ಮಡಿಕೇರಿ, ನ. 24: ಗೋಮಾತೆ ಪ್ರತಿಷ್ಠಾಪನೆಯಾಗದೇ ಇರುವ ದೈವಸ್ವರೂಪಿಯಾಗಿದ್ದು, ಇಂಥ ಮಾತೆಗೆ ರಥೋತ್ಸವ ಸ್ವರೂಪದಲ್ಲಿ ಮಂಗಲ ಗೋ ಯಾತ್ರೆ ಆಯೋಜಿತ ವಾಗಿದೆ. ಮನೆಯಲ್ಲಿ ಗೋ ಸಾಕಲು ಅಸಾಧ್ಯವಾದಲ್ಲಿ ಪ್ರತಿಯೋರ್ವರೂ ಗೋ ದತ್ತು ಸ್ವೀಕರಿಸುವ ಮೂಲಕವಾದರೂ ಗೋವಿನ ಋಣ ತೀರಿಸಿ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಶ್ರೀಗಳು ಕರೆ ನೀಡಿದ್ದಾರೆ.

ನಗರದ ಆಂಜನೇಯ ದೇವಾಲಯದ ಆವರಣದಲ್ಲಿ ಆಯೋಜಿತ ಮಂಗಲ ಗೋ ಯಾತ್ರೆಯ 24ನೇ ಸುರಭಿ ಸಂತ ಸಮಾಗಮದಲ್ಲಿ ಆಶೀರ್ವಚನ ನೀಡಿದ ರಾಘವೇಶ್ವರ ಮಹಾ ಸ್ವಾಮೀಜಿ, ಗೋವುಗಳು ನೀಡುವ ಹಾಲು, ಮೊಸರು ಮಾನವರನ್ನು ತಂಪಾಗಿರಿಸಿ ದ್ದಾವೆಯಾದರೂ ಮಾನವರು ಮಾತ್ರ ಗೋವನ್ನು ತಂಪಾಗಿಟ್ಟಿಲ್ಲ. ಗೋಮಾತೆಗೆ ತಾಪ ಹೆಚ್ಚುತ್ತಲೇ ಇದೆ. ಇದನ್ನು ತಪ್ಪಿಸಲೆಂದೇ ಮಂಗಲ ಗೋ ಯಾತ್ರೆ ಆಯೋಜಿತವಾಗಿದೆ ಎಂದರು.

ಎಲ್ಲಾ ದೇವರಿಗೂ ರಥೋತ್ಸವ ಇದೆಯಾದರೂ ಎಲ್ಲಾ ದೇವರನ್ನು ಹೊಂದಿರುವ ಚಲಿಸುವ ದೇವಾಲಯ ದಂತಿರುವ ಗೋ ಮಾತೆಗೇಕೆ ರಥೋತ್ಸವ ಇಲ್ಲ ಎಂದು ಪ್ರಶ್ನಿಸಿದ ಸ್ವಾಮೀಜಿಗಳು, ಪ್ರತಿಷ್ಠಾಪನೆಯಾಗದೇ ದೈವಸಾನಿಧÀ್ಯ ಹೊಂದಿರುವ ದೇವರು ಗೋ ಮಾತೆಯಾಗಿದ್ದಾಳೆ ಎಂದು ವಿಶ್ಲೇಷಿಸಿದರು. ಗೋ ಮಾತೆಗೆ ರಥೋತ್ಸವವಾಗಿ ಈ ಮಂಗಲ ಗೋ ಯಾತ್ರೆ ಸಾಗುತ್ತಿದೆ ಎಂದು ಹೇಳಿದ ಸ್ವಾಮೀಜಿಗಳು, ಎಲ್ಲಾ ದೇವರಿಗಿಂತ ದೊಡ್ಡ ದೇವರಾಗಿರುವ ಗೋ ಮಾತೆಗೆ ಈ ಮೂಲಕ ರಥೋತ್ಸವ ನಡೆಯುತ್ತಿದೆ ಎಂದರು. ದೂರದಲ್ಲಿರುವ ದೇವರನ್ನು ಪೂಜಿಸುವ ಮುನ್ನ ಮನೆಯಂಗಳ ದಲ್ಲಿಯೇ ಇರುವ ಗೋ ಮಾತೆಗೆ ಪ್ರತಿಯೋರ್ವರ ಪೂಜೆ ಸಲ್ಲಬೇಕೆಂದು ಕರೆ ನೀಡಿದ ಸ್ವಾಮೀಜಿ, ಪ್ರತೀ ವರ್ಷವೂ ಮಂಗಲ ಗೋಯಾತ್ರೆ ಆಯೋಜಿತವಾಗಲಿದೆ ಎಂದು ಪ್ರಕಟಿಸಿದರು.

