾನ ನಿರ್ಮಾಣ ಗೊಳ್ಳಲಿ ಎಂದು ಅವರು ಒತ್ತಾಯಿಸಿ ದರು. ಕ್ರೀಡಾಂಗಣಕ್ಕೆ ಗುರುತಿಸಲಾಗಿ ರುವ ಜಾಗದಲ್ಲಿ ಸ್ಮಶಾನ ಇತ್ತೆಂದಾದರೆ ಅದನ್ನು ಸಾಕ್ಷಿ ಸಹಿತ ಸಾಬೀತು ಪಡಿಸಲಿ ಎಂದು ಪರಶುರಾಮ್ ತಿಳಿಸಿದರು.

ದೌರ್ಜನ್ಯ ನಡೆಸಿದರೆ ಪ್ರತಿಭಟನೆ

ಇತ್ತೀಚೆಗೆ ಗೋಣಿಕೊಪ್ಪಲಿನಲ್ಲಿ ಹೊಟೇಲ್ ಮಾಲೀಕರಿಂದ ದೌರ್ಜನ್ಯಕ್ಕೆ ಒಳಗಾಗಿರುವ ದಲಿತ ಯುವಕ ರಘು ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸೂಕ್ತ ಸೆಕ್ಷನ್‍ಗಳನ್ನು ಅಳವಡಿಸಿ ಕ್ರಮ ಕೈಗೊಂಡಿಲ್ಲವೆಂದು ಹೆಚ್.ಎಸ್. ಕೃಷ್ಣಪ್ಪ ಆರೋಪಿಸಿದರು.

ದಲಿತ ದೌರ್ಜನ್ಯಕ್ಕೆ ಕಡಿವಾಣ ಹಾಕಿ, ಸೂಕ್ತ ರಕ್ಷಣೆ ನೀಡದಿದ್ದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವದಾಗಿ ಹೆಚ್.ಎಸ್. ಕೃಷ್ಣಪ್ಪ ಎಚ್ಚರಿಕೆ ನೀಡಿದರು.

ದಲಿತ ಸಂಘರ್ಷ ಸಮಿತಿ ವತಿಯಿಂದ ತಾ.6 ರಂದು ವೀರಾಜಪೇಟೆ ಟೌನ್ ಹಾಲ್‍ನಲ್ಲಿ ವೈದಿಕ ಪರಂಪರೆಯಲ್ಲಿ ಅಸಮಾನತೆಯ ಮೂಲ ನೆಲೆಗಳು ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆಯೆಂದು ಇದೇ ಸಂದರ್ಭ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ರಜನೀಕಾಂತ್, ಹೆಚ್.ಪಿ. ಸತೀಶ್, ವಿದ್ಯಾರ್ಥಿ ಸಂಘಟನೆಯ ಕೌಶಲ್ ಹಾಗೂ ಮಹಿಳಾ ಘಟಕದ ಸಂಚಾಲಕಿ ಎಸ್. ಓಮನ ಉಪಸ್ಥಿತರಿದ್ದರು.