ಮಡಿಕೇರಿ, ನ. 29: ಕೊಡಗಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಕ್ಕಳ ಕಳ್ಳತನದ ಪ್ರಯತ್ನಗಳು, ರಾತ್ರಿ ವೇಳೆಯಲ್ಲಿ ಒಬ್ಬಂಟಿ ಮಹಿಳೆಯರಿಗೆ ಅಪರಿಚಿತರಿಂದಾಗುತ್ತಿರುವ ಭೀತಿ, ಹಾಡು ಹಗಲೇ ವೆಸ್ಟ್ ನೆಮ್ಮಲೇ ಗ್ರಾಮದಲ್ಲಿ ಶಿಕ್ಷಕಿಯ ಮೇಲೆ ಅತ್ಯಾಚಾರÀ ಮತ್ತು ಕೊಲೆ ಹಾಗೂ ಹೆದ್ದಾರಿಗಳಲ್ಲಿ ನಡೆಯುತ್ತಿರುವ ದರೋಡೆ ಪ್ರಕರಣಗಳಿಗೆ ರಾಜ್ಯ ಗೃಹ ಇಲಾಖೆಯ ನಿರ್ಲಕ್ಷ್ಯವೂ ಒಂದು ಕಾರಣವೆಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಒಂದು ವಾರದಿಂದ ಈಚೆಗೆ ಕಳೆದವಾರ ನಂಜರಾಯಪಟ್ಟಣದಲ್ಲಿ ಶಿವಕುಮಾರ ಎಂಬವರ ಮನೆಗೆ ದರೋಡೆಕೋರರು ಧಾಳಿ ಮಾಡಿ ಮನೆ ಮಾಲೀಕರನ್ನು ಕಟ್ಟಿ ಹಾಕಿ ರಿವಾಲ್ವಾರ್ ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ ಪ್ರಕರಣ, ಶ್ರೀಮಂಗಲದಲ್ಲಿ ಕಾರು ತಡೆದು ನಗದು ದೋಚಿರುವ ಪ್ರಕರಣ, ಕೊಡಗಿನ ಕಾಫಿ ತೋಟಗಳಲ್ಲಿ ಅಡಗಿಕೊಂಡು ಸಂಜೆ ವೇಳೆ ತಿರುಗಾಡುವ ಮಂದಿ, ಹಿಂಬಾಲಿಸುವ ಅಪರಿಚಿತರು, ಶಾಲಾ ವಠಾರದಲ್ಲಿ ಅಪರಿಚಿತರ ಪ್ರತ್ಯಕ್ಷವಾಗುವದು ಇಂತಹ ಘಟನೆಗಳು ದಿನೇ ದಿನೇ ನಡೆಯುತ್ತಿದ್ದು, ಇದನ್ನು ಭೇದಿಸಲು ಪೊಲೀಸ್ ಇಲಾಖೆಗೆ ಸೂಕ್ತ ಸಿಬ್ಬಂದಿಗಳ ಕೊರತೆಯಿರುವದು ಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿ ಯಾವದೇ ಅಹಿತಕರ ಘಟನೆ ನಡೆದರೂ ತಕ್ಷಣ ಕಾರ್ಯಪ್ರವೃತ್ತರಾಗುವ ಎಸ್.ಪಿ. ರಾಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಹಿಡಿಯುವಲ್ಲಿ ಸಫಲತೆಯನ್ನು ಕಾಣುತ್ತಿದ್ದಾರೆ. ಆದರೆ ಕೊಡಗು ಪೊಲೀಸರಿಗೆ ಇದೊಂದು ತಲೆ ನೋವಾಗಿದೆ. ರಾತ್ರಿ ವೇಳೆ ಅರಣ್ಯ ಪ್ರದೇಶಗಳಲ್ಲಿ ಹಾಗೂ ಕಾಫಿ ತೋಟಗಳಲ್ಲಿ ಆಗಿಂದಾಗ್ಗೆ ಪ್ರತ್ಯಕ್ಷವಾಗುವ ಆಗಂತುಕರನ್ನು ಸೆರೆ ಹಿಡಿಯಲು ಪೊಲೀಸ್ ಇಲಾಖೆ ನಿದ್ದೆ ಬಿಟ್ಟು ಪ್ರಯತ್ನಿಸುತ್ತಿದೆ.

ಈ ಬಗ್ಗೆ ರಾಜ್ಯದ ಗೃಹ ಮಂತ್ರಿಗಳು ಗಮನಹರಿಸಬೇಕಿದ್ದು, ತಕ್ಷಣ ಕೊಡಗಿಗೆ ಭೇಟಿ ಕೂಡ ನೀಡಬೇಕಿದೆ ಎಂದಿರುವ ಸಂಕೇತ್ ಪೂವಯ್ಯ, ಪೊಲೀಸರಿಗೆ ಸುಸಜ್ಜಿತವಾದ ವಾಹನದ ವ್ಯವಸ್ಥೆಯೊಂದಿಗೆ ರಾತ್ರಿ ಹೊತ್ತು ಗಸ್ತು ತಿರುಗುವ ಸಿಬ್ಬಂದಿಗಳಿಗೆ ಪೂರಕವಾದ ಅತ್ಯಾಧುನಿಕ ಸಲಕರಣೆಗಳನ್ನೊಳಗೊಂಡ ವಾಹನ ಹಾಗೂ ಶಸ್ತ್ರಾಸ್ತ್ರ ನೀಡಬೇಕಿದ್ದು, ರಾತ್ರಿ ವೇಳೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೂ ಕೂಡ ಜೀವಭಯದ ಭೀತಿಯಿದೆ. ಕೊಡಗಿನಲ್ಲಿ ಪೊಲೀಸ್ ಸಿಬ್ಬಂದಿಗಳ ಕೊರತೆಯಿದ್ದು ತಕ್ಷಣ ತಾತ್ಕಾಲಿಕವಾಗಿ ಹೆಚ್ಚುವರಿ ಪೊಲೀಸ್ ನಿಯೋಜನೆ ಅವಶ್ಯವಿದೆ.