ಮಾನವನ ದೇಹವೇ ಗೋಮಯ ಎಂದು ವಿಶ್ಲೇಷಿಸಿದ ಸ್ವಾಮೀಜಿ, ಕುಟುಂಬವೊಂದು ಜೀವಿತಾವದಿ üಯಲ್ಲಿ ಸ್ವೀಕರಿಸಿರುವ ಗೋ ಉತ್ಪನ್ನಗಳನ್ನು ಹೋಲಿಸಿದರೆ ಅಲ್ಲಿ ಕ್ಷೀರ ಸಾಗರವೇ ಕಂಡು ಬಂದಂತಾಗುತ್ತದೆ. ಗೋವಿಗೆ ಮಾನವನ ಸೇವೆ ಸಲ್ಲದಿದ್ದರೇ ಆತನ ಹುಟ್ಟಿನ ಉದ್ದೇಶವೇ ನಿರರ್ಥಕ ಎಂದೂ ಅಭಿಪ್ರಾಯಪಟ್ಟರು. ಹಾಲು ಅಮೃತ, ಗೋ ಮೂತ್ರ ಚಿನ್ನ ದಂತಿದ್ದರೆ, ಗೋಮಯ ವಜ್ರದಂತೆ ಎಂದೂ ಸ್ವಾಮೀಜಿ ವ್ಯಾಖ್ಯಾನಿಸಿದರು.

ಕೊಡ್ಲಿಪೇಟೆಯ ಕಲ್ಲುಮಠದ ಶ್ರೀ ಮಹಾಂತ ಸ್ವಾಮಿ ಮಾತನಾಡಿ, ಕಾವೇರಿ ನಾಡಿಗೆ ಮಂಗಲ ಗೋ ಯಾತ್ರೆ ಬಂದಿರುವದು ಕೊಡಗಿನ ಜನರಲ್ಲಿ ಗೋ ಸಂಪತ್ತಿನ ಬಗ್ಗೆ ಜಾಗೃತಿ ಮೂಡಿಸಿದೆ. ಭಾರತ ಕೃಷಿ ಮತ್ತು ಋಷಿ ಪ್ರಧಾನವಾದ ದೇಶವಾಗಿದೆ. ಸಂತ ಮಹಾಂತರ, ಋಷಿಗಳ ಬೀಡಾಗಿರುವ ನಾಡಿನಲ್ಲಿ ಸಂಸ್ಕøತಿ ಮರೆಯಾಗುತ್ತಿದೆ. ಮೊಬೈಲ್‍ನಂಥ ಆಧುನಿಕ ಯಂತ್ರ ಸಂಸ್ಕøತಿ, ಜನಜೀವನ ಕ್ರಮ ಸೇರಿದಂತೆ ಹಲವಾರು ವಿಚಾರಗಳನ್ನು ಮಾಯ ಮಾಡಿದೆ. ವೈಜ್ಞಾನಿಕ ಆವಿಷ್ಕಾರಗಳು ನಮ್ಮ ಸಂಸ್ಕøತಿಗೆ ಧಕ್ಕೆ ತಂದಿದೆ. ಮನೆಗೆ ಬಂದವರನ್ನು ಕುಟುಂಬದವರೊಂದಿಗೆ ಮನೆಯ ಗೋವು ಕ್ಷೇಮವೇ ಎಂದು ವಿಚಾರಿಸುವ ಕಾಲ ಬದಲಾಗಿ ಈಗ ಕೇವಲ ಜನ್ -ಧನ್ ಬಗ್ಗೆ ವಿಚಾರಿಸುವಂತ ಕಾಲ ಎದುರಾಗಿದೆ. ಮಕ್ಕಳಿಗೆ ಚಿತ್ರದ ಮೂಲಕ ಗೋವು ತೋರಿಸಬೇಕಾದ ದಿನಗಳು ಬಂದಿರುವದು ವಿಷಾದನೀಯ ಎಂದರು.

ಸೋಮವಾರಪೇಟೆಯ ವಿರಕ್ತಮಠದ ಶ್ರೀ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, ಪ್ರಕೃತಿ ಮಾತೆಯ ಮಡಿಲಲ್ಲಿ ನಮ್ಮನ್ನು ಪೂಜ್ಯ ಮಾತೆ ಹೆತ್ತರೆ , ಸಾಕಿ ಸಲಹಿದವಳು ಗೋ ಮಾತೆ. ಹೀಗಾಗಿ ಈ ಮಾತೆಯರಲ್ಲಿ ಬೇಧ ಭಾವ ಇರಬಾರದು ಎಂದರು. ರಾಸಾಯನಿಕ ಬಳಕೆಯಿಂದಾಗಿ ಜೀವನವೇ ದುಸ್ತರವಾಗುತ್ತಿದೆ. ಗೋವಿನಲ್ಲಿ 33 ಕೋಟಿ ದೇವಾನುದೇವತೆಗಳು ನೆಲೆಸಿದ್ದಾರೆ ಎಂದರು .

ಕೊಡ್ಲಿಪೇಟೆ ಕಲ್ಲಳ್ಳಿ ಮಠಾಧೀಶ ಶ್ರೀ ರುದ್ರಮುನಿ ಸ್ವಾಮೀಜಿ, ಮಾತನಾಡಿ, ಹಸುವಿಲ್ಲದ ಊರು ನರಕಸದೃಶವಾಗುತ್ತದೆ. ಭೂಮಿಯಲ್ಲಿ ಗೋವುಗಳಿಲ್ಲದೇ ಹೋಗಿದ್ದರೆ ಭೂಮಿ ಬರಡಾದೀತು ಎಂದು ಎಚ್ಚರಿಸಿದರು. ಗೋ ಮಾತೆಯ ರಕ್ಷಣೆ ಪ್ರತಿಯೋರ್ವರ ಜವಾಬ್ದಾರಿ ಯಾಗಿರಲಿ ಎಂದು ಹೇಳಿದ ಸ್ವಾಮೀಜಿ, ಮನೆಯಲ್ಲಿನ ಸದಸ್ಯರಿಗೆ ಯಾವ ರೀತಿ ರಕ್ಷಣೆ ನೀಡಲಾಗುತ್ತದೆಯೋ ಅಂತೆಯೇ ಗೋ ಮಾತೆಯ ಸಂರಕ್ಷಣೆಗೂ ಮುಂದಾಗಿ ಎಂದು ಅವರು ಕರೆ ನೀಡಿದರು.

