ಮಡಿಕೇರಿ, ಆ. 3: ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎರವರ ಎಸ್. ಈಶ್ವರಿ ಅವರ ಮೇಲೆ ಅದೇ ಗ್ರಾ.ಪಂ. ಸದಸ್ಯ ಕೆ.ಎಸ್. ಗೋಪಾಲಕೃಷ್ಣ ನಡೆಸಿರುವ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ವೈ.ಪಿ. ತಮ್ಮಯ್ಯ, ಗ್ರಾ.ಪಂ. ಅಧ್ಯಕ್ಷೆ ಈಶ್ವರಿ ಅವರ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ಈಶ್ವರಿ ಅವರು ದುರ್ಬಲ ವರ್ಗದವರು ಎನ್ನುವ ಕಾರಣಕ್ಕಾಗಿ ಜೀತದಾಳುವಿನಂತೆ ದುಡಿಸಿಕೊಳ್ಳಲಾಗಿದ್ದು, ಇದು ಜಿಲ್ಲೆಯಲ್ಲಿ ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆಯೆಂದು ಆರೋಪಿಸಿದರು. ಈಶ್ವರಿ ಅವರನ್ನು ದಿಗ್ಬಂಧನಗೊಳಿಸಿ ಜೀತದಾಳುವಿನಂತೆ ದುಡಿಸಿಕೊಂಡು ದೌರ್ಜನ್ಯ ನಡೆಸಿದ ಕೆ.ಎಸ್. ಗೋಪಾಲಕೃಷ್ಣ ಅವರ ಗ್ರಾ.ಪಂ. ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಈಗಾಗಲೇ ಬಂಧನಕ್ಕೆ ಒಳಗಾಗಿರುವ ಅವರಿಗೆ ಯಾವದೇ ಕಾರಣಕ್ಕೂ ಜಾಮೀನು ನೀಡಬಾರದೆಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿಯಲ್ಲಿ ಈಶ್ವರಿ ಅವರಿಗೆ ಆಡಳಿತ ನಡೆಸಲು ಅವಕಾಶ ನೀಡದೆ, ಮಾಸಿಕ ಗೌರವ ಧನವನ್ನು ಕೂಡ ಗೋಪಾಲಕೃಷ್ಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಕೇವಲ ರೂ. 130 ಅನ್ನು ಕೂಲಿಯನ್ನಾಗಿ ನೀಡಿ, ಜೀತದಾಳುವಿನಂತೆ ದುಡಿಸಿ ಕೊಂಡಿದ್ದಾರೆ. ಈಶ್ವರಿ ಅವರ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಗೋಪಾಲಕೃಷ್ಣ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಪಂಚಾಯಿತಿ ಕಡತ ಹಾಗೂ ಚೆಕ್‍ಗಳಿಗೆ ಒತ್ತಾಯ ದಿಂದ ನಿಯಮಬಾಹಿರವಾಗಿ ಸಹಿ ಹಾಕಿಸಿಕೊಂಡು ದುರುಪಯೋಗ ಪಡಿಸಿದ್ದಾರೆ. ಅನೇಕ ಆರೋಪ ಗಳಿದ್ದರೂ ಕೆಲವು ಅಧಿಕಾರಿಗಳು ಪ್ರಕರ ಣವನ್ನು ತಿರುಚಲು ಪ್ರಯತ್ನಿಸಿದ್ದಾರೆ ಎಂದು ತಮ್ಮಯ್ಯ ಆರೋಪಿಸಿದರು.

ದಲಿತ ದೌರ್ಜನ್ಯ ಕಾಯ್ದೆ ಮತ್ತು ಮಹಿಳಾ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು, ಕನಿಷ್ಟ ಕೂಲಿ ಕಾಯ್ದೆಯ ಉಲ್ಲಂಘನೆ, ಜೀತ, ಜೀವ ಬೆದರಿಕೆ ಈ ಆರೋಪದಡಿ ಪ್ರಕರಣವನ್ನು ದಾಖಲಿಸಿಕೊಂಡು ಈಶ್ವರಿಗೆ ನ್ಯಾಯ ಒದಗಿಸಬೇಕು ಮತ್ತು ಕುಟುಂಬಕ್ಕೆ ಪುನರ್‍ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ನಿರ್ಗತಿಕ ಆದಿವಾಸಿಗಳಿಗೆ ಸರ್ಕಾರದ ವತಿಯಿಂದ ವಸತಿ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ಪಂಚಾಯಿತಿಗೆ ಆಯ್ಕೆಯಾಗಿರುವ ಎಲ್ಲಾ ಬುಡಕಟ್ಟು ಸದಸ್ಯರಿಗೆ ಮತ್ತೊಮ್ಮೆ ಆಡಳಿತಾತ್ಮಕ ತರಬೇತಿ ನೀಡಬೇಕೆಂದು ತಮ್ಮಯ್ಯ ಒತ್ತಾಯಿಸಿದರು. ಈ ಬೇಡಿಕೆಗಳಿಗೆ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಲ್ಲಿ ರಾಜ್ಯ ವ್ಯಾಪಿ ಹೋರಾಟ ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರಾದ ಪಿ.ಕೆ. ರವಿ. ವೈ.ಪಿ. ರವಿ, ಪಿ.ಕೆ. ಸಿದ್ದಪ್ಪ, ಜೆ.ಜೆ. ಸೀತೆ ಹಾಗೂ ಪಣಿ ಎರವರ ಗಪ್ಪು ಉಪಸ್ಥಿತರಿದ್ದರು.