ಮಡಿಕೇರಿ, ಜ. 5 : ದಲಿತರ ಪರವಾದ ಬೇಡಿಕೆಗಳಿಗೆ ಜಿಲ್ಲಾಡಳಿತ ಯಾವದೇ ಸ್ಪಂದನೆಯನ್ನು ನೀಡುತ್ತಿಲ್ಲವೆಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಜ.26 ರಂದು ಗಣರಾಜ್ಯೋತ್ಸವವನ್ನು ಬಹಿಷ್ಕರಿಸಿ ನಗರದಲ್ಲಿ ಪ್ರತಿಭಟನೆ ನಡೆಸುವದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 2016 ಆ. 14 ರಂದು ಗಾಂಧಿ ಮೈದಾನದಲ್ಲಿ ಮಧ್ಯ ರಾತ್ರಿ ಪ್ರತಿಭಟನೆ ನಡೆಸಿದ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಮ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ ಮಡಿಕೇರಿ ನಗರದಲ್ಲಿ ಡಾ.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ.5 ಕೋಟಿ ಮಂಜೂರು, ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸೇರಿದಂತೆ ದಲಿತರ ಪರವಾದ ಅನೇಕ ಬೇಡಿಕೆಗಳು ಇಲ್ಲಿಯವರೆಗೆ ಈಡೇರಿಲ್ಲವೆಂದು ಆರೋಪಿಸಿದರು.

ಇದೇ ಕಾರಣಕ್ಕಾಗಿ ತಾ. 26 ರ ಗಣರಾಜ್ಯೋತ್ಸವವನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವದಾಗಿ ತಿಳಿಸಿದರು. ರಾಜ್ಯದ ಬಹುತೇಕ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಪ್ರತಿಮೆಯನ್ನು ಸ್ಥಾಪಿಸಿಲ್ಲ ಮತ್ತು ದಲಿತ ಸಂಘರ್ಷ ಸಮಿತಿಯ 24 ವರ್ಷಗಳ ಈ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಹಲವು ಬಾರಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ನೀಡಲಾಗಿದ್ದರೂ ಯಾವದೇ ಸ್ಪಂದನ ದೊರೆತಿಲ್ಲ. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಸುಭೋದ್ ಯಾದವ್ ಅವರು ನಗರದ ಕಾವೇರಿ ಕಲಾಕ್ಷೇತ್ರದ ಆವರಣದಲ್ಲಿ ಪ್ರತಿಮೆ ನಿರ್ಮಾಣದ ಕುರಿತು ಭರವಸೆ ನೀಡಿದ್ದರು. ಆದರೆ ನಂತರ ಬಂದ ಜಿಲ್ಲಾಧಿಕಾರಿಗಳು ಯಾವದೇ ಕ್ರಮಗಳನ್ನು ಕೈಗೊಂಡಿಲ್ಲವೆಂದು ಆರೋಪಿಸಿದ ದಿವಾಕರ್ ತಾ. 26 ರಂದು ಗದ್ದಿಗೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವದಾಗಿ ಹೇಳಿದರು.

ಕೊಡಗು ಜಿಲ್ಲೆಯ ಕೆಲವು ಲೈನ್ ಮನೆಗಳಲ್ಲಿ ಜೀತ ಪದ್ಧತಿ ಇನ್ನೂ ಕೂಡ ಜೀವಂತವಾಗಿದ್ದು, ದಲಿತರನ್ನು ಜೀತ ಮುಕ್ತಗೊಳಿಸುವಲ್ಲಿಯವರೆಗೆ ಸಂಘಟನೆಯ ಹೋರಾಟ ಮುಂದುವರಿಯಲಿದೆ ಎಂದು ದಿವಾಕರ್ ಎಚ್ಚರಿಕೆ ನೀಡಿದರು.

ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಮಾತನಾಡಿ ಸಾಗುವಳಿ ಭೂಮಿ ಹೊಂದಿರುವವರಿಗೆ ಸಾಗುವಳಿ ಪತ್ರ ಹಾಗೂ ನಿರ್ಗತಿಕರಿಗೆ ವಸತಿ ಸೌಲಭ್ಯ ನೀಡುವಂತೆ ಒತ್ತಾಯಿಸಿದರು. ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಮೆಗಳನ್ನು ಸ್ಥಾಪಿಸಬಾರದೆಂದು ನ್ಯಾಯಾಲಯದ ಆದೇಶವಿರುವ ಕಾರಣ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪನೆ ಸಾಧ್ಯವಾಗುತ್ತಿಲ್ಲವೆಂದು ಜಿಲ್ಲಾಡಳಿತ ಹೇಳಿಕೊಳ್ಳುತ್ತಿದೆ. ಆದರೆ ನ್ಯಾಯಾಲಯದ ಆದೇಶ ಬಂದ ನಂತರ ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇದು ಹೇಗೆ ಸಾಧ್ಯವಾಯಿತು ಎಂದು ವೀರಭದ್ರಯ್ಯ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲೂಕು ಸಂಚಾಲಕ ಹೆಚ್.ಎಲ್.ಕುಮಾರ್, ನಗರ ಸಂಚಾಲಕ ವಸಂತ ಹಾಗೂ ಕಗ್ಗೋಡು ಗ್ರಾಮ ಸಂಚಾಲಕ ದೀಪಕ್ ಉಪಸ್ಥಿತರಿದ್ದರು.