ಕುಶಾಲನಗರ, ನ. 27: ಹೊಸಪಟ್ಟಣ ಕಾಫಿ ಬೆಳೆಗಾರ ಶಿವಕುಮಾರ್ ಮನೆ ದರೋಡೆ ಪ್ರಕರಣದ ಹಿನ್ನೆಲೆ ಕುಶಾಲನಗರ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ನೀಡಲಾದ ನಾಲ್ವರು ಆರೋಪಿಗಳನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.ಪ್ರಕರಣದ ಪ್ರಮುಖ ಆರೋಪಿ ಕೃಷ್ಣಪ್ಪನ ವಿಚಾರಣೆ ನಡೆಯುತ್ತಿದ್ದು, ಈತನ ಬಳಿಯಿದ್ದ ಲಕ್ಷಾಂತರ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೋರ್ವ ಆರೋಪಿ ಜಲಾಲ್ ಮಂಗಳೂರು ಮೂಲದವನಾಗಿದ್ದು ಈತನನ್ನೂ ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನುಳಿದಂತೆ 5 ಮಂದಿ ಆರೋಪಿಗಳ ಪತ್ತೆ ಕಾರ್ಯಕ್ಕೆ ಜಿಲ್ಲಾ ಅಪರಾಧ ಪತ್ತೆದಳ ಕಾರ್ಯಾಚರಣೆ ನಡೆಸುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಬಳಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಾರೊಂದನ್ನು ಪೊಲೀಸರು ವಶಪಡಿಸಿಕೊಳ್ಳುವ ಹಿನ್ನೆಲೆ ಕ್ರಮ ಕೈಗೊಂಡಿದ್ದಾರೆ. ಪ್ರಕರಣದಲ್ಲಿ ಒಟ್ಟು 7 ಲಕ್ಷ ನಗದು ಸೇರಿದಂತೆ ಚಿನ್ನಾಭರಣ ಮತ್ತು ರಿವಾಲ್ವರ್ ಒಂದನ್ನು ದರೋಡೆಕೋರರು ಅಪಹರಣ ಮಾಡಿರುವದಾಗಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶ್ಲಾಘನೆ: ಹೊಸಪಟ್ಟಣ ಮನೆ ದರೋಡೆ ಘಟನೆ ನಡೆದು ಕೆಲವೇ ಗಂಟೆಗಳ ಅಂತರದಲ್ಲಿ ಕೊಡಗು ಜಿಲ್ಲಾ ಪೊಲೀಸರು ಆರೋಪಿಗಳ ಸುಳಿವು ಪತ್ತೆ ಮಾಡಿದ ಕಾರ್ಯಾಚರಣೆಯನ್ನು ದಕ್ಷಿಣ ವಲಯ ಐಜಿ ಬಿ.ಕೆ. ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಾ. 24 ರಂದು ಬೆಳಿಗ್ಗೆ 7 ಗಂಟೆಗೆ ನಡೆದ ಪ್ರಕರಣ 8.30 ರ ವೇಳೆಗೆ ಕುಶಾಲನಗರ

(ಮೊದಲ ಪುಟದಿಂದ) ಪೊಲೀಸರಿಗೆ ಮಾಹಿತಿ ದೊರೆತಿದ್ದು, ತಕ್ಷಣ ಕಾರ್ಯತತ್ಪರರಾದ ಕುಶಾಲನಗರ ಗ್ರಾಮಾಂತರ, ಸುಂಟಿಕೊಪ್ಪ, ಜಿಲ್ಲಾ ಪೊಲೀಸ್ ಅಪರಾಧ ಪತ್ತೆ ದಳದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳೀಯ ನಾಗರಿಕರ ಸಹಾಯದೊಂದಿಗೆ ಕೆಲವು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ನಾಗರಿಕರು ಕೂಡ ಪ್ರಶಂಸಿಸಿದ್ದಾರೆ.