ಮಡಿಕೇರಿ, ಜ. 5: ಒಂಬತ್ತು ತಿಂಗಳ ವಯಸ್ಸಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ದಡಾರ- ರುಬೆಲ್ಲಾ ಲಸಿಕೆ ಹಾಕುವ ಅಭಿಯಾನ ಫೆಬ್ರವರಿ 7 ರಿಂದ ಮೂರು ವಾರಗಳ ಕಾಲ ಜರುಗುವದರಿಂದ, ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಡಾರ ರುಬೆಲ್ಲಾ ಅಭಿಯಾನ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.

ದಡಾರ ರುಬೆಲ್ಲಾ ಅಭಿಯಾನ ಬಗ್ಗೆ ರೇಡಿಯೋ ಕಾರ್ಯಕ್ರಮ ನೀಡುವದು, ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ದಡಾರ ರುಬೆಲ್ಲಾ ಅಭಿಯಾನ ಬಗ್ಗೆ ಹಲವು ಮಾಹಿತಿ ನೀಡಿ ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರ ಹೆಚ್ಚಿನದ್ದಾಗಿದೆ ಎಂದು ಅವರು ಕೋರಿದರು.

ಆರ್‍ಸಿಹೆಚ್ ಅಧಿಕಾರಿ ಡಾ. ನಿಲೇಶ್ ಈಶಾನ್ಯ ಏಷ್ಯಾ ಖಂಡದ ದೇಶಗಳ ಸಂಕಲ್ಪದಂತೆ ಭಾರತ ದೇಶವು 2020 ವೇಳೆಗೆ ದಡಾರ ನಿರ್ಮೂಲನೆ ಹಾಗೂ ರುಬೆಲ್ಲಾ ನಿಯಂತ್ರಣಕ್ಕೆ ಮುಂದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ 2017 ರ ಫೆಬ್ರವರಿ ತಿಂಗಳಲ್ಲಿ ದಡಾರ-ರುಬೆಲ್ಲಾ ಲಸಿಕಾ ಅಭಿಯಾನ ಆಯೋಜಿಸಲಾಗುತ್ತಿದೆ. ಈ ಲಸಿಕಾ ಅಭಿಯಾನದಲ್ಲಿ 9 ತಿಂಗಳ ವಯಸ್ಸಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಒಂದು ದಡಾರ-ರುಬೆಲ್ಲಾ ಲಸಿಕೆ ನೀಡಬೇಕಿದೆ ಎಂದು ಮಾಹಿತಿ ನೀಡಿದರು. ಫೆಬ್ರವರಿ 7 ರಿಂದ ಚಾಲನೆಗೊಳ್ಳುವ ಈ ಅಭಿಯಾನದ ಮೊದಲನೇ ವಾರದಲ್ಲಿ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಆಯೋಜಿಸಬೇಕಿದೆ. ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಇನ್ನಿತರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರ ಆರಂಭಿಸಬೇಕಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ದಡಾರ-ರುಬೆಲ್ಲಾ ಅಭಿಯಾನ ಮಹತ್ವ ಕುರಿತು ಮಾಹಿತಿ ನೀಡಿ, 9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳು ದಡಾರ-ರುಬೆಲ್ಲಾ ಲಸಿಕೆಯಿಂದ ವಂಚಿತರಾಗದಂತೆ ಪೋಷಕರ ಮನವೊಲಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಬೇಕಿದೆ ಎಂದು ಕೋರಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಯಾದೇವಿ ಗಲಗಲಿ, ಜಿಲ್ಲಾ ವಿಕಲಚೇತರ ಅಧಿಕಾರಿ ಜಗದೀಶ್, ಕಾರ್ಮಿಕ ಇಲಾಖೆ, ಇತರೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗಳಿಂದ ದಡಾರ ರುಬೆಲ್ಲಾ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಅಜೀಜ್, ಡಾ. ಶಿವಕುಮಾರ್, ಡಾ. ಸದಾಶಿವಪ್ಪ, ಡಾ. ಕೃಷ್ಣಾನಂದ, ತಾಲೂಕು ವೈದ್ಯಾಧಿಕಾರಿಗಳು, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶುಶ್ರೂಷಕರು, ಎ.ಎನ್.ಎಂ.ಗಳು ಇತರರು ಇದ್ದರು.