ಶನಿವಾರಸಂತೆ ಮುದ್ದಿನ ಕಟ್ಟೆ ಮಠದ ಶ್ರೀ ಸಿದ್ದಲಿಂಗ ಶಿವಾ ಚಾರ್ಯ ಸ್ವಾಮೀಜಿ ಮಾತನಾಡಿ, ತೆರಿಗೆ ಕಟ್ಟದೇ ಸಿಗುವ ಅಮೂಲ್ಯ ಪಾನ ಎಂದರೆ ಹಸುವಿನ ಹಾಲಾಗಿದೆ ಎಂದು ವಿಶ್ಲೇಷಿಸಿದರಲ್ಲದೇ, ತಾಯಂದಿರು ಧಾರಾವಾಹಿಗಳಲ್ಲಿ ಮುಳುಗಿ ಹೋದರೆ, ಪುರುಷರು ದಾರುವಾಹದಲ್ಲಿ ಮುಳುಗಿದ್ದಾರೆ. ಪುರುಷರು ಹಾಲಿಗೆ ನೀಡುವ ಪ್ರಾಮುಖ್ಯತೆಗಿಂತ ಆಲ್ಕೋಹಾಲ್‍ಗೆ ಹೆಚ್ಚು ಆದ್ಯತೆ ನೀಡುತ್ತಿರುವದು ವಿಷಾದನೀಯ ಎಂದರು. ನಮ್ಮ ಕಾಮನೆಗಳನ್ನು ಪೂರೈಸುವ ವಿಶ್ವಾಸ ಗೋವಿನಲ್ಲಿ ನಿಮಗಿರಲಿ. ಹೀಗಾಗಿಯೇ ಅದು ಕಾಮಧೇನು. ಅದೇ ಮಾನವರಾದ ನಮ್ಮ ಶರೀರ ಪ್ರಾಣ ಕಳೆದುಕೊಂಡರೆ ಹರಿದು ಹೋದ ಚಪ್ಪಲಿಗೆ ಇರುವ ಬೆಲೆಯೂ ಆ ದೇಹಕ್ಕಿಲ್ಲ ಎಂಬದನ್ನು ಮರೆಯದಿರಿ ಎಂದು ಅವರು ಹೇಳಿದರು.

ತಲಕಾವೇರಿಯ ಆನಂದತೀರ್ಥ ಸ್ವಾಮೀಜಿ ಮಾತನಾಡಿ, ಗೋ ಹತ್ಯೆ ಮಹಾ ಪಾಪವಾಗಿದ್ದು, ಈವರೆಗೆ ಆಧಿಕಾರ ನಡೆಸಿದ್ದವರು ಗೋಹತ್ಯೆ ನಿಷೇಧಿಸದ ಪಾಪಕ್ಕೆ ಗುರಿಯಾಗಿದ್ದಾರೆ ಎಂದರು. ಬ್ರಿಟೀಷರ ಕಾಲದಲ್ಲಿಯೇ ಕೊಡಗಿನಲ್ಲಿ ಗೋ ಹತ್ಯೆ ನಿಷೇಧಿಸಲ್ಪಟ್ಟಿತ್ತು ಎಂದು ಅವರು ಸ್ಮರಿಸಿದರು. ಇದು ಕೇವಲ ಗೋಯಾತ್ರೆಯಾಗಿರದೇ ಮಂಗಲ ಗೋ ಯಾತ್ರಾ ಸಂಗ್ರಾಮ ಎಂದು ಶ್ಲಾಘಿಸಿದರು. ಗೋ ಯಾತ್ರೆಯ ಫಲವಾಗಿ ಗೋ ಹತ್ಯೆ ನಿಷೇಧಿಸುವಂತಾಗಲಿ ಎಂದು ಆನಂದತೀರ್ಥರು ಆಶಿಸಿದರು.

ಸಮಿತಿ ಸದಸ್ಯ ಮಿತ್ತೂರು ಈಶ್ವರ ಭಟ್, ಬೇರೆಲ್ಲಾ ಕಡೆಗಳಿಗಿಂತ ಕೊಡಗಿನಲ್ಲಿ ಗೋಯಾತ್ರೆಗೆ ಎರಡು ದಿನ ಮೀಸಲಿಟ್ಟಿದ್ದು ಹರ್ಷ ತಂದಿದೆ ಎಂದರು.

ಜಿಲ್ಲಾ ಸಮಿತಿ ಸಂಚಾಲಕ ಚಿ.ನಾ.ಸೋಮೇಶ್ ಮಾತನಾಡಿ, ಕಾವೇರಿ ನಾಡಿನ ಜನತೆ ತಲತಲಾಂತರಗಳಿಂದ ಹೊಸ ನಗರದ ಶ್ರೀ ಮಠದೊಂದಿಗೆ ಗುರುತಿಸಿ ಕೊಂಡಿದ್ದಾರೆ. ಕೊಡಗಿನಲ್ಲಿ ಮನೆ ತುಂಬಾ ಮಕ್ಕಳು, ಕೊಟ್ಟಿಗೆ ತುಂಬಾ ಹಸುಗಳು ತುಂಬಿಕೊಂಡಿದ್ದ ಕಾಲವೊಂದಿತ್ತು. ಹೀಗಾಗಿ ಕೊಡಗು ತಂಪಾಗಿದ್ದ ದಿನಗಳಿದ್ದವು. ಆದರೆ, ನಿಸರ್ಗದ ಮೇಲಿನ ದೌರ್ಜನ್ಯ ದಿಂದಾಗಿ ನಿಸರ್ಗ ದೊಂದಿಗೇ ಗೋ ಸಂತತಿಯೂ ಕಣ್ಮರೆಯಾಗಿದೆ ಎಂದು ವಿಷಾದಿಸಿದರು.

ಉತ್ತರ ಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರಸ್ವಾಮೀಜಿ, ತಲಕಾವೇರಿಯ ಆನಂದತೀರ್ಥ ಸ್ವಾಮೀಜಿ, ಕಣ್ಣೂರಿನ ಆನಂದ ಭವನದ ಕೃಷ್ಣಾನಂದ ಸ್ವಾಮೀಜಿ, ಗೋ ಯಾತ್ರೆ ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ.ಎಸ್.ದೇವಯ್ಯ, ಸಮಿತಿ ಪ್ರಮುಖರಾದ ಕೇಶವಪ್ರಸಾದ್ ಮುಳಿಯ, ಡಾ. ಆರ್. ರಾಜಾರಾಮ್, ಹಾಲೇರಿ ಸುಬ್ರಮಣ್ಯ ಭಟ್, ಮೋದೂರು ಶಿವ ಶಂಕರ್ ಸೇರಿದಂತೆ ಸಮಿತಿ ಸದಸ್ಯರು, ವಿವಿಧ ಸಂಘಗಳ ಪ್ರಮುಖರು, ಭಕ್ತರು ಪಾಲ್ಗೊಂಡಿದ್ದರು. ಸಿಂಧೂರ ಸ್ವಾಮಿ ನಿರೂಪಿಸಿದರು.

ಮಡಿಕೇರಿ ಪ್ರಾಂತ್ಯದ ಉತ್ತಮ ಗೋಪಾಲಕರಾದ ಕಂಬಿಬಾಣೆಯ ಓಂಕಾರ್ ಎಸ್ಟೇಟ್‍ನ ಕೆ.ಎಸ್. ಭಟ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಗೋರಕ್ಷಾ ಪ್ರತಿಜ್ಞೆ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಸಂದೇಶದ ನೃತ್ಯ ರೂಪಕವನ್ನು ಕೃಷ್ಣವೇಣಿ ಪ್ರಸಾದ್ ನಿರ್ದೇಶನದಲ್ಲಿ ಮಕ್ಕಳು ಪ್ರದರ್ಶಿಸಿದರು. ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಾಲಾ ಮಕ್ಕಳಿಂದ ಧರಣಿ ಮಂಡಲ ನೃತ್ಯರೂಪಕವೂ ಆಕರ್ಷಣೆ ಗಳಿಸಿತು. ಗೋ ಗೀತೆಯನ್ನೂ ಈ ಸಂದರ್ಭ ಹಾಡಲಾಯಿತು.

ಮಂಗಲ ಗೋ ಯಾತ್ರೆ ಜನರ ಮನ ಸೆಳೆಯಿತು. ಗೋಪ್ರದರ್ಶನ, ಗೋಚಿತ್ರ, ಗೋ ಸಂಸ್ಕøತಿ, ಗೋ ಕಲಾ, ಗೋ ವಾಹನ, ಗೋ ಶಕ್ತಿ, ಗವ್ಯ ಉತ್ಪನ್ನಗಳು, ಗೋ ಸಂಸತ್ತು, ಗೋ ಸಂತವಾಣಿ, ಗೋ ತುಲಾಭಾರದ 10 ರಥಗಳೂ ಮಹಾನಂದಿ ಸ್ವರೂಪದಲ್ಲಿನ ಗೋ ರಥ ಮುಂಚೂಣಿಯೊಂದಿಗೆ ಮಡಿಕೇರಿಯ ಮುಖ್ಯರಸ್ತೆಯಲ್ಲಿ ಸಾಗಿಬಂತು.