ವೀರಾಜಪೇಟೆ, ಜ. 27: ಜಿಲ್ಲೆಯಲ್ಲಿರುವ ದಲಿತ ಜನಾಂಗ ದವರಿಗೆ ಸರ್ಕಾರದ ಸೌಲತ್ತುಗಳು ನೇರವಾಗಿ ತಲಪುವಂತಾಗಬೇಕು. ಈ ನಿಟ್ಟಿನಲ್ಲಿ ಸಮಿತಿ ಹೋರಾಟ ನಡೆಸಲಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೋಹನ್ ಕುಮಾರ್ ಹೇಳಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ವೀರಾಜಪೇಟೆ ತಾಲೂಕು ಶಾಖೆ ವತಿಯಿಂದ ಸ್ಥಳೀಯ ಪುರಭವನದಲ್ಲಿ ಆಯೋಜಿಸಲಾಗಿದ್ದ ಪದಾಧಿಕಾರಿಗಳ ಆಯ್ಕೆ ಮತ್ತು ತಾಲೂಕು ಸಂಚಾಲಕರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋಹನ್, ಈಗಾಗಲೇ ಜಿಲ್ಲಾಮಟ್ಟದ ಸಮಿತಿ ಆಯ್ಕೆ ಮಾಡಲಾಗಿದ್ದು, ಈಗ ತಾಲೂಕು ಮಟ್ಟದ ಸಮಿತಿಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ನಂತರ ಹಂತ-ಹಂತವಾಗಿ ಕಾರ್ಯಕ್ರಮ ರೂಪಿಸುವ ಮೂಲಕ ದಲಿತರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವದು ಎಂದರು.
ಸಭೆಯಲ್ಲಿ ತಾಲೂಕು ಸಮಿತಿಯ ಸಂಚಾಲಕರಾಗಿ ಹೆಚ್.ಇ. ಬಸವರಾಜು ಅವರನ್ನು ಆಯ್ಕೆ ಮಾಡಿ ಅಧಿಕಾರ ಹಸ್ತಾಂತರ ಮಾಡಲಾಯಿತು.
ಸಮಿತಿಯ ಖಜಾಂಚಿಯಾಗಿ ಹೆಚ್.ಆರ್. ನಿತೀನ್, ಆಂತರಿಕ ಶಿಸ್ತು ತರಬೇತಿಗೆ ಹೆಚ್.ಎನ್. ಅರುಣ್, ಕಾರ್ಮಿಕ ವಿಭಾಗಕ್ಕೆ ಹೆಚ್.ಎಂ. ಮಹಾದೇವ, ಕುಂದು-ಕೊರತೆ ವಿಭಾಗಕ್ಕೆ ಹೆಚ್.ವಿ. ರಾಮ್‍ದಾಸ್. ವಿದ್ಯಾರ್ಥಿ ಒಕ್ಕೂಟಕ್ಕೆ ಆರ್.ಅಶೋಕ್ ಹಾಗೂ ಹೆಚ್.ಎಸ್. ಹನೀಶ್ ಕುಮಾರ್, ಬಿ.ಎಂ. ಭವಿತ್, ಹೆಚ್.ಬಿ. ಲಲಿತ ಅವರುಗಳು ತಾಲೂಕು ಸಮಿತಿಗೆ ಆಯ್ಕೆಗೊಂಡಿದ್ದಾರೆ.
ಈ ಸಂದರ್ಭ ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಮೇಲ್ವಿಚಾರಕ ಗಂಗಯ್ಯ, ಆಂತರಿಕ ಶಿಸ್ತು ತರಬೇತಿ ವಿಭಾಗದ ಗಾಯತ್ರಿ ನರಸಿಂಹ, ಹೆಚ್.ಕೆ. ರಾಚಯ್ಯ, ಎಂ.ಎ. ಮನ್ಸೂರ್, ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.