ಮತ್ತಷ್ಟು ಮಾಹಿತಿ: ಎಲ್ಲಾ ಶಾಲೆಗಳಲ್ಲಿ ನೋಂದಣಿಯಾದ ಮಕ್ಕಳ ಸಂಖ್ಯೆ ನೀಡುವದು (ಸರ್ಕಾರಿ, ಅರೆ ಸರ್ಕಾರಿ, ಖಾಸಗಿ, ವಸತಿ ಶಾಲೆ). ದಡಾರ-ರುಬೆಲ್ಲಾ ಅಭಿಯಾನದ ಬಗ್ಗೆ ಶಾಲೆಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸುವದು. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಅಭಿಯಾನದ ಕುರಿತು ಮಾಹಿತಿ ನೀಡುವದು. ಈ ಕಾರ್ಯಕ್ರಮ ಕುರಿತಂತೆ ತರಗತಿ ಶಿಕ್ಷಕರುಗಳಿಗೆ ಹೆಚ್ಚಿನ ಮಾಹಿತಿ ನೀಡುವದು. ಈ ಅಭಿಯಾನದ ಬಗ್ಗೆ ಎಲ್ಲಾ ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಸಭೆ ನಡೆಸಿ ಮಾಹಿತಿ ನೀಡುವದು. ಲಸಿಕೆ ಕುರಿತಾಗಿ ಪೋಷಕರು ಮತ್ತು ಮಕ್ಕಳಲ್ಲಿ ಹೆಚ್ಚಿನ ಜ್ಞಾನ ಮೂಡಿಸುವದರೊಂದಿಗೆ ಲಸಿಕೆಯ ಮಹತ್ವವನ್ನು ತಿಳಿಸುವದು. ಕ್ಷೇತ್ರ ಶಿಕ್ಷಣಾಧಿಕಾರಿ, ಅವರನ್ನು ಒಳಗೊಂಡು ದಡಾರ-ರುಬೆಲ್ಲಾ ಅಭಿಯಾನದ ಬಗ್ಗೆ ಜಿಲ್ಲಾಮಟ್ಟದ ಸಭೆ ನಡೆಸುವದು. ಈ ಅಭಿಯಾನದ ಬಗ್ಗೆ ಖಾಸಗಿ ಶಾಲೆಗಳ ಸಂಸ್ಥೆಗಳಿಗೆ ಮಾಹಿತಿ ನೀಡುವದು. ಎಲ್ಲಾ ನರ್ಸರಿ ಶಾಲೆ, ಶಿಶು ಮಂದಿರಗಳನ್ನು ಈ ಅಭಿಯಾನಕ್ಕೆ ಸೇರಿಸಿಕೊಳ್ಳುವದು.

ಅಭಿಯಾನದ ಸಮಯದಲ್ಲಿ ಎಲ್ಲಾ ಶಾಲೆಗಳಲ್ಲಿ ಲಸಿಕೆ ಸತ್ರಗಳನ್ನು ನಿರ್ಮಿಸಿ ಲಸಿಕೆ ನೀಡಲು ಅನುವು ಮಾಡಿ ಕೊಡುವದು. ಅಭಿಯಾನದ ಬಗ್ಗೆ ಅರಿವು ಮೂಡಿಸಲು ಪೂರ್ವ ಭಾವಿಯಾಗಿ ಎಲ್ಲಾ ಶಾಲೆಗಳಲ್ಲಿ ಮೆರವಣಿಗೆ ಮತ್ತು ಜಾಥಾ ನಡೆಸುವದು. ಅಭಿಯಾನದಲ್ಲಿ ಒಳಗೊಂಡ ಶಾಲೆ ಮತ್ತು ಮಕ್ಕಳ ಮೇಲ್ವಿಚಾರಣೆ ನಡೆಸುವದು. ಅಭಿಯಾನದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಲ್ಲಿ ಆ ಶಾಲಾ ಸಂಸ್ಥೆಯ ಮಕ್ಕಳ ಪಟ್ಟಿ ತಯಾರಿಸಿ ಇಲಾಖೆಗೆ ನೀಡುವದು.

ಜಿಲ್ಲಾ ಮಟ್ಟದ ಇಲಾಖಾ ಅಧಿಕಾರಿಗಳಾದ ಶಿಶು ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿ ಮತ್ತು ಮೇಲ್ವಿಚಾರಕರಿಗೆ ಅಭಿಯಾನದ ಕುರಿತು ಅರಿವು ಮೂಡಿಸುವದು. ಅಂಗನವಾಡಿಯಲ್ಲಿ ನೋಂದಣಿಯಾದ ಮಕ್ಕಳ ಸಂಖ್ಯೆಯನ್ನು ಸೂಕ್ಷ್ಮ ಕ್ರಿಯಾ ಯೋಜನೆ ತಯಾರಿಸಲು ನೀಡುವದು. ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ತಾಯಂದಿರಿಗೆ ಅಭಿಯಾನದ ಬಗ್ಗೆ ಮಾಹಿತಿ ನೀಡುವದು. ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ಸಭೆಯಲ್ಲಿ ಅಭಿಯಾನದ ಬಗ್ಗೆ ಅರಿವು ಮೂಡಿಸುವದು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮೀಸಲ್ಸ್-ರುಬೆಲ್ಲಾ ಚುಚ್ಚುಮದ್ದು ಶಿಬಿರ ನಡೆಸಲು ಕ್ರಮಕೈಗೊಳ್ಳುವದು. ಶಿಶು ಅಭಿವೃದ್ಧಿ ಕಾರ್ಯಕ್ರಮ ಅಧಿಕಾರಿಯವರು ಮತ್ತು ಮೇಲ್ವಿಚಾರಕರು ಅಭಿಯಾನದ ಅವಧಿಯಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆ ನಡೆಸುವದು. ಅಭಿಯಾನದ ಪೂರ್ವಭಾವಿಯಾಗಿ ಲಸಿಕಾ ಕಾರ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳುವದು. ತಮ್ಮ ವ್ಯಾಪ್ತಿಯಲ್ಲಿ ಬರುವ 15 ವರ್ಷದೊಳಗಿನ ಮಕ್ಕಳನ್ನು ಹೊಂದಿದ ಎಲ್ಲಾ ಶಾಲೆಗಳ ಪಟ್ಟಿಯನ್ನು ನೀಡುವದು. (ವಸತಿ ಶಾಲೆ, ಅನಾಥಶ್ರಮಗಳನ್ನೊಳಗೊಂಡು) ದಡಾರ-ರುಬೆಲ್ಲಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವದು. ಎಲ್ಲಾ 15 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವದರ ಮೂಲಕ ಬೆಂಬಲಿಸುವದು.

ತಮ್ಮ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರಿಗೆ ದಡಾರ-ರುಬೆಲ್ಲಾ 2017 ಅಭಿಯಾನ ಅನುಷ್ಠಾನದ ಬಗ್ಗೆ ಮಾಹಿತಿ ನೀಡುವದು. ಕಾರ್ಮಿಕರ 9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ದಡಾರ-ರುಬೆಲ್ಲಾ ಲಸಿಕೆ ನೀಡುವಂತೆ ಕ್ರಮ ವಹಿಸುವದು ಹಾಗೂ ಈ ಕಾರ್ಯಕ್ರಮದ ಬಗ್ಗೆ ಮೇಲ್ವಿಚಾರಣೆ ಮತ್ತು ಪರಿಶೀಲನೆ ಮಾಡುವದು.

ದಡಾರ-ರುಬೆಲ್ಲಾ 2017 ಅಭಿಯಾನ ಅನುಷ್ಠಾನದ ಬಗ್ಗೆ ಸಾರ್ವಜನಿಕರಿಗೆ ಮನಮುಟ್ಟುವಂತೆ ಮಾಹಿತಿ ನೀಡುವದು. ತಮ್ಮ ವ್ಯಾಪ್ತಿಯ ತಾಲೂಕು ಆರೋಗ್ಯಾಧಿಕಾರಿಯೊಂದಿಗೆ ಸಮನ್ವಯ ಸಭೆ ನಡೆಸಿ ಎಲ್ಲಾ ಕೊಳಚೆ ಪ್ರದೇಶ, ಅಪಾರ್ಟ್‍ಮೆಂಟ್, ಕಟ್ಟಡ ಕಾರ್ಮಿಕರು, ರಸ್ತೆ ಕಾರ್ಮಿಕರು, ವಲಸೆಗಾರರ 9 ತಿಂಗಳಿನಿಂದ 15 ವರ್ಷದೊಳಗಿನ ಮಕ್ಕಳಿಗೆ ದಡಾರ-ರುಬೆಲ್ಲಾ ಲಸಿಕೆ ನೀಡುವಂತೆ ಕ್ರಮವಹಿಸುವದು.

ದಡಾರ-ರುಬೆಲ್ಲಾ 2017 ಅಭಿಯಾನದ ಬಗ್ಗೆ ಎಲ್ಲಾ ಐ.ಎ.ಪಿ. ಸದಸ್ಯರುಗಳಿಗೆ ಮಾಹಿತಿ ನೀಡುವದು. ಈ ಮೊದಲು ಎಂಎಂಆರ್ ಲಸಿಕೆಯನ್ನು ಹಾಕಿಸಿದ್ದರೂ 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳ ಲಸಿಕೆ ಪಡೆದುಕೊಳ್ಳುವಂತೆ ಪೋಷಕರ ಮನವೊಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವದು.

ದಡಾರ-ರುಬೆಲ್ಲಾ 2017 ಅಭಿಯಾನದ ಬಗ್ಗೆ ಎಲ್ಲಾ ಐ.ಎ.ಪಿ ಸದಸ್ಯರುಗಳಿಗೆ ಮಾಹಿತಿ ನೀಡುವುದು. ಈ ಮೊದಲು ಎಂಎಂಆರ್ ಲಸಿಕೆಯನ್ನು ಹಾಕಿಸಿದ್ದರೂ 9 ತಿಂಗಳಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳ ಲಸಿಕೆ ಪಡೆದುಕೊಳ್ಳುವಂತೆ ಪೋಷಕರ ಮನವೊಲಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವದು.